#ನಂದವಾಡಗಿ ಹಾಗೂ ನಾರಾಯಣಪೂರ ಬಲದಂಡೆ ಕಾಲುವೆಗಳ ಭ್ರಷ್ಟಚಾರದ ರೂವಾರಿ ಬಿಜೆಪಿ ಸರಕಾರದ ವಿರುದ್ದ ಅನಿರ್ದಿಷ್ಟ ಹೋರಾಟಕ್ಕೆCPI(ML) RED STAR ಕರೆ!
ಕಳೆದ 25 ವರ್ಷಗಳಿಂದ ರೈತರ ಸತತ ಹೋರಾಟದ ಫಲವಾಗಿ 2014ರಲ್ಲಿ ಸಿದ್ದರಾಮಯ್ಯ ಸರಕಾರವು ನಂದವಾಡಗಿ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿತು. ಈ ಯೋಜನೆಗೆ ಆರಂಭದಲ್ಲಿ 153೦-೦೦ ಕೋಟಿ ಅಂದಾಜು ವೆಚ್ಚ ನಿಗದಿಯಾಯಿತು. ಹುನಗುಂದ, ಲಿಂಗಸೂಗೂರು, ಮಸ್ಕಿ, ಮಾನ್ವಿ, ಸಿರವಾರ ತಾಲ್ಲೂಕಗಳ 65 ಗ್ರಾಮಗಳ 90200 ಎಕರೆ ಮಳೆಯಾಶ್ರಿತ ರೈತರ ಭೂಮಿಗೆ ನೀರು ಹರಿಸುವ ಮಹತ್ವದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿತು. ಸದರಿ ಯೋಜನೆಯ ಪರಿಕಲ್ಪನೆ ಹರಿ ನೀರಾವರಿಯಾಗಿತ್ತು. ಈ ಯೋಜನೆಗೆ 6 ಟಿಎಂಸಿ ನೀರು ಬಳಸಿಕೊಳ್ಳುವ ಗುರಿ ಇತ್ತು. ಆದರೆ, ಅಕ್ರಮ ಹಾದಿಯಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರಕಾರವು, ಇಡೀ ಯೋಜನೆಯನ್ನೇ ಪಲ್ಟಿಮಾಡಿ ಬಿಟ್ಟಿತು. 6 ಟಿಎಂಸಿಯ ಬದಲು 3.75 ಟಿಎಂಸಿಗೆ ಸೀಮಿತ ಮಾಡಲಾಯಿತು. ಆದರೆ, ಯೋಜನೆಯ ವೆಚ್ಚವನ್ನು 300 ಕೋಟಿ ಹೆಚ್ಚಿಸಿ, ಒಟ್ಟು 1830-೦೦ ಕೋಟಿಗೆ ಏರಿಸಿತು. ಅಷ್ಟೇ ಅಲ್ಲ, ಹರಿ ನೀರಾವರಿಯನ್ನು ಹನಿ ನೀರಾವರಿಯನ್ನಾಗಿ ಪರಿವರ್ತಿಸಿ ,ಈ ಪ್ರದೇಶದ ರೈತಾಪಿ ವರ್ಗಕ್ಕೆ ಸಾಟಿ ಇಲ್ಲದ ಮೋಸ ಮಾಡಿ ಬಿಟ್ಟಿತು. ಬಾಗಲಕೋಟ ಜಿಲ್ಲೆಯ ರಾಮತ್ನಾಳ(ಮರೋಳಿ) 14392 ಹೆಕ್ಟರ್ ಭೂಮಿಯ ಈ ಹನಿ ನೀರಾವರಿಯು ಏಷಿಯಾ ಖಂಡದಲ್ಲೆ ಅತೀ ದೊಡ್ಡ ನೀರಾವರಿ ಯೋಜನೆ ಎಂದು ಕರೆಯಲ್ಪಟ್ಟಿದೆ. ಆದರೆ, ರೈತರ ಹೊಲಗಳಿಗೆ ಮಾತ್ರ ನೀರು ಬರಲಿಲ್ಲ. ಎಲ್ಲ ಡ್ರಿಪ್ ಪೈಪ್‌ಗಳನ್ನು ರೈತರು ಸುಟ್ಟು ಹಾಕಿದ್ದಾರೆ. ಇದೊಂದು ನೆಗೆಟಿವ್ ಹನಿ ನೀರಾವರಿ ಮಾಡಲ್ ಆಗಿದೆ. 2017 ರಲ್ಲಿ ಇದರ ಕೆಟ್ಟ ಅನುಭವ ನಮಗಾಗಿದೆ. ಇದು ಗೊತ್ತಿದ್ದೂ ಈ ನೆಗೆಟಿವ್ ನೀರಾವರಿ ಪದ್ದತಿಯನ್ನು ನಂದವಾಡಗಿಗೆ ಅಳವಡಿಸಿ ರಾಜ್ಯ ಬಿಜೆಪಿ ಸರಕಾರ ಮತ್ತೊಮ್ಮೆ ನಮ್ಮ ರೈತರಿಗೆ ಘೋರ ಅನ್ಯಾಯ ಮಾಡಿದೆ ಎಂದು ಸಿಪಿಐ(ಎಂಎಲ್) ಈ ಮೂಲಕ ಘೋಷಿಸುತ್ತದೆ.
ನಂದವಾಡಗಿ ಕಾಮಗಾರಿಗಳಲ್ಲಿ ಸಾಟಿ ಇಲ್ಲದ ಸರಣಿ ಅಕ್ರಮಗಳು: ನಾರಾಯಣಪೂರ ಎಡದಂಡೆ ಕಾಲುವೆ ವ್ಯಾಪ್ತಿಯ ಇಂಡಿ ಬ್ರ್ಯಾಂಚ್ ಕೆನಾಲ್ ಕಾಮಗಾರಿಯನ್ನು ಅಪೂರ್ಣಗೊಳಿಸಿ ಓಡಿ ಬಂದ ಲಾರ್ಸ್ನ್ಆ್ಯಂಡ್ ಟಬ್ರೊ( L&T) ಕಂಪನಿಗೆ ಜಲಾಶಯದಿಂದ ನಂದವಾಡಗಿವರೆಗೆ ಪ್ರಮುಖ ಕಾಮಗಾರಿಗಳನ್ನು 207 ಕೋಟಿ ಮೊತ್ತಕ್ಕೆ ಟೆಂಡರ್ ನೀಡಲಾಗಿದೆ. ಈ ಕಂಪನಿಗೆ ಈಗಾಗಲೆ 180 ಕೋಟಿ ರೂ. ಬಿಲ್ ಪಾವತಿಯಾಗಿದೆ. ಈ ಕಂಪನಿ ಶೇಕಡ 50% ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಒಂದೇ ಒಂದು ಪಂಪಿಂಗ್ ಮೋಟರ್ ಜಾಗದ ಮೇಲಿಲ್ಲದಿದ್ದರೂ ಕೆಬಿಜೆಎನ್‌ಎಲ್ ನಿಗಮವು ಎಲ್ಲಾ ಪಂಪುಗಳನ್ನು ಅಳವಡಿಸಲಾಗಿದೆ ಎಂದು ಹೇಳಿದೆ. ಇದುವರೆಗೆ ಹೆಡ್ ವರ್ಕ್ ಗೆ ವಿದ್ಯುತ್ ಸಂಪರ್ಕ ಇಲ್ಲ. ಇಲ್ಲಿ ಭಾರೀ ಭ್ರಷ್ಟಾಚಾರ, ಕಳಪೆ ಕಾಮಗಾರಿ ನಡೆದಿದೆ.
ಪ್ಯಾಕೇಜ್ ನಂಬರ್-1 ಮೆ|| ತಹಲ್ ಕನ್ಸಲ್ಟಿಂಗ್ ಇಂಜಿನಿಯರ‍್ಸ್ ಲಿಮಿಟೆಡ್ ಗುರಗಾಂವ್ ನವದೆಹಲಿ(ಬಹರಾಷ್ಟೀಯ ಕಂಪನಿ) 12000 ಹೆಕ್ಟರ್ ಜಮೀನಿಗೆ ನೀರಾವರಿ ಕಲ್ಪಿಸುವ, ರೈಸಿಂಗ್‌ಲೈನ್, ಸಂಗ್ರಹ ತೊಟ್ಟಿ ನಿರ್ಮಿಸುವ ಕಾಮಗಾರಿಗಳನ್ನು ಕೊಡಲಾಗಿದೆ. ಟೆಂಡರ್‌ಗಿಟ್ಟ ಮೊತ್ತ 556-35 ಕೋಟಿಗಳು. ಪರಿಷ್ಕೃತ ಮೊತ್ತ 564-76 ಕೋಟಿಗಳು? ಸದರಿ ಕಂಪನಿಗೆ 9% ಹೆಚ್ಚುವರಿ ಪ್ರಿಮಿಯಂ ನೀಡಿ ಒಟ್ಟು 615-56 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಪಿಡಬ್ಲೂಡಿ ಕಾಯ್ದೆ ಪ್ರಕಾರ ಕಡಿಮೆ ಮೊತ್ತ ಹೊಂದಿದವರು ಬಿಡ್ಡುದಾರರಾದರೆ, ಇಲ್ಲಿ ಟೆಂಡರ್ ಮೊತ್ತವನ್ನೇ ಪರಿಷ್ಕರಿಸಿದ್ದಾರೆ. ಜತೆಗೆ +9% ಹೆಚ್ಚುವರಿ ಹಣ ನೀಡಿ ಗುತ್ತಿಗೆ ನೀಡಲಾಗಿದೆ. ಸದರಿ ಕಂಪನಿಯು ನಿಜವಾದ ಕಾಮಗಾರಿಯನ್ನೇ ಆರಂಭ ಮಾಡಿಲ್ಲ. ಆದರೂ, ಈ ಕಂಪನಿಗೆ 32.70 ಕೋಟಿ ರೂ. ಬಿಲ್ ಪಾವತಿಯಾಗಿದೆ. ಈಗಾಗಲೆ 16 ತಿಂಗಳು ಕೆಲಸದ ಅವಧಿ ಮುಗಿದು ಹೋಗಿದೆ. ಕಾಮಗಾರಿ ಮುಗಿಸಲು ಇನ್ನೂ 8 ತಿಂಗಳು ಮಾತ್ರ ಬಾಕಿ ಇದೆ!
ಪ್ಯಾಕೇಜ್ ನಂಬರ್-2 ಮೆ|| ಮೇಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಬಾಲನಗರ ಹೈದರಬಾದ-53, ಎಂಬ ಕಂಪನಿಗೆ ರೈಸಿಂಗ್ ಲೈನ್, ಸಂಗ್ರಹ ತೊಟ್ಟಿ 12500 ಹೆಕ್ಟರ್ ಪೈಪ್‌ಲೈನ್ ಮತ್ತು ಡ್ರಿಪ್ ಅಳವಡಿಸುವ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಇಲ್ಲೂ ಕೂಡ ಅದೇ ಅಕ್ರಮ ನಡೆದಿದೆ. ಗುತ್ತಿಗೆಗೆ ಇಟ್ಟ ಮೊತ್ತ 552-17 ಕೋಟಿ ರೂ. ಪರಿಷ್ಕೃತ ಮೊತ್ತ 561-55 ಕೋಟಿ.ರೂ. ಹೆಚ್ಚುವರಿಯಾಗಿ 9% ಪ್ರಿಮಿಯಂ ನೀಡಿದ್ದಾರೆ. ಅಂದರೆ, ಪರಿಷ್ಕೃತ ದರದ ಮೇಲೆ ೯% ಸೇರಿಸಿದ್ದಾರೆ. ಒಟ್ಟು ಇದುವರೆಗೆ ೨೦% ಕಾಮಗಾರಿ ಮಾಡಿರುವುದಿಲ್ಲ. ಆದರೆ, ಸದರಿ ಕಂಪನಿಗೆ 223-30 ಕೋಟಿ ಬಿಲ್ ಪಾವತಿ ಮಾಡಲಾಗಿದೆ. ಈಗಾಗಲೆ 16 ತಿಂಗಳು ಕಳೆದಿವೆ. ಇನ್ನು 8 ತಿಂಗಳು ಮಾತ್ರ ಕಾಮಗಾರಿ ಮುಗಿಸಲು ಬಾಕಿ ಇವೆ.
