ನಾಡ ಪ್ರಭು ಕೆಂಪೇಗೌಡರು
ವಿಶ್ವದ ಹೆಮ್ಮೆಯ ನಗರಗಳ ಪಟ್ಟಿಗೆ ಸೇರಿರುವ ಬೆಂಗಳೂರನ್ನು ನಿರ್ಮಿಸಿದವರು ಕೆಂಪೇಗೌಡರು. 1537ರಲ್ಲಿ ಈ ನಗರದ ನಿರ್ಮಾಣ ಆಯಿತು. ಕೆಂಪನಂಜೇಗೌಡರ ಸುಪುತ್ರರಾದ ಕೆಂಪೇಗೌಡರಿಗೆ ಬಾಲ್ಯದಲ್ಲೇ ನಾಯಕತ್ವದ ಲಕ್ಷಣಗಳಿದ್ದವು.ಹೆಸರುಘಟ್ಟದ ಸಮೀಪವಿರುವ ತಿವರುಕಂಡಪುರದ ಗುರುಕುಲದಲ್ಲಿ ಒಂಭತ್ತು ವರ್ಷ ವಿದ್ಯಾಭ್ಯಾಸ ಮಾಡಿದ ಇವರು ಬಹುಭಾಷಾ ಪಂಡಿತರಾಗಿದ್ದರು. ಕೆಂಪೇಗೌಡರ ದೂರದರ್ಶಿತ್ವ, ಮುತ್ಸದ್ದಿತನ ಅವರ್ಣನೀಯ. ಇವರು ಒಮ್ಮೆ ಹೆಸರುಘಟ್ಟದ ಅರಣ್ಯದಲ್ಲಿ ಬೇಟೆ ಆಡುತ್ತಿದ್ದಾಗ ಭವಿಷ್ಯದ ನಗರ ನಿರ್ಮಿಸುವ ಕನಸು ಕಂಡರು. ಅಂತಿಥ ನಗರವಲ್ಲ. ಸಕಲ ಸೌಲಭ್ಯಗಳಿಂದ ಕೂಡಿದ ಸುಸಜ್ಜಿತ ನಗರದ ಕನಸು ಅದು. ವಿಜಯನಗರದ ಅರಸು ಅಚ್ಯುತರಾಯನ ಅಪ್ಪಣೆ ಪಡೆದ ಗೌಡರು 1532ರಲ್ಲಿ ಬೆಂಗಳೂರು ಕೋಟೆ ನಿರ್ಮಿಸಿದರು. ಎಂಟು ಬಾಗಿಲುಗಳಿಂದ ಕೂಡಿದ ಕೋಟೆ ಅದು. ಕೋಟೆಯೊಳಗೆ ಎರಡು ವಿಶಾಲವಾದ ರಸ್ತೆಗಳು, ಅದಕ್ಕೆ ಸಮಾನಾಂತರವಾಗಿ ಇತರ ರಸ್ತೆಗಳು ನಿರ್ಮಾಣವಾದವು. ಇದಾದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ವರ್ಗಾವಣೆ ಆಯಿತು. ಇದು ಸುಸಜ್ಜಿತವಾದ ಬೆಂಗಳೂರು ನಗರದ ಹುಟ್ಟಿಗ ನಾಂದಿ ಆಯಿತು.ಬೆಂಗಳೂರು ಅತ್ಯಂತ ಪ್ರಮುಖವಾದ ವಾಣಿಜ್ಯ ಕೇಂದ್ರವಾಗಿ ಹೆಸರು ಮಾಡಬೇಕು ಅನ್ನುವುದು ಕೆಂಪೇಗೌಡರ ಮಹದಾಸೆ. ಅದಕ್ಕೆ ಅನುಗುಣವಾಗಿ ಅವರು ನಗರವನ್ನು ರೂಪುಗೊಳಿಸತೊಡಗಿದರು.
ವರದಿ – ಹರೀಶ ಶೇಟ್ಟಿ ಬೆಂಗಳೂರು