ಜಗಳೂರು : ತಂಬಾಕು ಕಾಯ್ದೆ ಉಲ್ಲಂಘನೆಗೆ ದಂಡ #
ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರದಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿದರಕೆರೆಯ ಬಳಿ ಇರುವ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ದಂಡ ವಿಧಿಸಿದೆ. ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳವು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್ 4 ರಡಿ 10, ಸೆಕ್ಷನ್ 6ಎ ಅಡಿಯಲ್ಲಿ 06, ಸೇರಿದಂತೆ ನಿಯಮ ಉಲ್ಲಂಘನೆಯ ಒಟ್ಟು 16 ಪ್ರಕರಣಗಳನ್ನು ದಾಖಲಿಸಿ, ರೂ.2,800/- ಗಳ ದಂಡ ಸಂಗ್ರಹಿಸಿದೆ. ತಂಡವು ಜಗಳೂರು ತಾಲ್ಲೂಕಿನ ಬಿದರಕೆರೆಯ ಹೊಟೇಲ್, ಬಾರ್, ಪಾನ್‍ಶಾಪ್, ಬಸ್ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಹಾಗೂ ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರುಗಳು ಧೂಮಪಾನ ನಿಷೇಧÀದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ತಾಕೀತು ಮಾಡಿದರು. ದಾಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶಾಲ್.ಜೆ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ವಿ ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪರಶುರಾಮ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ಕೆ.ಪಿ.ದೇವರಾಜ್, ಸಹಾಯಕ ಕೃಷ್ಣ ಇತರಿದ್ದರು.
ವರದಿ – ಮಹೇಶ ಶರ್ಮಾ