ಸಿಪಿಐ ಎಂಎಲ್ ರೆಡ್ ಸ್ಟಾರ್ ಸಿಂಧನೂರ ಶರ್ಮಿಸ್ತಾ ಚೌಧರಿ ಲಾಲ್ ಸಲಾಂ ! ಶರ್ಮಿಷ್ಟಾ ಚೌಧರಿ ಅಮರ್ ರಹೇ !
ಇಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷದ ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಟಿಯುಸಿಐ ವತಿಯಿಂದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರಿ ಚಳುವಳಿಯ ಸಿಡಿಲ ಮರಿಯಾದ ಪಶ್ಚಿಮ ಬಂಗಾಳದ ಸಂಗಾತಿ ಶರ್ಮಿಸ್ತಾ ಚೌಧರಿಯವರ ಸಂಸ್ಮರಣಾ ಶ್ರದ್ಧಾಂಜಲಿ ಸಭೆಯನ್ನು ಆಚರಿಸಲಾಯಿತು. ಶರ್ಮಿಷ್ಟಾ ಚೌಧರಿ ಅಮರ್ ರಹೇ ! ಶರ್ಮಿಸ್ತಾ ಚೌದರಿಗೆ ಲಾಲ್ ಸಲಾಂ ! ಇನ್ಕ್ವಿಲಾಬ್ ಜಿಂದಾಬಾದ್ ! ಎಂಬ ಕ್ರಾಂತಿಕಾರಿ ಕಮ್ಯುನಿಸ್ಟ್ ಘೋಷಣೆಗಳನ್ನು ಕೂಗುತ್ತಾ ಶರ್ಮಿಷ್ಟಾ ಚೌಧರಿ ಅವರ ಭಾವಚಿತ್ರಕ್ಕೆ ಕೆಂಪು ಹೂವಿನ ಪುಷ್ಪಾರ್ಚನೆ ಮಾಡಿ ಮಾತನಾಡಿದ ಸಿಪಿಐ ಎಂಎಲ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಎಂ ಗಂಗಾಧರ, ಅಪಾರ ಜನಸ್ತೋಮವನ್ನು, ಕಮ್ಯುನಿಸ್ಟ್ ಚಳುವಳಿಯ ಮುಂಚೂಣಿ ಸಂಗಾತಿ, ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾದ ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ಎಐಆರ್ ಡಬ್ಲ್ಯುಒ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾದ ಕಾಮ್ರೇಡ್ ಶರ್ಮಿಸ್ತಾ ಚೌದರಿಯವರ ಸಾವಿನಿಂದ ಇಡೀ ದೇಶದ ಕಮ್ಯುನಿಸ್ಟ್ ಚಳವಳಿಗೆ ತುಂಬಲಾರದ ನಷ್ಟವಾಗಿದೆ. ಪಶ್ಚಿಮ ಬಂಗಾಳದಲ್ಲಿ ಪಕ್ಷದಿಂದ ವಸತಿ ಮತ್ತು ಭೂಮಿಗಾಗಿ ನಡೆದ ಬಂಗರ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, ಅಲ್ಲಿನ ಆಳುವ ವರ್ಗದ ಮಮತಾ ಬ್ಯಾನರ್ಜಿ ಟಿಎಂಸಿ ಸರಕಾರದ ವಿರುದ್ಧ ಬಲಾಢ್ಯ ಚಳುವಳಿಯನ್ನು ರೂಪಿಸಿದಾಗ ಬಂಗಾಳ ಸರಕಾರ ಸಂಗಾತಿ ಶರ್ಮಿಸ್ತಾ ಚೌಧರಿಯನ್ನು 8 ತಿಂಗಳುಗಳು ಕಾಲ ಜೈಲಿನಲ್ಲಿಡಲಾಗಿತ್ತು. ಹಾಗೆಯೇ ಅಖಿಲ ಭಾರತ ಮಟ್ಟದಲ್ಲಿ ಮಹಿಳೆಯರ ಕುರಿತು ಲಿಂಗ ತಾರತಮ್ಯ, ಸಮಾನತೆ, ಕೋಮುವಾದ, ಜಾತಿವಾದ, ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ದೇಶದ ಆಯಾ ರಾಜ್ಯಗಳಲ್ಲಿ ಬಲಿಷ್ಠ ಹೋರಾಟವನ್ನು ರೂಪಿಸಲು ಅತ್ಯಂತ ಸೈದ್ಧಾಂತಿಕ ಮತ್ತು ವೈಚಾರಿಕ ನಿರ್ದೇಶನವನ್ನು ಕಾಲಕಾಲಕ್ಕೆ ನೀಡಿ ಕಾರ್ಪೊರೇಟ್ ಕೋಮುವಾದಿ ಪ್ಯಾಸಿಸ್ಟ್ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಕಹಳೆ ಮೊಳಗಿಸಿದ್ದರು. ಹಾಗೆಯೇ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯನ್ನು ಬಲಪಡಿಸಲು ವಿದೇಶಕ್ಕೆ ಹಲವಾರು ಬಾರಿ ಹೋಗಿ ಸಂಘಟನೆ ಕಟ್ಟುವಲ್ಲಿ ಕಂಕಣ ಕಟ್ಟಿ ನಿಲ್ಲುತ್ತಿದ್ದರು. ಹಾಗೆಯೇ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಂತಹ ದೇಶದ ಆಯಾ ರಾಜ್ಯದ ಅಖಿಲ ಭಾರತ ಮಹಿಳಾ ಸಂಘಟನೆಯ ಪ್ರಮುಖವಾದ ಸಭೆಗೆ ನೇತೃತ್ವವಹಿಸಿ ಮಾತನಾಡಿ, ಚಳುವಳಿಯನ್ನು ಬಲಪಡಿಸಲು ಕರೆ ನೀಡಿದ್ದರು. ಮತ್ತು ಕಳೆದ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಾಗೂ ಎನ್ ಆರ್ ಸಿ, ಸಿಎಎ ವಿರುದ್ಧದ ಹೋರಾಟದಲ್ಲಿ ನಮ್ಮ ರಾಯಚೂರು ಜಿಲ್ಲೆಗೆ ಬಂದು ಸಾವಿರಾರು ಮಹಿಳೆಯರ ಕುರಿತು ಮಾತನಾಡಿ ಹೋರಾಟಕ್ಕೆ ಹುರುದುಂಬಿಸಿದ್ದರು. ಇಂತಹ ಕಮ್ಯುನಿಸ್ಟ್ ಚಳುವಳಿಗಾರರನ್ನು ಕಳೆದ ಒಂದೆರಡು ವಾರದಲ್ಲಿ ಇಬ್ಬರನ್ನು ಮೊದಲು ಒರಿಸ್ಸಾದ ಸಂಗಾತಿ ಶಿವರಾಂ ಈಗ ಸಂಗಾತಿ ಶರ್ಮಿಸ್ತಾ ಚೌಧರಿಯನ್ನು ಕಳೆದುಕೊಂಡಿದ್ದು ಕ್ರಾಂತಿಕಾರಿ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಆದ್ದರಿಂದ ಅವರ ಕನಸುಗಳನ್ನು ನನಸಾಗಿಸಲು ಕ್ರಾಂತಿಕಾರಿ ಕಮ್ಯುನಿಸ್ಟ್ ಚಳವಳಿಯನ್ನು ಮುನ್ನಡೆಸಲು ಸಮಸ್ತ ದುಡಿಯುವ ವರ್ಗ ಹೆಗಲೊಡ್ಡಬೇಕಾಗಿದೆ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಮರಣಾ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಪಕ್ಷದ ತಾಲ್ಲೂಕು ಕಾರ್ಯದರ್ಶಿಯಾದ ಮಾಬುಸಾಬ್ ಬೆಳ್ಳಟ್ಟಿ ವಹಿಸಿದ್ದರು. ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಕಾರ್ಯದರ್ಶಿಯಾದ ಎಚ್.ಆರ್. ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ನಾಗಪ್ಪ ಉಮಲೂಟಿ, ರಾಜನಾಯಕ್, ಈರಪ್ಪ ನೀಲಮ್ಮ ದ್ಯಾವಮ್ಮ ದುರುಗಮ್ಮ ನಾಗಮ್ಮ ಬಸಮ್ಮ ಹುಲಿಯಮ್ಮ ಹುಸೇನ್ ಬಾಷಾ ವೆಂಕಟೇಶ್ ಉಸ್ಸಪ್ಪಾ ಹುಸೇನ್ ಸಾಬ್ ಕಾಳಿಂಗಪ್ಪ ದೌಲತ್ ಸಾಬ್ ಸೇರಿದಂತೆ ಇತರರು ಸಂಸ್ಮರಣಾ ಸಭೆಯಲ್ಲಿ ಪಾಲ್ಗೊಂಡು ಕೆಂಪು ಹೂವಿನ ಪುಷ್ಪಾರ್ಚನೆ ಮಾಡಿ ಸಂತಾಪ ಸೂಚಿಸಿದರು. ಕ್ರಾಂತಿಕಾರಿ ವಂದನೆಗಳೊಂದಿಗೆ ಮಾಬುಸಾಬ್ ಬೆಳ್ಳಟ್ಟಿ ತಾಲ್ಲೂಕು ಕಾರ್ಯದರ್ಶಿ ಸಿಪಿಐ ಎಂಎಲ್ ರೆಡ್ ಸ್ಟಾರ್ ಸಿಂಧನೂರ.
ವರದಿ – ಸಂಪಾದಕೀಯ