ಸದ್ದಿಲ್ಲದೆ ಮಾಡುತ್ತಿರುವ ಸಕ್ಷಮದ ದಿವ್ಯಾಂಗ ಕ್ಷೇತ್ರದ ಸಮಾಜ ಸೇವೆ ಶ್ಲಾಘನೀಯ – ಸ್ಕ್ಯಾನ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ
ದಿನಾಂಕ: 21- ಜೂನ್ 2021, ಸೋಮವಾರ, ಸಕ್ಷಮ-ಕರ್ನಾಟಕದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸ್ಕ್ಯಾನ್ [SCAN ] -ಸಕ್ಷಮ ಕೋವಿಡ್ ಆಕ್ಷನ್ ನೆಟ್ವರ್ಕ್ ಎಂಬ ವಿಶೇಷಚೇತನರಿಗಾಗಿ ರಾಜ್ಯಮಟ್ಟದ ಕೋವಿಡ್ ಸಹಾಯವಾಣಿಯ ಲೋಕಾರ್ಪಣಾ ಕಾರ್ಯಕ್ರಮವು ಇಂದು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳಾದ ಡಾ. ಅಶ್ವಥ್ ನಾರಾಯಣರಿಂದ ವರ್ಚುಯಲ್ ಮೀಟಿಂಗ್ನಲ್ಲಿ ನೆರವೇರಿತು. ರಾಷ್ಟ್ರೀಯ ದಿವ್ಯಾಂಗ ಸಹಾಯವಾಣಿಗೆ ತಮ್ಮ ಮೊಬೈಲಿನಿಂದ ಕರೆಮಾಡಿ ಮಾತನಾಡುವ ಮೂಲಕ ಉದ್ಘಾಟಿಸಿದ ಉಪಮುಖ್ಯಮತ್ರಿಗಳು ತಮ್ಮ ಉಧ್ಘಾಟನ ಭಾಷಣದಲ್ಲಿ ಸಕ್ಷಮ ಸಂಘಟನೆಯು ಸದ್ದಿಲ್ಲದೇ ಹಾಗು ಪ್ರಚಾರ ಬಯಸದೆ ಸೇವಾ ಮನೋಭಾವದಿಂದ ದಿವ್ಯಾಂಗರಿಗಾಗಿ ಮಾಡುತ್ತಿರುವ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಕೋವಿಡ್ ನಂತಹ ಮಾರಕ ರೋಗದಿಂದ ಬಸವಳಿದ ದಿವ್ಯಾಂಗರಿಗೆ ಅರೋಗ್ಯ ಹಾಗು ಲಸಿಕೆ ಕೊಡುವಂತಹ ಸಕಾಲಿಕ ಹಾಗು ಸತ್ಕಾರ್ಯವನ್ನು ಪ್ರಶಂಸಿಸಿ ಸರಕಾರವು ಸಕ್ಷಮದೊಂದಿಗೆ ಇಂತಹ ಸೇವಾಕಾರ್ಯಗಳನ್ನು ನೆರವೇರಿಸಲು ಸಹಕರಿಸುವುದಾಗಿ ಹೇಳುತ್ತಾ ಸರಕಾರವು ಈಗಾಗಲೇ ಹಲವಾರು ಕಾರ್ಯಯೋಜನೆಗಳನ್ನು ದಿವ್ಯಾಂಗರಿಗಾಗಿ ರೂಪಿಸಿದೆ. ಸಕ್ಷಮವು ದಿವ್ಯಾಂಗರಿಗಾಗಿ ಬಿ. ಪಿ .ಎಲ್ ಕಾರ್ಡ್ ಮಾಡಿಸಲು ಆದಷ್ಟು ಸಹಕರಿಸಿ ಅವರಿಗೆ ಸರಕಾರದಿಂದ ಸಿಗುವ ಹೆಚ್ಚಿನ ಸವಲತ್ತುಗಳನ್ನು ತಲಪುವಂತೆ ಮಾಡಬಹುದೆಂದು ಮಾರ್ಗದರ್ಶನ ನೀಡಿದರು. ಉಧ್ಘಾಟನೆಯ ನಂತರ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಡಾ .ಹರಿಕೃಷ ರೈಗಳು ಕರ್ನಾಟಕ ರಾಜ್ಯದ ದಿವ್ಯಾಂಗರ ಸಮಸ್ಯೆಗಳಾದ ಅವರ ಮಾಶಾಸನ ಸಮಸ್ಯೆ, ಅವರಿಗೆ ವಿಶೇಷ ಕೋವಿಡ್ ಪ್ಯಾಕೇಜ್ ಹಾಗು ದಿವ್ಯಾಂಗ ಆಯುಕ್ತರ ಶೀಘ್ರ ನೇಮಕಾತಿ ಕುರಿತ ಮೂರು ಮನವಿಗಳನ್ನು ಉಪಮುಖ್ಯಮಂತ್ರಿಗಳಿಗೆ ವರ್ಚುಯಲ್ ವೇದಿಕೆಯಲ್ಲಿ ಸಲ್ಲಿಸಿದರು. ನಂತರ ಮಾತಾನಾಡಿದ ಸಕ್ಷಮ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಯುತ ವಿನೋದ್ ಪ್ರಕಾಶ್ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಕ್ಷಮದ ಸ್ಕ್ಯಾನ್ ಸಹಾಯವಾಣಿಯು ಕೋವಿಡ್ ಸಂಕಷ್ಟ ಸಮಯದಲ್ಲಿ ದಿವ್ಯಾಂಗರ ಸಮಸ್ಯೆಗಳಿಗೆ ಮಮತೆಯಿಂದ ಕೇಳಿಸುವ ಕಿವಿಯಾಗಿ ಅವರನ್ನು ಸಂತೈಸಲಿದೆ ಹಾಗು ಇಂತಹ ಕಷ್ಟಕಾಲದಲ್ಲಿ ಅವರ ಸಮಸ್ಯೆಯನ್ನು ಆಲಿಸಿ ಸ್ಪಂದಿಸುವ ಸ್ವರಗಳಿಂದ ಅವರ ಅರ್ಧದಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಅಂತಹ ಕೆಲಸವನ್ನು ಸಕ್ಷಮ ಮಾಡಲಿದೆಯೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಯೂಥ್ ಫಾರ್ ಸೇವಾ ಸಂಘಟನೆಯ ಸಂಸ್ಥಾಪಕರೂ ಹಾಗು ಮಾರ್ಗದರ್ಶಕರಾದ ಶ್ರೀಯುತ ವೆಂಕಟೇಶ್ ಮೂರ್ತಿಯವರು ಕೋವಿಡ್ ಸಮಯದಲ್ಲಿ ದಿವ್ಯಾಂಗರಿಗೆ ಬೇಕಾದ ವಿಶೇಷ ಸಾಧನಗಳ ಬಗ್ಗೆ ಗಮನಹರಿಸಿ ಅಂತಹ ತಾಂತ್ರಿಕ ಸಾಧನಗಳನ್ನು ತಯಾರಿಸಲು ತಂತ್ರಜ್ಞಾನದ ಅವಶ್ಯಕತೆ ಹಾಗು ಎಲ್ಲ ಕಟ್ಟಡಗಳು ದಿವ್ಯಾಂಗ ಸ್ನೇಹಿಯಾಗಿರಬೇಕೆಂದು ಆಶಯ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಸಕ್ಷಮದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ. ಸುಕುಮಾರ್ ರವರು ಕೋವಿಡ್ ಮೂರನೆಯ ಅಲೆಯ ಸಿದ್ದತೆಯ ಭಾಗವಾಗಿ ಸಕ್ಷಮ ಇಂತಹ ಯೋಜನೆಯನ್ನು ದಿವ್ಯಾಂಗರ ಅರೋಗ್ಯ ರಕ್ಷಣೆ ಹಾಗು ಅವರ ನೆರವಿಗಾಗಿ ರಾಷ್ಟ್ರವ್ಯಾಪಿಯಾಗಿ ಕಾರ್ಯಗತಗೊಳಿಸಿದೆ ಎಂದು ಸ್ಕ್ಯಾನ್ ಯೋಜನೆಯ ಮಹತ್ವವನ್ನು ವಿವರಿಸಿದರು. ಸಕ್ಷಮ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಡಾ. ಸುಧೀರ್ ಪೈಗಳು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ಕ್ಯಾನ್ ನಂತಹ ದಿವ್ಯಾಂಗ ಸೇವಾ ಯೋಜನೆಯನ್ನು ಕಾರ್ಯಗತಗೊಳಿಸಲು ಸಮಾಜಕ್ಕಾಗಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಲು ಸಿದ್ಧರಿರುವ ಸ್ವಯಮಸೇವಕರ ತಂಡದ ಅವಶ್ಯಕತೆಯನ್ನು ಹೇಳುತ್ತಾ ಸಕ್ಷಮದ ಯುವ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದರು. ಇದೇ ಕಾರ್ಯಕ್ರಮದಲ್ಲಿ ಕಲಾ ಸಕ್ಷಮ ಯೋಜನೆಯಡಿಯಲ್ಲಿ ಶ್ರೀ ವಿನೋದ್ ಪ್ರಕಾಶರಿಂದ ರಚನೆಯಾದ ಹಾಗು ಶೃಂಗೇರಿಯ ಸಂಸ್ಕೃತ ಪಂಡಿತರಾದ ಡಾ. ನಾರಾಯಣ ರಾಯ್ಕರ್ ರಿಂದ ಸಂಗೀತ ಸಂಯೋಜನೆಯಾದ ೩ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು. ಸಕ್ಷಮ ಬೆಂಗಳೂರು ತಂಡದ ದೃಸ್ಟಿಬಾದಿತ ಪ್ರಕೋಷ್ಠದ ಪ್ರಮುಖರಾದ ಕು. ಕವಿತಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಡಾ. ಹರಿಕೃಷ್ಣ ರೈ ಗಳು ನಿರೂಪಣೆ ಮಾಡಿದರು, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ವಸಂತ್ ಮಾಧವರವರು ಸ್ವಾಗತಿಸಿದರು ಹಾಗು ಪ್ರಾಂತ ಸಹ ಖಜಾಂಚಿಗಳಾದ ಶ್ರೀ ರಮೇಶ್ ಪ್ರಭುಗಳು ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮವು ಕಲ್ಯಾಣ ಮಂತ್ರದೊಂದಿಗೆ ಕೊನೆಗೊಂಡಿತು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಸಕ್ಷಮದ ಫೇಸ್ಬುಕ್ ಪೇಜ್ನಲ್ಲಿ ನಲ್ಲಿ ಲಭ್ಯವಿದೆ. https://www.facebook.com/717260078381983/posts/4089065431201414/
ವರದಿ – ಸಂಪಾದಕೀಯ