ಬಳ್ಳಾರಿಯಲ್ಲಿ ಅಕ್ರಮವಾಗಿ ಅದಿರು ಸಾಗಿಸುತ್ತಿದ್ದ 20 ಲಾರಿಗಳು ವಶ..
ಬಳ್ಳಾರಿ, ಜೂನ್ 20: ಅಕ್ರಮ ಅದಿರು ಸಾಗಾಣಿಕೆಯಲ್ಲಿ ತೊಡಗಿದ್ದ 20 ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿಯಿಂದ ಆಂಧ್ರ ಪ್ರದೇಶಕ್ಕೆ ಈ ಅಕ್ರಮ ಅದಿರನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಬಳ್ಳಾರಿ ನಗರದಿಂದ ಪ್ರತಿನಿತ್ಯ ನೂರಾರು ಲಾರಿಗಳಲ್ಲಿ ಆಂಧ್ರ ಪ್ರದೇಶದ ಕೃಷ್ಣಾಪಟ್ಟಣಂಗೆ ಕಬ್ಬಿಣದ ಅದಿರನ್ನು ಸಾಗಿಸುವುದು ನಡೆಯುತ್ತಲೇ ಇದೆ. ಈ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಭಾನುವಾರ 20 ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 2007-08ನೇ ಸಾಲಿನಲ್ಲಿ ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆಯು ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣಿಕೆಯಿಂದಲೇ ಹೆಸರುವಾಸಿಯಾಗಿತ್ತು. ಅಂದಿನಿಂದಲೂ ಜಿಲ್ಲೆಯು ಒಂದಿಲ್ಲಾ ಒಂದು ವಿಷಯದಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಇದೀಗ ಅದೇ ಬಳ್ಳಾರಿ ಜಿಲ್ಲೆಯು ಮತ್ತೊಮ್ಮೆ ಅಕ್ರಮ ಅದಿರು ಸಾಗಾಣಿಕೆಯಲ್ಲಿ ಸುದ್ದಿಯಾಗಿದೆ. 20 ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸ್:ರಾಜ್ಯದಿಂದ ಅದಿರು ರಪ್ತು ಮಾಡುವುದನ್ನು 2010 ರಿಂದ ನಿಷೇಧ ಮಾಡಲಾಗಿದೆ. ಇದರ ಹೊರತಾಗಿಯೂ ಬಳ್ಳಾರಿ ಜಿಲ್ಲೆಯಲ್ಲಿ ರಾಕ್ ಡಸ್ಟ್ ಸಾಗಾಣಿಕೆ ಹೆಸರಲ್ಲಿ ಅಕ್ರಮವಾಗಿ ಅದಿರು ಸಾಗಾಟ ದಂಧೆ ನಡೆಸುತ್ತಿದ್ದ 20 ಲಾರಿಗಳನ್ನು ಬಳ್ಳಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳ ಮಾರ್ಗದ ಮೂಲಕ ಬಳ್ಳಾರಿ ಜಿಲ್ಲೆಯಿಂದ ಆಂದ್ರ ಪ್ರದೇಶಕ್ಕೆ ಅಕ್ರಮ ಅದಿರು ಸಾಗಾಟ ಮಾಡುತ್ತಿರುವುದನ್ನು ಬಳ್ಳಾರಿ ಗ್ರಾಮೀಣ ಪೋಲಿಸರು ಪತ್ತೆ ಮಾಡಿದ್ದಾರೆ. ಡಸ್ಟ್ ಹೆಸರಲ್ಲಿ ಉತ್ಕೃಷ್ಟ ಗ್ರೇಡ್ ನ ಕಬ್ಬಿಣದ ಅದಿರನ್ನು ಹೊತ್ತ ಲಾರಿ ಸಹಿತ ಚಾಲಕರನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡಾವತ್ ತಿಳಿಸಿದ್ದಾರೆ. “ಆಂಧ್ರಪ್ರದೇಶದ ಕೃಷ್ಣಾಪಟ್ಟಣಂ ಪೋರ್ಟ್ ಗೆ ಈ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ನಿತ್ಯ ನೂರಕ್ಕೂ ಹೆಚ್ಚು ಲಾರಿಗಳಲ್ಲಿ ಡಸ್ಟ್ ಹೆಸರಲ್ಲಿ ಸಾಗಾಟವಾಗುತ್ತಿತ್ತು. ಬಳ್ಳಾರಿ ಇಸ್ಪಾತ್ ಕಂಪನಿ ಹೆಸರಲ್ಲಿ 20 ಲಾರಿಗಳನ್ನು ಲೋಡ್ ಮಾಡಿ ಕಳಿಸಲಾಗಿದೆ. 20 ಲಾರಿ, ಚಾಲಕರು ಮತ್ತು ಲೋಡ್ ಮಾಡಿದವರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡಾವತ್ ತಿಳಿಸಿದ್ದಾರೆ.
ವರದಿ – ಚಲುವಾದಿ ಅಣ್ಣಪ್ಪ