ಮಗಳನ್ನ ದೇವದಾಸಿ ಮಾಡಲು ಹೊರಟ ತಂದೆ ತಾಯಿ : ರಾಯಚೂರು ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ
ರಾಯಚೂರು ಜಿಲ್ಲೆ ದೇವದುರ್ಗ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪೋಷಕರೇ ಮಗಳನ್ನು ಬಲವಂತವಾಗಿ ದೇವದಾಸಿ ಪದ್ಧತಿಗೆ ನೂಕಲು ಮುಂದಾಗಿದ್ದು, ಈ ಸಂಬಂಧ ಪೋಷಕರ ವಿರುದ್ಧವೇ ಯುವತಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 21 ವರ್ಷದ ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡಲು ಪೋಷಕರೇ ಮುಂದಾದಾಗ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಕ್ಕನ ಗಂಡನೊಂದಿಗೆ ಯುವತಿ ಮದುವೆ ಮಾಡಲು ಪೋಷಕರು ಮುಂದಾಗಿದ್ದು, ಯುವತಿ ವಿರೋಧಿಸಿದಾಗ ದೇವದಾಸಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿನಿ ಸಿಡಿಪಿಒಗೆ ಮಾಹಿತಿ ನೀಡಿ, ಜಾಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಯುವತಿ ದೇವದುರ್ಗದ ಮಹಿಳಾ ಪುನರ್ವಸತಿ ಆಶ್ರಯ ಪಡೆದುಕೊಂಡಿದ್ದಾರೆನ್ನಲಾಗಿದೆ.
ವರದಿ – ಆನಂದ್ ಸಿಂಗ್ ಕವಿತಾಳ