ವಿಶೇಷ ಹೂಡಿಕೆ ವಲಯ (SIR) ಕುರಿತು ಚರ್ಚೆಗೆ ಗುಜರಾತ್ ಭೇಟಿ: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್….
- ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೊಂದಿಗೆ ಚರ್ಚೆ
- ಗುಜರಾತ್ ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶಗಳಿಗೆ ಸಚಿವರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ
- ದೇಶದ ಮೊದಲ ಯೋಜಿತ ಕೈಗಾರಿಕಾ ನಗರ ಧೋಲೇರಾ ಹಾಗೂ ಗಿಫ್ಟ್ ಸಿಟಿಗೆ ಭೇಟಿ ಅಧಿಕಾರಿಗಳೊಂದಿಗೆ ಚರ್ಚೆ ಗಾಂಧಿನಗರ, ಗುಜರಾತ್ ಜುಲೈ 16: ಗುಜರಾತ್ ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ವಿಶೇಷ ಹೂಡಿಕೆ ವಲಯ (ಎಸ್‌ಐಆರ್) ದ ಕುರಿತು ಗುಜರಾತ್ ಸರಕಾರದೊಂದಿಗೆ ಚರ್ಚೆ ನಡೆಸಲು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇವೆ ಎಂದು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ಧೋಲೇರಾ (SIR) ದೇಶದ ಮೊದಲ ವ್ಯವಸ್ಥಿತವಾಗಿ ಯೋಜನೆ ಮಾಡಿ ನಿರ್ಮಿಸಲಾಗುತ್ತಿರುವ ವಿಶೇಷ ಹೂಡಿಕೆ ವಲಯ. ದೇಶದ ಮೊದಲ ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆಯೂ ಇದರದ್ದಾಗಿದೆ. ಈ ವಿಶೇಷ ಹೂಡಿಕೆ ವಲಯ (ಎಸ್ ಐ ಆರ್) ದಿಂದ ಗುಜರಾತ್ ನಲ್ಲಿ ಹೆಚ್ಚಿನ ಹೂಡಿಕೆ ಯಾಗುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ನೀತಿಯಲ್ಲಿ ಈಗಾಗಲೇ ಘೋಷಣೆ ಮಾಡಿರುವಂತಹ ವಿಶೇಷ ಹೂಡಿಕೆ ವಲಯ ರಚನೆಗೆ ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಈ ಸಂಬಂಧ ಗುಜರಾತ್ ರಾಜ್ಯ ಹೊರತಂದಿರುವ ನೀತಿ ನಿಯಮಗಳಲ್ಲಿ ಮಾಡಲಾದಂತಹ ಬದಲಾವಣೆಯ ಬಗ್ಗೆ ಗುಜರಾತ್ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದೇವೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಮತ್ತು ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಧಿಕಾರಿಗಳ ತಂಡದ ಜೊತೆ ದೋಲೇರಾ, ಗಿಫ್ಟ್ ಸಿಟಿ ಸೇರಿದಂತೆ ಹಲವಾರು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಗಮನಿಸಿದ್ದೇವೆ. ಅಲ್ಲದೆ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಭೇಟಿಯಾದ ಸಂಧರ್ಭದಲ್ಲಿ ಗುಜರಾತ್ ರಾಜ್ಯದಲ್ಲಿ ಕೈಗಾರಿಕಾಭಿವೃದ್ದಿಗೆ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಅಲ್ಲದೆ, ನಮ್ಮ ರಾಜ್ಯದಲ್ಲಿ ಹೊರತಂದಿರುವ ನೀತಿಗಳ ಬಗ್ಗೆಯೂ ತಿಳಿಸಿಕೊಡಲಾಯಿತು. ಮುಂಬರುವ ಫೆಬ್ರವರಿಯಲ್ಲಿ ರಾಜ್ಯದಲ್ಲಿ ವಿಶ್ವ ಹೂಡಿಕೆದಾರರ ಸಭೆ ದಿನಾಂಕ ಘೋಷಣೆಯ ಬಗ್ಗೆಯೂ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದರು. ಮಾನ್ಯ ಸಚಿವರ ನೇತೃತ್ವದ ತಂಡದಲ್ಲಿ ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರಾದ ರೇವಣ್ಣ ಗೌಡ, ಇನ್‌ವೆಸ್ಟ್ ಕರ್ನಾಟಕ ಫೋರಂ ನ ಸಿಓಓ ಬಿ ಕೆ ಶಿವಕುಮಾರ್, ಕೆಐಎಡಿಬಿ ಸಿಡಿಓ ಬಿ.ಕೆ ಪವಿತ್ರ, ಕಾರ್ಯನಿರ್ವಾಹಕ ಇಂಜಿನೀಯರ್ ಸಿ ಸುನಿಲ್, ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸಪ್ಪ, ಮಧು ರೆಡ್ಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಗುಜರಾತ್ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ ರಾಜೀವ್ ಕುಮಾರ್ ಗುಪ್ತಾ, ಗುಜರಾತ್ ಮುಖ್ಯಮಂತ್ರಿ ಅವರ ಚೀಫ್ ಪ್ರಿನ್ಸಿಪಲ್ ಸೆಕ್ರೆಟರಿ ಕೈಲಾಶ್‌ನಾಥನ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಅಶ್ವಿನಿ ಕುಮಾರ್, ಕೈಗಾರಿಕಾಭಿವೃದ್ದಿ ಆಯುಕ್ತ ರಾಹುಲ್ ಗುಪ್ತಾ ಪಾಲ್ಗೊಂಡಿದ್ದರು.
ವರದಿ – ಹರೀಶ ಶೇಟ್ಟಿ ಬೆಂಗಳೂರು