ಹುಬ್ಬಳ್ಳಿ ನಗರದಲ್ಲಿ ಅಕ್ರಮ ಬೀಜ ದಾಸ್ತಾನು 131 ಕ್ವಿಂಟಲ್ ಬೀಜ ವಶ ವಶ ಪಡಿಸಿಕೊಂಡ ಅಧಿಕಾರಿಗಳು
ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಬೀಜ–ರಸಗೊಬ್ಬರ ದಾಸ್ತಾನು ಕೇಂದ್ರದ ಮೇಲೆ ದಾಳಿ ನಡೆಸಿದ ಜಿಲ್ಲೆಯ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ₹63 ಲಕ್ಷ ಮೌಲ್ಯದ ಅಕ್ರಮ ದಾಸ್ತಾನು ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. ಕೃಷಿ ಜಾಗೃತ ದಳದ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಬಮ್ಮಿಗಟ್ಟಿ ಮತ್ತು ವಿಠಲ್‌ರಾವ್ ನೇತೃತ್ವದ ತಂಡ ದಾಳಿ ನಡೆಸಿ, ವಿವಿಧ ಬಗೆಯ 131 ಕ್ವಿಂಟಲ್ ಬೀಜ ವಶಕ್ಕೆ ಪಡೆದು, ಗೋದಾಮಿನ ಮಾಲೀಕರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ವಸಾಹತು ಕೇಂದ್ರದ 8ನೇ ಅಡ್ಡ ರಸ್ತೆಯಲ್ಲಿರುವ ರಾಜೇಂದ್ರ ಅಗ್ರಿ ಪ್ರೈ.ಲಿ. ಗೋದಾಮಿನಲ್ಲಿ ₹6 ಲಕ್ಷ ಮೌಲ್ಯದ 800 ಬಿ.ಟಿ ಹತ್ತಿ, ಹೈ ಈಲ್ಡ್ ಅಗ್ರಿ ಪ್ರೈ.ಲಿ. ಗೋದಾಮಿನಲ್ಲಿ ₹14 ಲಕ್ಷ ಮೌಲ್ಯದ 70 ಕ್ವಿಂಟಲ್ ಗೋವಿನ ಜೋಳ ಹಾಗೂ ನವಭಾರತ ಸೀಡ್ಸ್ ಗೋದಾಮಿನಲ್ಲಿ 35.68 ಕ್ವಿಂಟಲ್ ಬಿ.ಟಿ ಹತ್ತಿ, 5.58 ಕ್ವಿಂಟಲ್ ಜೋಳ ಹಾಗೂ 16.92 ಕ್ವಿಂಟಲ್ ಹೈಬ್ರೀಡ್ ಸಜ್ಜೆ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ₹63 ಲಕ್ಷ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬೀಜ, ರಸಗೊಬ್ಬರವನ್ನು ಹೋಲ್‌ಸೆಲ್ ಆಗಿ ಮಾರಾಟ ಮಾಡುವ ಮಧ್ಯವರ್ತಿಗಳು ಅನುಮತಿ ಪಡೆಯದೆ ಗೋದಾಮಿನಲ್ಲಿ ಬೀಜಗಳನ್ನು ಸಂಗ್ರಹಿಸಿದ್ದರು. ಹೈದರಾಬಾದ್ ಮತ್ತು ಮಹಾರಾಷ್ಟ್ರಗಳಿಂದ ಖರೀದಿಸಿದ ಬೀಜಗಳನ್ನು ಇವರು ಸ್ಥಳೀಯ ಮಾರುಕಟ್ಟೆಗೆ ಪೂರೈಸುತ್ತಿದ್ದರು. ಈಗಾಗಲೇ ಕೆಲವು ಅಂಗಡಿಗಳಿಗೆ ಈ ಬೀಜಗಳನ್ನೇ ವಿತರಿಸಿರುವುದಾಗಿ ತಿಳಿದು ಬಂದಿದೆ. ಅಕ್ರಮ ದಾಸ್ತಾನು ಮಾಡಿರುವ ಬೀಜಗಳನ್ನು ವಶಪಡಿಸಿಕೊಂಡಿದ್ದು, ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ರಾಘವೇಂದ್ರ ಬಮ್ಮಿಗಟ್ಟಿ ತಿಳಿಸಿದರು.
ವರದಿ – ಅಮಾಜಪ್ಪ ಹೆಚ್ ಜುಮಲಾಪೂರ