ಕೊರೊನಾ 3ನೇ ಅಲೆ, ಮಕ್ಕಳಿಗೆ ಗಂಭೀರ ಪರಿಣಾಮ. ಅನ್ನೋದೇ ಅವೈಜ್ಞಾನಿಕ ಸಚಿವ ಡಾ. ಸುಧಾಕರ್.

Spread the love

ಕೊರೊನಾ 3ನೇ ಅಲೆ, ಮಕ್ಕಳಿಗೆ ಗಂಭೀರ ಪರಿಣಾಮ. ಅನ್ನೋದೇ ಅವೈಜ್ಞಾನಿಕ ಸಚಿವ ಡಾ. ಸುಧಾಕರ್.

ದಾವಣಗೆರೆ. ಜುಲೈ 10: “ಕೊರೊನಾ ಮೂರನೇ ಅಲೆ ಬರಬೇಕು ಎಂದೇನಿಲ್ಲ. ನಾವು ಯಾವ ರೀತಿ ಇರುತ್ತೇವೆಯೋ ಆ ರೀತಿಯಲ್ಲಿ ಕೊರೊನಾ ನಿಗ್ರಹ ಆಗುತ್ತದೆ. ಲಸಿಕೆ ತೆಗೆದುಕೊಂಡು ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಕೊರೊನಾ ೩ನೇ ಅಲೆ ಬರುತ್ತದೆ, ಮಕ್ಕಳಿಗೆ ಹೆಚ್ಚಾಗಿ ಕಾಡುತ್ತದೆ ಎಂಬುದೇ ಅವೈಜ್ಞಾನಿಕ. ಸೋಂಕು ಬಂದರೂ ಮಕ್ಕಳಿಗೆ ಗಂಭೀರವಾದ ವ್ಯಾಧಿ ಬರುವುದಿಲ್ಲವೆಂದು ಪರಿಣಿತರು ಹಾಗೂ ತಜ್ಞರು ನೀಡಿರುವ ವರದಿಯಲ್ಲಿ ಹೇಳಲಾಗಿದೆ,” ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು. ದಾವಣಗೆರೆಯ ಜಿಎಂಐಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “”ಮಕ್ಕಳಿಗೆ ಮೂರನೇ ಅಲೆಯಲ್ಲಿ ಪಾಸಿಟಿವ್ ಬಂದರೂ ಗಂಭೀರ ಪರಿಣಾಮ ಬೀರುವುದಿಲ್ಲ.‌ ಇದುವರೆಗೆ ಎರಡೂವರೆ ಕೋಟಿ ಲಸಿಕೆಗಳನ್ನು ನೀಡಿದ್ದೇವೆ. ಆಗಸ್ಟ್ ತಿಂಗಳಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಲಸಿಕೆ ಬರಲಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುವುದು,” ಎಂದು ತಿಳಿಸಿದರು. “ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಶೇ.1.5 ಈಗ ಬರುತ್ತಿದೆ.‌ ಯಾರೂ ಕೂಡ ಮೈಮರೆಯಬಾರದು. ಐಸಿಎಂಆರ್, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈಗಿರುವ ಕ್ರಮಗಳನ್ನು ಮುಂದುವರಿಸುವಂತೆ ಹೇಳಿದ್ದಾರೆ.‌ ಶೇ.60ರಿಂದ 70ರಷ್ಟು ಎರಡು ಡೋಸ್ ಆಗುವವರೆಗೆ ಎಲ್ಲರೂ ಆರೋಗ್ಯದ ಬಗ್ಗೆ ಗಮನ ನೀಡಬೇಕು,” ಎಂದು ಹೇಳಿದರು. “ಎಚ್ಚರಿಕೆ ತಪ್ಪಿದರೆ ಆಪತ್ತು ಖಚಿತ. ಈಗಾಗಲೇ ಕೇರಳದಲ್ಲಿ ದಿನಕ್ಕೆ ೧೫,೦೦೦ ಕೊರೊನಾ ಪ್ರಕರಣಗಳು ದಿನಕ್ಕೆ ವರದಿಯಾಗುತ್ತಿವೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ರಾಜ್ಯಕ್ಕೆ ಹಂಚಿಕೊಂಡಿರುವ ಕಾರಣ ತೀವ್ರ ಎಚ್ಚರಿಕೆ ವಹಿಸಬೇಕಿದೆ. ಎರಡು ಅಲೆಗಳಲ್ಲಿ ಅಲ್ಲಿ ಜಾಸ್ತಿಯಾದ ಕಾರಣ ಇಲ್ಲೂ ಜಾಸ್ತಿಯಾಗಿತ್ತು. ಮರುಕಳಿಸಬಾರದು ಎಂದರೆ ನಾವೆಲ್ಲರೂ ಎಚ್ಚರಿಕೆ ವಹಿಸಲೇಬೇಕಿದೆ. ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ,” ಎಂದು ಆತಂಕ ವ್ಯಕ್ತಪಡಿಸಿದರು. “ಹೈಕೋರ್ಟ್ ಲಸಿಕೆ ನೀಡಿಕೆ ಸಂಬಂಧ ನಿರ್ದೇಶನ ನೀಡಿದೆ‌. ಬದ್ಧತೆ ಹಾಗೂ ಭಾವನೆಯನ್ನು ಕೋರ್ಟ್ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ಖಾಸಗಿಯವರು ಲಸಿಕೆ ನೀಡುತ್ತಿರುವುದರಿಂದ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ,” ಎಂದು ಮಾಹಿತಿ ನೀಡಿದರು. “ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಸರ್ಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ಸಿಎಂ ಯಡಿಯೂರಪ್ಪ ಅವರು ಸಹ ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ದೃಢ ನಿರ್ಧಾರ ತೆಗೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಮೆಡಿಕಲ್ ಕಾಲೇಜು ಆಗಲಿದೆ. ಇದರ ವೀಕ್ಷಣೆಗೆ ನಾನು ಬಂದಿದ್ದೇನೆ,” ಎಂದು ಹೇಳಿದರು. ಇನ್ನು ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಸಚಿವ ಸಿ‌.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಸುಧಾಕರ್, “ಯಾರು ಪರೀಕ್ಷೆ ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ಯಾರು ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ತಿಳಿದಿಲ್ಲ. 17 ಶಾಸಕರು ಪರೀಕ್ಷೆ ಬರೆದು ಪಾಸಾಗಿದ್ದೇವೆ,” ಎಂದು ಪ್ರತಿಕ್ರಿಯೆ ನೀಡಿದರು..

ವರದಿ –  ಸಂಪಾದಕೀಯ

Leave a Reply

Your email address will not be published. Required fields are marked *