“78 ನೇ ನೀರಾವರಿ ಸಲಹಾ ಸಮಿತಿ ಸಭೆ”
2021-22 ನೇ ಸಾಲಿನ ಮುಂಗಾರು ಹಂಗಾಮಿನ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಬೆಳೆಗಳಿಗೆ ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ನೀರು ಹರಿಸುವ ಸಂಬಂಧ ರಚಿಸಿರುವ #ನೀರಾವರಿಸಲಹಾಸಮಿತಿ ಸಭೆಯು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭಾಂಗಣದಲ್ಲಿ ಅಧ್ಯಕ್ಷತೆ ವಹಿಸಿ ನಡೆಸಿಕೊಡಲಾಯಿತು.
*ಸಭೆಯಲ್ಲಿ ಪ್ರಮುಖವಾಗಿ ಸರ್ವಾನುಮತದಿಂದ ಮೂರು ನಿರ್ಣಯಗಳನ್ನು ತಗೆದುಕೊಳ್ಳಲಾಯಿತು*
- ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದ ಹಿನ್ನೀರಿನಿಂದ 17.4 ಟಿಎಂಸಿ ಹಾಗೂ ಭದ್ರಾ ಜಲಾಶಯದಿಂದ 12.5 ಟಿಎಂಸಿ ಒಟ್ಟು 29.9 ಟಿಎಂಸಿ ನೀರನ್ನು ಎತ್ತುವ ಮೂಲಕ ನೀರು ಹರಿಸಲು ಸರ್ಕಾರದ ಮಟ್ಟದಲ್ಲಿ ಡಿಪಿಆರ್ ತಯಾರಾಗಿದ್ದು, ಅದನ್ನು ಬದಲಾಯಿಸಿ 29 ಟಿಎಂಸಿ ನೀರನ್ನು ಸಂಪೂರ್ಣವಾಗಿ ತುಂಗಾ ಜಲಾಶಯದಿಂದ ಎತ್ತುವ ಮೂಲಕ ನೀರು ಹರಿಸುವಂತೆ ಹಾಗೂ ಡಿಪಿಆರ್ ಬದಲಾಯಿಸಲು ಸರ್ಕಾರಕ್ಕೆ ಮನವರಿಕೆ ಮಾಡುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
- ಮುಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಲು ಸರ್ಕಾರ ತೀರ್ಮಾನಿಸಿದ್ದಲ್ಲಿ ಅದನ್ನು ಭದ್ರಾ ನೀರಾವರಿ ಸಲಹಾ ಸಮಿತಿಯ ಸದಸ್ಯರ ಮುಂದೆ ಮಂಡಿಸಿ ನೀರಿನ ಲಭ್ಯತೆ ಅನುಸಾರ ಹಾಗೂ ಅಚ್ಚುಕಟ್ಟು ರೈತರ ಹಿತ ಕಾಪಾಡುವ ದೃಷ್ಟಿಯಿಂದ ಒಮ್ಮತದ ತೀರ್ಮಾನ ಪಡೆಯುವಂತೆ ತೀರ್ಮಾನಿಸಲಾಯಿತು.
- ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಲು ಸರ್ಕಾರಕ್ಕೆ ಪತ್ರ ಬರೆಯಲು ಆಗ್ರಹಿಸಲಾಯಿತು. ನಂತರ ಅಧಿಕಾರಿಗಳಿಂದ ಜಲಾಶಯದ ಪ್ರಸ್ತುತ ನೀರಿನ ಲಭ್ಯತೆಯ ಮಾಹಿತಿ ಹಾಗೂ ಕಳೆದ ಐದು ವರ್ಷಗಳ ಚಿತ್ರಣ ಪಡೆಯಲಾಯಿತು. ಇದರೊಂದಿಗೆ ಅಚ್ಚುಕಟ್ಟು ವ್ಯಾಪ್ತಿಯ ಪ್ರಮುಖ ರೈತ ಮುಖಂಡರೊಂದಿಗೆ ಸುಧೀರ್ಘವಾಗಿ ಚರ್ಚಿಸಿ ಬರುವ ಜುಲೈ 23ರ ಮಧ್ಯ ರಾತ್ರಿಯಿಂದ ನಿರಂತರ 120 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಸಭೆಯಲ್ಲಿ ಭದ್ರಾ ಕಾಡಾ ಪ್ರಾಧಿಕಾರದ ಎಲ್ಲಾ ನಿರ್ದೇಶಕರುಗಳು, ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಶಿವಮೂರ್ತಿ, ರಾಘವೇಂದ್ರ, ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲ ಅಧ್ಯಕ್ಷರಾದ ದ್ಯಾವಪ್ಪ ರೆಡ್ಡಿ ಹಾಗೂ ನಿರ್ದೇಶಕರಾದ ತೇಜಸ್ವಿ ಪಟೇಲ್, ಆಡಳಿತಾಧಿಕಾರಿ ಕೃಷ್ಣಮೂರ್ತಿ ಕುಲಕರ್ಣಿ, ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಯತೀಶ್ ಚಂದ್ರ, ಭದ್ರಾ ಮೇಲ್ದಂಡೆ ಯೋಜನೆ ಅಧೀಕ್ಷಕ ಅಭಿಯಂತರ ಲಮಾಣಿ, ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರ ಚಂದ್ರಹಾಸ್ ಹಾಗೂ ಎಲ್ಲಾ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.
- ವರದಿ – ಮಹೇಶ ಶರ್ಮಾ