ಪ್ಯಾಕೇಜ್ ನಂಬರ್-3 ಲಿಂಗಸೂಗೂರು ಬಿಜೆಪಿಯ ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿಯ ಹಾಲಿ ಅಧ್ಯಕ್ಷರಾದ ಮಾನಪ್ಪ ಡಿ. ವಜ್ಜಲ ಅವರಿಗೆ ಸೇರಿದ ಮೆ|| ನಾಗಪ್ಪ ಡಿ. ವಡ್ಡರ್ ಆ್ಯಂಡ್ ಕಂಪನಿಗೆ 11600 ಹೆಕ್ಟರ್ ಟರ್ನ್ ಕೀ ಆಧಾರಿತ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. 21 ಕೀ.ಮೀ 2.30 ಮೀಟರ್ ವ್ಯಾಸದ ಪೈಪ್‌ಲೈನ್ ನಿಮಾ೯ಣ, ಎರಡು ಡೆಲವರಿ ಚಂಬರ್ ಹಾಗೂ 11600 ಹೆಕ್ಟರ್ ಜಮೀನಿಗೆ ಗೆ ಡ್ರಿಪ್‌ಲೈನ್ ಕಾಮಗಾರಿ ಮಾಡುವ ಹೊಣೆ ಈ ಕಂಪನಿಗೆ ವಹಿಸಿದ್ದಾರೆ. ಆರಂಭದಲ್ಲಿ ಸದರಿ ಕಂಪನಿಗೆ ಪೂರ್ವಾರ್ಹತೆ ತಾಂತ್ರಿಕ ನೈಪುಣ್ಯತೆ ಇಲ್ಲ ಎಂದು ಇವರ ಬಿಡ್ ತಿರಸ್ಕೃತವಾಗಿದೆ. ೫೦% ರಷ್ಟು ತಾಂತ್ರಿಕ ನೈಪುಣ್ಯದ ಅರ್ಹತೆ ಇರಬೇಕು. ಆದರೆ, ಸದರಿ ಕಂಪನಿ ಮಿಸ್ಟರ್ ವಿಜಯೇಂದ್ರವರ ಪ್ರಭಾವ ಬಳಸಿ ಪುನಾ: ಟೆಂಡರ್ ಮಾಡಿಸಿ ಯಶಸ್ವಿ ಬಿಡ್ಡುದಾರ ಪಟ್ಟಕ್ಕೇರಿದೆ. ನಿಗಮದ 121 ಹಾಗೂ 122 ನೇ ಮಂಡಳಿಯ ಸಭೆಯ ಠರಾವು ನೋಡಿದರೆ ಇವರ ನಿಜವಾದ ಬಣ್ಣ ಬಯಲಾಗುತ್ತದೆ. ಟೆಂಡರ್‌ಗಿಟ್ಟ ಮೊತ್ತ 551-98 ಕೋಟಿ.ರೂ. ಪರಿಷ್ಕೃತ ಮೊತ್ತ 563-64 ಕೋಟಿ.ರೂ.ಗಳು? ಹೆಚ್ಚುವರಿ ಪ್ರಮಿಯಾ 5% ನೀಡಲಾಗಿದೆ. ಒಟ್ಟು ಗುತ್ತಿಗೆ ಮೊತ್ತ 591-82 ಕೋಟಿ.ರೂ.ಗಳಿಗೆ ಗುತ್ತಿಗೆ ನೀಡಲಾಗಿದೆ! ಅತ್ಯಂತ ಕುತೂಹಲದ ಸಂಗತಿ ಎಂದರೆ, ಮೊಬಲೈಜೆಷನ್‌ಗೆಂದು 7% ಅಡ್ವಾನ್ಸ್ ಪಾವತಿ ಮಾಡುವ ಬದಲು ಮಾನಪ್ಪ ವಜ್ಜಲ ಕಂಪನಿಗೆ 230 ಕೋಟಿ. ಅಂದರೆ, 40% ಅಡ್ವಾನ್ಸ್ ಹಣ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಸದರಿ ಕಂಪನಿ 30% ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ .