ಸಿಂಧನೂರು: ಒಕ್ಕೂಟ ಸರ್ಕಾರದ ವಿರುದ್ದ ‘ರೈತಪರ ಹೋರಾಟ ಸಮಿತಿ’ಯಿಂದ ಪ್ರತಿಭಟನೆ
ಸಂಯುಕ್ತ ಕಿಸಾನ್ ಮೋರ್ಚಾ ಶನಿವಾರ ದೇಶದಾದ್ಯಂತ “ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ” ಆಂದೋಲನಕ್ಕೆ ಕರೆ ನೀಡಿತ್ತು. ಈ ಕರೆಯನ್ನು ಬೆಂಬಲಿಸಿ “ರೈತ ವಿರೋಧಿ ಕೃಷಿ ಕಾನೂನು ರದ್ದತಿ ಹೋರಾಟ ಸಮಿತಿ, ಸಿಂಧನೂರು” ವತಿಯಿಂದ ಸಿಂಧನೂರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಇಂದಿಗೆ 7 ತಿಂಗಳು ಪೂರೈಸಿದೆ. ದೆಹಲಿಯ ಗಡಿಯ ಸುತ್ತಲು ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ರೈತರ ಹೋರಾಟ ಎಂಟನೆ ತಿಂಗಳಿಗೆ ಕಾಲಿಡುತ್ತಿದ್ದರೂ ಒಕ್ಕೂಟ ಸರ್ಕಾರ ವಿವಾದಾತ್ಮಕ ಕಾಯ್ದೆಯ ಕುರಿತು ಯಾವುದೆ ಸಮರ್ಪಕವಾದ ನಿರ್ಧಾರವನ್ನು ಪ್ರಕಟಿಸಿಲ್ಲ. ಇದನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ದೇಶದಾದ್ಯಂತ “ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ” ಆಂದೋಲನಕ್ಕೆ ಕರೆ ನೀಡಿತ್ತು. ಕಿಸಾನ್ ಮೋರ್ಚಾದ ಕರೆಯನ್ನು ಬೆಂಬಲಿಸಿರುವ ಸಿಂಧನೂರು ಹೋರಾಟ ಸಮಿತಿಯು ಒಕ್ಕೂಟ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ನಡೆಸಿ ಸಿಂಧನೂರು ತಹಸೀಲಲ್ದಾರ್ ಮೂಲಕ, ಕೃಷಿ ಕಾನೂನಿನ ಕುರಿತು ರೈತರ ಆಕ್ರೋಶ ಮತ್ತು ಅಸಮಾಧಾನ ಬಗ್ಗೆ ಮನವಿ ನೀಡಲಾಯಿತು.
ಸಮಿತಿಯು ರಾಷ್ಟ್ರಪತ್ರಿಗೆ ಸಲ್ಲಿಸಿದ ಹಕ್ಕೊತ್ತಾಯಗಳು:
- ಕೇಂದ್ರ ಸರಕಾರ ಜಾರಿಗೆ ತಂದಿರುವ, ರೈತರಿಗೆ ಮರಣಶಾಸನವಾಗಿರುವ ಮೂರು ಕೃಷಿ ಕಾನೂನುಗಳು ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ-2020 ವಾಪಸ್ ಪಡೆಯಬೇಕು.
- ರೈತ ಹೋರಾಟಗಾರರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯಬೇಕು.
- ಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು.
- ಕಳೆದ ವರ್ಷ ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಜೋಳ ಮಾರಾಟ ಮಾಡಿರುವ ರೈತರ ಖಾತೆಗಳಿಗೆ ಶೀಘ್ರವಾಗಿ ಹಣ ಜಮಾ ಮಾಡಬೇಕು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ಎಸ್. ದೇವೇಂದ್ರ ಗೌಡ, ಡಿಎಸ್‌ಎಸ್ ರಮೇಶ್ ಪಾಟೀಲ್, ‘ಸಮುದಾಯ’ ಕಾರ್ಯದರ್ಶಿ ಡಿಎಚ್ ಕಂಬಳಿ, ಮನುಜಮತ ಬಳಗದ ಬಸವರಾಜ ಬಾದರ್ಲಿ, ಚಿಂತಕರಾದ ಚಂದ್ರಶೇಖರ ಗೊರೆಬಾಳ, ರೈತ ಸಂಘಟನೆಯ ರಾಮಯ್ಯ ಜವಳಗೇರಾ, ಆರ್‌ವೈಎಫ್‌ನ ನಾಗರಾಜ್ ಪೂಜಾರ್, ಸಿಪಿಐ ಪಕ್ಷದ ಬಾಷುಮೀಯಾ, ಸಿಪಿಐಎಂನ ಶೇಖ್‌ಷಾ ಖಾದ್ರಿ, ಶಂಕರ್ ವಾಲೇಕಾರ್, ಹುಲಿಗೇಶ್ ಬಾದರ್ಲಿ, ಉಪನ್ಯಾಸಕರಾದ ನಾರಾಯಣ ಬೆಳಗರ್ಕಿ, ಚಾಂದ್ ಪಾಷ ಜಾಗಿರದಾರ್, ಚಿಟ್ಟಿಬಾಬು, ಚಾಂದ್ ಕೆಜೆಎಸ್ ಭಾಗವಹಿಸಿದ್ದರು.
- ವರದಿ – ಸಂಪಾದಕೀಯ