ಅನ್ಲಾಕ್-2: ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ; ದೇವಸ್ಥಾನಕ್ಕಿಲ್ಲ ಪರ್ಮಿಷನ್!
* 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ ಆರಂಭ
* ಸಂಜೆವರೆಗೆ ಅಂಗಡಿ–ಮುಗ್ಗಟ್ಟು ಓಪನ್ ; ಕಂಡೀಷನ್ ಅಪ್ಲೈ.
* ಜಿಮ್, ಮಾಲ್, ದೇವಸ್ಥಾನಕ್ಕಿಲ್ಲ ಅವಕಾಶ
* ಪ್ರತಿ ದಿನ ನೈಟ್ ಕರ್ಫ್ಯೂ ರಾತ್ರಿ 7ರಿಂದ ಬೆಳಗ್ಗೆ 5 ಗಂಟೆವರೆಗೆ.
ಬೆಂಗಳೂರು: 2ನೇ ಹಂತದ ಕರ್ನಾಟಕ ಅನ್ಲಾಕ್ ಭಾಗವಾಗಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಸಡಿಲಿಸಿ ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 2ನೇ ಹಂತದ ಅನ್ಲಾಕ್ ಪ್ರಕ್ರಿಯೆಯ ಕುರಿತು ನಿರ್ಧಾರ ಕೈಗೊಳ್ಳಲು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೊವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ, ಗೃಹಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಸುಧಾಕರ್, ಸಚಿವರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ, ಸಿಎಸ್ ರವಿಕುಮಾರ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರ ಈ ಸಡಿಲಿಕೆ ಅನ್ವಯವಾಗಲಿದೆ ಎಂದರಲ್ಲದೇ, ಈ ಜಿಲ್ಲೆಗಳಲ್ಲಿ ಸೋಮವಾರದಿಂದ (ಜೂನ್ 21) ಸರ್ಕಾರಿ ಬಸ್ಗಳ ಶೇ 50ರ ಅವಕಾಶದೊಂದಿಗೆ ಓಡಾಟಕ್ಕೆ ಅನುಮತಿಸಿದ್ದು, ಇನ್ನಷ್ಟು ವಿನಾಯಿತಿಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂದರು. ಆದರೆ ಶೇ 5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಹಾಸನ, ಉಡುಪಿ, ದಕ್ಷಿಣ ಕನ್ನಡ, , ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, , ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ಈ ಸಡಿಲಿಕೆ ಅನ್ವಯ ಆಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮುಂದುವರೆಯಲಿದೆ: ಪ್ರತಿದಿನ ಸಂಜೆ 7ಗಂಟೆಯಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಎಲ್ಲ ಜಿಲ್ಲೆಗಳಲ್ಲೂ ಮುಂದುವರೆಯಲಿದೆ. ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ಸಹ ರಾಜ್ಯದಲ್ಲಿ ಎಂದಿನಂತೆ ಮುಂದುವರೆಯಲಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸಾಮಾನ್ಯ ಜನರಿಗೆ ಸಂಕಷ್ಟದ ಸ್ಥಿತಿ ಇದೆ. ಹೀಗಾಗಿ ವಿನಾಯಿತಿ ನೀಡಲಾಗಿದೆ, ಜನರು ಕೂಡ ಸೋಂಕು ಕಡಿಮೆಯಾಗಿದೆ ಎಂದು ಮೈ ಮರೆಯದೇ ಮೊದಲಿನಂತೆ ಬಿಗಿ ನಿಲುವು ತೆಗೆದುಕೊಳ್ಳಬೇಕು. ಮಾಸ್ಕ್,ಸಾಮಾಜಿಕ ಅಂತರ ಕಾಪಾಡಬೇಕು. ಇದಕ್ಕೆ ರಾಜ್ಯದ ಜನ ಸಹಕರಿಸಬೇಕು. ಈ ನಿಯಮಗಳು ಜುಲೈ 5ರವರೆಗೂ ಮುಂದುವರೆಯಲಿದೆ ಎಂದರು.
ಯಾವುದಕ್ಕೆ ವಿನಾಯಿತಿ * ಎಲ್ಲಾ ಅಂಗಡಿಗಳನ್ನು ಸಂಜೆ 5ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗುವುದು.
* ಎಸಿ. ಚಾಲನೆಗೊಳಿಸದೇ ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗುವುದು.
* ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
* ಬಸ್ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿದೆ.
* ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ.
* ಸರ್ಕಾರಿ/ಖಾಸಗಿ ಕಛೇರಿಗಳಿಗೆ ಶೇ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ.
* ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.
* ಜಿಮ್ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.
ವರದಿ – ಹರೀಶ ಶೇಟ್ಟಿ ಬೆಂಗಳೂರು