ನಂ 1 ಕೈಗಾರಿಕಾ ಸ್ನೇಹೀ ರಾಜ್ಯವಾಗುವತ್ತ ದಾಪುಗಾಲು: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಎಂಎಸ್‌ಎಂಇ ಗಳಿಗೆ ಅಗತ್ಯ ಪ್ರೋತ್ಸಾಹ…
ಬೆಂಗಳೂರು ಜುಲೈ 02: ಕರೋನಾ ಸಂಕಷ್ಟ ಕಾಲದಲ್ಲೂ ಕರ್ನಾಟಕ ರಾಜ್ಯ ಅತಿ ಹೆಚ್ಚು ಬಂಡವಾಳ ಹೂಡಿಕೆಯ ಪ್ರಸ್ತಾಪಗಳನ್ನು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಹೊರತಂದಿರುವ ಕ್ರಾಂತಿಕಾರಿ ಕಾನೂನುಗಳು ಹಾಗೂ ನೀತಿಗಳಿಂದ ಕರ್ನಾಟಕ ರಾಜ್ಯ ದೇಶದಲ್ಲಿ ನಂ 1 ಕೈಗಾರಿಕಾ ಸ್ನೇಹಿ ರಾಜ್ಯವಾಗುವತ್ತ ದಾಪುಗಾಲು ಇಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಹೇಳಿದರು. ಇಂದು ಬೆಂಗಳೂರು ನಗರದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ, ಬೆಂಗಳೂರು ಉತ್ತರ ಪೀಣ್ಯ ಘಟಕದ ಉದ್ಘಾಟನೆಯನ್ನು ಮಾಡಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯವನ್ನು ಇನ್ನೂ ಹೆಚ್ಚು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೈಗೊಂಡಿರುವ ಕ್ರಾಂತಿಕಾರಿ ಕಾನೂನು ಹಾಗೂ ನೀತಿಗಳು ಫಲ ನೀಡುತ್ತಿವೆ. ಕರೋನಾ ಸಂಕಷ್ಟ ಕಾಲದಲ್ಲೂ ಕೂಡಾ ಬಂಡವಾಳ ಹೂಡಿಕೆಯ ಪ್ರಸ್ತಾವನೆಯಲ್ಲಿ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದೇ ರೀತಿಯ ಟ್ರೆಂಡ್ ಮುಂದುವರೆದಲ್ಲಿ ನಂ 1 ಸ್ಥಾನ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು. ರಾಜ್ಯ ಹಾಗೂ ಕೇಂದ್ರ ಸರಕಾರ ಗಳು ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ಕರೋನಾ ಸಂಕಷ್ಟ ಕಾಲದಲ್ಲಿ ಎಲ್ಲಾ ಕ್ಷೇತ್ರಗಳು ತೀವ್ರ ತೊಂದರೆಗೆ ಈಡಾಗಿವೆ. ಇದಕ್ಕೆ ಸಣ್ಣ ಕೈಗಾರಿಕೆಗಳು ಹೊರತಾಗಿಲ್ಲ. ದೇಶದ ಜಿಡಿಪಿ ಹಾಗೂ ಉದ್ಯೋಗಾವಕಾಶ ಹೆಚ್ಚಳಕ್ಕೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ. ಇವುಗಳ ಪುನಶ್ಚೇತನಕ್ಕೆ ರಾಜ್ಯ ಸರಕಾರ ಹೆಚ್ಚಿನ ಒಲುವ ನೀಡುತ್ತಿದೆ ಎಂದರು.
ಕೈಗಾರಿಕೆಗಳಿಗೆ ವಿದ್ಯುತ್ ದರ ಇಳಿಕೆ: ರಾಜ್ಯದಲ್ಲಿ ಕೈಗಾರಿಕೆಗಳ ಬಳಸುವ ವಿದ್ಯುತ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿರುವುದನ್ನ ಮುಖ್ಯಮಂತ್ರಿ ಗಳ ಗಮನಕ್ಕೆ ತರಲಾಗಿದೆ. ಅವರು ಕೈಗಾರಿಕೆಗಳಿಗೆ ವಿಧಿಸುವ ಶುಲ್ಕದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಒಲವು ತೋರಿಸಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದರು.
ಪೀಣ್ಯ ಕೈಗಾರಿಕಾ ಟೌನ್‌ಶಿಪ್: ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸುತ್ತಿನ ಚರ್ಚೆಗಳು ನಡೆದಿವೆ. ಆದರೆ, ಇವುಗಳ ಘೋಷಣೆಗಾಗಿ ಹಲವಾರು ಇಲಾಖೆಗಳ ಅನುಮತಿಯ ಅಗತ್ಯವಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಕೈಗಾರಿಕೆಗಳಿಗೆ ಆಸ್ತಿ ತೆರಿಗೆ: ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಗಳ ಮಧ್ಯದಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲಾಬನ್ನು ಘೋಷಿಸಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳಲ್ಲಾಗಿದೆ. ಇದರ ಬಗ್ಗೆಯೂ ಶೀಘ್ರದಲ್ಲೇ ತಿರ್ಮಾನ ಕೈಗೊಳ್ಳಲಾಗುವುದು ಎಂದರು.
ವಿದ್ಯುತ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ: ಸಣ್ಣ ಕೈಗಾರಿಕೆಗಳಿಗೆ ಆಕ್ಯೂಪೆನ್ಸಿ ಪ್ರಮಾಣ ಪತ್ರದ ಬಗ್ಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಆದರೆ, ಇದುವರೆಗೂ ಅದರ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಶ್ರೀ ಎನ್ ತಿಪ್ಪೇಸ್ವಾಮಿ, ಲಘು ಉದ್ಯೋಗ ಭಾರತಿ ಕರ್ನಾಟಕದ ಅಧ್ಯಕ್ಷರಾದ ಪಿ.ಎಸ್.ಶ್ರೀಕಂಠ ದತ್ತ, ಲಘು ಉದ್ಯೋಗ ಭಾರತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯವರಾದ ಕೆ.ನಾರಾಯಣ ಪ್ರಸನ್ನ, ಲಘು ಉದ್ಯೋಗ ಭಾರತಿ ಕರ್ನಾಟಕ, ಬೆಂಗಳೂರು ಉತ್ತರದ ಅಧ್ಯಕ್ಷರಾದ ಅಶ್ವತ್ಥ ನಾರಾಯಣ ಸೇರಿದಂತೆ ನೂರಾರು ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.
ವರದಿ – ಹರೀಶ ಶೇಟ್ಟಿ ಬೆಂಗಳೂರು