ಅವನು ಮತ್ತು ಕನ್ನಡಿ….
ಗೆಳೆಯ
ನನ್ನ ಪ್ರೀತಿಸುವ ಮುನ್ನ
ನಿನಗೊಂದು ಷರತ್ತಿದೆ
ಮತ್ತೇನೂ ಅಲ್ಲ
ನೀನು ಕನ್ನಡಿಯಾಗಬೇಕಾಷ್ಟೆ!
ನಿಜವಾಗಿಯೂ ನೀನು
ನನ್ನಂತೆ ನನ್ನರಿತ ದಿನ
ನನ್ನ ಮನೆಯ ಗೋಡೆಗೆ
ತೂಗು ಹಾಕಲಾದ ಕನ್ನಡಿಗೆ
ನಿವೃತ್ತಿ ಘೋಷಿಸುತ್ತೇನೆ!
ಅಮೇಲಾಮೇಲೆ
ನಾ ಅತ್ತರೆ ನೀ ಅಳಬೇಕಾಗುತ್ತದೆ
ನಾ ನಕ್ಕರೆ ನೀ ನಗಬೇಕಾಗುತ್ತದೆ
ನನ್ನೆಲ್ಲ ತಪ್ಪುಗಳನ್ನು ಮೊಡವೆಗಳಂತೆ
ಗುರುತಿಸಬೇಕಾಗುತ್ತದೆ
ನನ್ನ ಭಾವಕ್ಕೆ ಬಿಂಬವಾಗಬೇಕಾಗುತ್ತದೆ
ಬದುಕಿನ ಕಲೆಗಳನ್ನು ಸಹಜವಾಗಿ ನಿರ್ಲಕ್ಷಿಸಬೇಕಾಗುತ್ತದೆ
ಒಟ್ಟಿನಲ್ಲಿ ನಾನೇನು
ಮಾಡುತ್ತೇನೋ
ಅದನ್ನೆಲ್ಲಾ ನೀ ಮಾಡಬೇಕಾಗುತ್ತದೆ
ಹಾ !
ನಾಲ್ಕು ಗೋಡೆಗಳ ಆಚೆಗೂ
ನೀ ಕನ್ನಡಿಯಾಗಬೇಕು
ಗೊತ್ತು ನನಗೆ
ಜಗತ್ತು ನಗಬಹುದು
ನೀನು ಅಂಜಿಕೆಗೊಳಗಾಗುತ್ತಿ
ಆದರೆ ನಾನು ಬದುಕು ನಮ್ಮದೆಂದು
ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುತ್ತೇನೆ
ಒಂದು ವೇಳೆ
ಕನ್ನಡಿಯ ಸ್ಥಾನ ತುಂಬಲಾಗದೆ ಹೋದರೆ
ಪ್ರೀತಿಯ ರೈಲಿಗೆ
ಹೊಂದಾಣಿಕೆಯ ಹಳಿ ತಪ್ಪುತ್ತದೆ
ಮತ್ತೆ ಅಂದು ನಾವು
ಒಂದೇ ಭೋಗಿಯ ಪ್ರಯಾಣಿಕರಾಗಿರುವುದಿಲ್ಲ !
– ಮಧು ಕಾರಗಿ