ಆದರೂ, ನಿಗಮವು 59-64% ಕಾಮಗಾರಿ ಪೂರ್ಣಗೊಂಡಿದೆ ಎಂದು ವರದಿ ಬರೆದು ಕೊಂಡಿದೆ. ಈಗಾಗಲೆ ಇವರಿಗೆ 353 ಕೋಟಿ ಬಿಲ್ ಪಾವತಿ ಮಾಡಲಾಗಿದೆ. ಇದು ಅಕ್ರಮಗಳ ಪರಾಕ್ರಮವಾಗಿದೆ. ಸದರಿ ಕಂಪನಿ ಡಿಜೈನನ್ನೇ ಬದಲಿಸಿ ಬಿಟ್ಟಿದೆ. ಮಾನಪ್ಪ ವಜ್ಜಲ ಖರೀದಿಸಿದ ಕೋಠಾ ಸೀಮಾಂತರದ 200 ಎಕರೆ ಜಮೀನಿಗೆ ನೀರು ಕೊಡಲು ಮುಖ್ಯ ಪೈಪ್‌ಲೈನ್ ಹಾಕುವ ಕಾಮಗಾರಿ ನಡೆದಿದೆ. ಬಲದಂಡೆ ರಿಪೇರಿ ಹಾಗೂ ಮುಂದಿನ ಚುನಾವಣೆಯ ತಯಾರಿ! ನಂದವಾಡಗಿಯ ಕಾಮಗಾರಿಗಳಲ್ಲಿ ಅಕ್ರಮ, ಅವ್ಯವಹಾರ, ಅನ್ಯಾಯ ತುಂಬಿ ತುಳುಕುತ್ತಿದೆ. ವಿಶೇಷವಾಗಿ ಎನ್.ಡಿ.ವಡ್ಡರ್ ಆ್ಯಂಡ್ ಕಂಪನಿ ನಂದವಾಡಗಿಯನ್ನು ಕೊಂದ್ಹಾಕಿದೆ ಎಂದು, ಸದರಿ ಕಾಮಗಾರಿಯನ್ನು ನಿಲ್ಲಿಸಿ ತನಿಖೆ ನಡೆಸಲು ನಾವು ದಿ: 28-5-2021 ರಂದು ಮುಖ್ಯಮಂತ್ರಿಗಳಿಗೆ/ನಿಗಮದ ಅಧ್ಯಕ್ಷರಿಗೆ ದೂರು ನೀಡಿದರೆ, “ಸನ್ಮಾನ್ಯ” ಯಡಿಯೂರಪ್ಪನವರು.. ಮಾನಪ್ಪ ವಜ್ಜಲವರ ಕಂಪನಿಗೆ ಎನ್‌ಆರ್‌ಬಿಸಿಯ1-15 ಹಾಗೂ 16-18ವಿತರಣಾ ಕಾಲುವೆ, ಉಪ ಕಾಲುವೆಯಗಳ ವಿಸ್ತೀರ್ಣ ನವೀಕರಣ, ಮುಖ್ಯ ಕಾಲುವೆ ಸಂರಚನೆಯ ಆಧುನಿಕರಣಕ್ಕೆಂದು 1466 ಕೋಟಿ.ರೂ. ಗುತ್ತಿಗೆ ನೀಡಿ ಸದರಿ ಕಂಪನಿಯ ಭ್ರಷ್ಟಚಾರವನ್ನು ರಾಜಾರೋಷವಾಗಿ ಎತ್ತಿ ಹಿಡಿದ್ದಿದ್ದಾರೆ. ಲಿಂಗಸೂಗೂರು ಹಾಗೂ ದೇವದುರ್ಗ ಶಾಸಕರು ಅಖಂಡ ಮೌನ ತಾಳಿದ್ದಾರೆ. ಬಿಜೆಪಿ ಸರಕಾರದಲ್ಲಿ ಭ್ರಷ್ಟರಿಗೆ ಭಾರಿ ಬಹುಮಾನ ಘೋಷಣೆಯಾಗಿದೆ. ಕಳೆದ ವರ್ಷ ಎನ್‌ಆರ್‌ಬಿಸಿ ಮುಖ್ಯ ನಾಲೆಯ ದುರಸ್ಥಿಗಾಗಿ 940 ಕೋಟಿ ಖರ್ಚು ಮಾಡಿದ ಜಾಗದಲ್ಲೇ ಪುನಾ: ಕೆಲಸ ಮಾಡುವ ಅವಶ್ಯಕತೆ ಇತ್ತೇ? ರಾಜ್ಯ ಬಿಜೆಪಿ ಸರಕಾರದ ಈ ಭ್ರಷ್ಟ ಹಾಗೂ ಲೂಟಿಕೋರ ಯೋಜನೆಗಳ ವಿರದ್ದ 01-07-2021 ರಿಂದ ಲಿಂಗಸೂಗೂರಿನಲ್ಲಿ ಅನಿರ್ದಿಷ್ಟ ಕಾಲದ ರೈತ ಹೋರಾಟ ಆರಂಭಿಸಲು ಸಿಪಿಐ(ಎಂಎಲ್) ನಿರ್ಧರಿಸಿದೆ. ಸಾಧ್ಯವಾದಷ್ಟು ಈ ಸುದ್ದಿಯನ್ನು ಶೇರ್ ಮಾಡುವ ಮುಖಾಂತರ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವಂತೆ ಮಾಡಬೇಕೆಂದು ಮುಖ ಪುಟದ ಎಲ್ಲಾ ಮಿತ್ರರಲ್ಲಿ ಮನವಿ ಮಾಡಿ ಕೊಳ್ಳುತ್ತೇವೆ. ಧನ್ಯವಾದಗಳು ಆರ್.ಮಾನಸಯ್ಯ ರಾಜ್ಯ ಮುಖಂಡರು ಸಿಪಿಐ(ಎಂಎಲ್) ಜಿ.ಅಮರೇಶ ಜಿಲ್ಲಾ ಕಾಯ೯ದಶಿ೯ ಸಿಪಿಐ(ಎಂಎಲ್)
ವರದಿ – ಸಂಪಾದಕೀಯ