ಸರ್ಕಾರ ಎಲ್ಲಾ ಕಲಾವಿದರ ನೆರವಿಗೆ ಬರಬೇಕಿದೆ ಬಡ ಕಲಾವಿದರ ನೆರವಿಗೆ ಧಾವಿಸಿದ ಬಾಲನಟಿ ಭೈರವಿ,
ಕೊರೋನಾ೨ ಅಲೆಯ ಸಂದರ್ಭ ಚಿತ್ರೀಕರಣ ವಿಲ್ಲದೆ ಅಸಹಾಯಕ ಪರಿಸ್ಥಿತಿಗೆ ತಲುಪಿರುವ ಎಲ್ಲಾ ಕಲಾವಿದರ ನೆರವಿಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಕೇವಲ ಗುರುತಿನ ಚೀಟಿ ಹೊಂದಿರುವ ಕಲಾವಿದರಿಗೆ ನೆರವು ನೀಡಿದರೆ ಗುರುತಿನ ಚೀಟಿ ಮಾಡಿಸಲು ಹಣವಿಲ್ಲದಂತಹ ಸಹಕಲಾವಿದರ ಪಾಡೇನಾಗಬೇಕು ಎಂದು ಪತ್ರಿಕಾ ಸರಬರಾಜುದಾರ ಹುಲುಕುಂಟೆ ಮಹೇಶ್ ತಿಳಿಸಿದರು. ಅವರು ಇಂದು ಬೆಳಿಗ್ಗೆ 7-30 ಗಂಟೆಗೆ ಬಾಲನಟಿ ಭೈರವಿಯ ಕುಟುಂಬದ ವತಿಯಿಂದ ಭೈರವಿ ಅಭಿಮಾನಿಗಳ ಬಳಗ ಹಾಗೂ ಚಂಪಾ ಚಿತ್ರತಂಡದ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಸುಮಾರು 50 ಕ್ಕೂ ಹೆಚ್ಚು ಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಲಾವಿದ ವೆಶೇಷ ರಂಜನ್ ಮಾತನಾಡಿ ಗುರುತಿನ ಚೀಟಿ ಮಾಡಿಸುವಷ್ಟು ಹಣ ನಮ್ಮ ಬಳಿ ಇದ್ದಿದ್ದರೆ ನಾವೇಕೆ ಸರ್ಕಾರದ ನೆರವು ಕೋರುತ್ತಿದ್ದೆವು. ಸರ್ಕಾರ ಈ ತಕ್ಷಣ ಕೂಲಂಕುಷವಾಗಿ ಪರಿಗಣಿಸಿ ಚಿತ್ರರಂಗದಲ್ಲಿ ಗುರುತಿನ ಚೀಟಿ ಇಲ್ಲದ ಕಲಾವಿದರಿಗೂ ನೆರವು ನೀಡಬೇಕೆಂದು ಕೋರಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟಿ ವರಲಕ್ಷ್ಮಿ ಅವರು ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮನ್ನು ಗುರುತಿಸಿ ಸಹಾಯ ಹಸ್ತ ನೀಡಿದ ಭೈರವಿಯ ಕುಟುಂಬ, ಭೈರವಿ ಅಭಿಮಾನಿಗಳು, ಚಂಪಾ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳ ಪ್ರಸರಣಾ ವಿಭಾಗದ ಸಿಬ್ಬಂದಿ, ಚಂಪಾ ಸಿನಿಮಾ ನಿರ್ದೇಶಕ ಕೃಷ್ಣಮೂರ್ತಿ, ಸಹ ನಿರ್ದೇಶಕ ರಮೇಶ್ ಜಯಸಿಂಹ ಮತ್ತು ಅನೇಕ ಸಹಕಲಾವಿದರು ಉಪಸ್ಥಿತರಿದ್ದರು.
ವರದಿ: ಮೌನೇಶ್ ರಾಥೋಡ್ ಬೆಂಗಳೂರು