ಕಲಬುರ್ಗಿಯಲ್ಲಿ ಸರಕಾರಿ ಕೆಲಸಕ್ಕೆ ಚಕ್ಕರ್ ತನ್ನ ಖಾಸಗಿ ಕ್ಲಿನಿಕ್ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!
ಕಲಬುರಗಿ: ಸರ್ಕಾರಿ ವೈದ್ಯರೊಬ್ಬರು ಸಾರ್ವಜನಿಕ ಸೇವೆಗೆ ಹಾಜರಾಗದೆ ತಮ್ಮ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಡಾ.ಸಂಗಮೇಶ ಟಕ್ಕಳಕಿ ಎಂಬುವವರೇ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ವೈದ್ಯ. ಅಫಜಲಪುರ ತಾಲೂಕ ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ತಜ್ಞರಾದ ಡಾ.ಸಂಗಮೇಶ ಟಕ್ಕಳಕಿ ಮೇ 25ರಿಂದ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರು ಆಗಿದ್ದರು. ಈ ಸಂಬಂಧ ಮೇಲಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದರೂ, ಅವರು ಕರೆಯನ್ನು ಸ್ವೀಕರಿಸಿರಲಿಲ್ಲ. ವಾಟ್ಸಪ್ ಸಂದೇಶಕ್ಕೂ ಸ್ಪಂದಿಸಿರಲಿಲ್ಲ. ಹೀಗಾಗಿ ಸೋಮವಾರ ಮಧ್ಯಾಹ್ನ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮತ್ತು ತಾಲೂಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸುಶೀಲಕುಮಾರ ಅವರು ಅಫಜಲಪುರ ಪಟ್ಟಣದಲ್ಲೇ ಡಾ.ಸಂಗಮೇಶ ಟಕ್ಕಳಕಿ ನಡೆಸುತ್ತಿದ್ದ ಸಂಗಮೇಶ್ವರ ಕ್ಲಿನಿಕ್ ಮೇಲೆ ದಿಢೀರ್ ದಾಳಿ ಮಾಡಿದ್ದರು. ಈ ದಾಳಿ ಸಂದರ್ಭದಲ್ಲಿ ಡಾ.ಸಂಗಮೇಶ ಟಕ್ಕಳಕಿ ರೋಗಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದಾರೆ. ಅಲ್ಲದೇ, ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರಾಗಿರುವ ಮತ್ತು ಖಾಸಗಿ ಕ್ಲಿನಿಕ್‍ನಲ್ಲಿ ಕರ್ತವ್ಯ ನಿರ್ವಸುತ್ತಿದ್ದ ಸಂಬಂಧ ಶೋಕಸ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಡಾ.ಸಂಗಮೇಶ ಟಕ್ಕಳಕಿ ಕೊರೊನಾ ಜವಾಬ್ದಾರಿಯಲ್ಲಿ ಇದ್ದಾರೆ. ಇಂತಹ ವಿಕೋಪ ಪರಿಸ್ಥಿತಿಯಲ್ಲೂ ಅವರು ಸರ್ಕಾರದ ನಿರ್ದೇಶನವನ್ನು ನಿರ್ಲಕ್ಷಿಸಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದಾರೆ. ಬಡ ರೋಗಿಗಳು ಪರದಾಡುತ್ತಿರುವ ಇಂತಹ ಸ್ಥಿತಿಯಲ್ಲಿ ಸಂವೇದನ ರಹಿತ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಆಗುವುದಿಲ್ಲ. ಕರ್ತವ್ಯ ಲೋಪದ ಬಗ್ಗೆ 24 ಗಂಟೆಯೊಳಗೆ ಉತ್ತರಿಸಬೇಕೆಂದು ಡಾ.ಸಂಗಮೇಶ ಟಕ್ಕಳಕಿ ಅವರಿಗೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸುಶೀಲಕುಮಾರ ನೋಟಿಸ್ ನೀಡಿದ್ದಾರೆ.
ವರದಿ – ಸಂಪಾದಕೀಯ