ದೀಪಾವಳಿ ವೇಳೆಗೆ “ರಂಗಸಮುದ್ರ” ತೆರೆಗೆ ಬರುವ ಸಾಧ್ಯತೆ.
ಸದ್ದಿಲ್ಲದೆ ಆರಂಭವಾಗಿದ್ದ “ರಂಗ ಸಮುದ್ರ” ಚಿತ್ರದ ಚಿತ್ರೀಕರಣ ಸಹ ಬಹುತೇಕ ಪೂರ್ಣವಾಗಿದೆ. ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಕಿಚ್ಚ ಸುದೀಪ್ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣಗೊಳಿಸಿ, ಶುಭ ಕೋರಿದ್ದರು. ಪೋಸ್ಟರ್ ನಲ್ಲೆ ಗಮನ ಸೆಳೆದಿದ್ದ ರಂಗಸಮುದ್ರ, ವಿಭಿನ್ನ ಶೈಲಿಯಿಂದ ಕುತೂಹಲ ಮೂಡಿಸಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಗ್ರಾಮವೊಂದರ ಹೆಸರು “ರಂಗ ಸಮುದ್ರ”, ಗ್ರಾಮದ ಹೆಸರೇ ಈಗ ಚಿತ್ರದ ಶೀರ್ಷಿಕೆಯಾಗಿದೆ. 20 ವರ್ಷಗಳ ಹಿಂದೆ ಈ ಊರಿನಲ್ಲಿ ನಡೆದ ಫಟನೆಯೇ ಚಿತ್ರದ ಪ್ರಮುಖ ಕಥಾವಸ್ತು. ರಂಗಾಯಣ ರಘು ಮತ್ತು ಸಂಪತ್ ರಾಜ್ ಪ್ರಧಾನ ಪಾತ್ರದಲ್ಲಿದ್ದು ಇದೇ ಮೊದಲಿಗೆ ಹೊಸ ಆಯಾಮದ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಇವರಲ್ಲದೇ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಸೂರೆಗೊಂಡಿರುವ ರಂಗಿತರಂಗ ಖ್ಯಾತಿಯ ಕಾರ್ತಿಕ್, ದಿವ್ಯಾಗೌಡ, ಗುರುರಾಜ್ ಹೊಸಕೋಟೆ, ಮೋಹನ್ ಜುನೇಜ, ಮೂಗು ಸುರೇಶ್, “ಡಬ್ ಸ್ಮ್ಯಾಷ್ ಖ್ಯಾತಿಯ ಬಾಲನಟಿ ಭೈರವಿ”, ಮನಸಾರೇ ಖ್ಯಾತಿಯ ಪ್ರಥಮ್, ಆಕೃತಿ ಖ್ಯಾತಿಯ ಪ್ರೀತಮ್, ಮಹೇಂದ್ರ, ಸದಾನಂದ, ಸ್ಕಂದ ತೇಜಸ್ ಮುಂತಾದವರು ”ರಂಗ ಸಮುದ್ರ” ದಲ್ಲಿ ಅಭಿನಯಿಸಿದ್ದಾರೆ. ಜನಪದ ಸೊಗಡಿನ ಪಕ್ಕಾ ದೇಸಿ ಕಥೆ ರಂಗಸಮುದ್ರದ ಹೆಗ್ಗಳಿಕೆ. ಮೈಸೂರು, ಬಿಜಾಪುರ, ಬೆಂಗಳೂರು, ಮಹಾರಾಷ್ಟ್ರ ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ. ಕನ್ನಡದ ಖ್ಯಾತ ನಿರ್ದೇಶಕರೊಡನೆ ಕಾರ್ಯನಿರ್ವಹಿಸಿರುವ ರಾಜಕುಮಾರ್ ಅಸ್ಕಿ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದು ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಐದು ಹಾಡುಗಳಿರುವ ರಂಗಸಮುದ್ರ ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ನೀಡುತ್ತಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಶ್ರೀಕಾಂತ್ (ಕೆ ಜಿ ಎಫ್) ಸಂಕಲನ, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ಹಾಗೂ ಧನಂಜಯ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ಸಂಕಲನ, ಡಬ್ಬಿಂಗ್ ಹಾಗೂ ಸಂಗೀತ ಸಂಯೋಜನೆ ಕಾರ್ಯಗಳು ಮುಗಿದಿದ್ದು ಎರಡು ದಿನದ ಚಿತ್ರೀಕರಣ ಹಾಗೂ ಇತರೇ ಕೆಲಸಗಳನ್ನು ಪೂರೈಸಿ ದೀಪಾವಳಿ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ತಯಾರಿಯಲ್ಲಿದ್ದೇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ.
ವರದಿ:- ಮೌನೇಶ್ ರಾಥೋಡ್ ಬೆಂಗಳೂರು