ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯ ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್.
ಬೆಂಗಳೂರು ಜೂನ್ 1: ಕೋವಿಡ್ ಎರಡನೇ ಅಲೆಯ ಕಾರಣ ತೊಂದರೆಗೀಡಾಗಿರುವ ರಾಜ್ಯದ ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳಿಗೆ ಅಗತ್ಯವಿರುವ ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಭರವಸೆ ನೀಡಿದರು. ಇಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಕೈಗಾರಿಕಾ ಸಂಘಟನೆಗಳಾದ ಕಾಸಿಯಾ, ಎಫ್‌ಐಸಿಸಿಐ ಮತ್ತು ಎಫ್‌ಕೆಸಿಸಿಐ ನ ಅಧ್ಯಕ್ಷರನ್ನು ಭೇಟಿ ಮಾಡಿ ವಿಸ್ತ್ರುತವಾಗಿ ಚರ್ಚೆ ನಡೆಸಿದರು. ಕೋವಿಡ್ ಎರಡನೇ ಅಲೆಯು ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ತನ್ನದೇ ಆದಂತಹ ಸವಾಲುಗಳನ್ನು ಹುಟ್ಟು ಹಾಕಿದೆ. ರಾಜ್ಯದ ಮತ್ತು ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡುವ ಈ ಉದ್ಯಮಗಳು ಲಾಕ್‌ಡೌನ್ ನಿಂದಾಗಿ ತೀವ್ರ ತೊಂದರೆಗೆ ಈಡಾಗಿವೆ. ಈ ನಿಟ್ಟಿನಲ್ಲಿ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ನಮ್ಮ ಗಮನ ಸೆಳೆದಿದ್ದಾರೆ. ಅಲ್ಲದೆ, ವಿದ್ಯುತ್, ತೆರಿಗೆ ಸೇರಿದಂತೆ ಕೆಲವು ರಿಯಾಯತಿಗಳನ್ನು ಕೇಳಿದ್ದಾರೆ ಎಂದರು. ಕೈಗಾರಿಕಾ ಕ್ಷೇತ್ರದ ಮತ್ತೆ ತನ್ನ ಸಂಪೂರ್ಣ ಕಾರ್ಯಾಚರಣೆ ನಡೆಸಲು ಲಾಕ್‌ಡೌನ್ ನಂತರವೂ ಸಾಕಷ್ಟು ಸಮಯ ಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ನೀಡಿರುವ ಈ ಮನವಿಯ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಅಗತ್ಯ ತೀರ್ಮಾನಗಳನ್ನು ತಗೆದುಕೊಳ್ಳುವುದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು. ಎಫ್‌ಐಸಿಸಿಐ ಕರ್ನಾಟಕ ಅಧ್ಯಕ್ಷರಾದ ಉಲ್ಲಾಸ್ ಕಾಮತ್, ಎಫ್‌ಕೆಸಿಸಿಐ ಅಧ್ಯಕ್ಷರಾದ ಪೆರಿಕಾಲ್ ಎಂ ಸುಂದರಮ್, ಕಾಸಿಯಾ ಅಧ್ಯಕ್ಷರಾದ ಕೆ ಬಿ ಅರಸಪ್ಪ ಉಪಸ್ಥಿತರಿದ್ದರು. ಕೈಗಾರಿಕಾ ಸಂಘ ಸಂಸ್ಥೆಗಳ ಪರವಾಗಿ ಇದೇ ಸಂಧರ್ಭದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ವರದಿ – ಹರೀಶ ಶೇಟ್ಟಿ ಬೆಂಗಳೂರು