💥💥💥💥💥💥💥💥💥💥💥
ಭ್ರಮೆ ದಪ೯ಣ ಸ್ವಚ್ಛವಾಗಲಿ !
ಸಮಾನತೆಯ ಕೀರಟಕೆ
ಗರಿಯ ಕಟ್ಟಿದರು
ಗಟ್ಟಿಗಿತ್ತಿಯರ ಒಳಬೇನೆ
ಸುಳಿಯ ತಲ್ಲಣ
ಅವಳಿಗಷ್ಟೇ ಗೊತ್ತು
ಅದು ಅಂತರಂಗದ
ಅನಂತ ರಿಂಗಣ !
ಭುವಿ ಬಾನೆತ್ತರಕ್ಕೆ ನೀ
ಹಕ್ಕಿಯಂತೆ ಕನಸುಗಳ
ಹಾರಿಬಿಟ್ಟೆ
ಏನಿತು ನಿನ್ನ ಜವಾಬ್ದಾರಿ
ಸೂತ್ರಧಾರಿಗಳ ಕರಗಳು
ಕುಣಿಸುತ್ತವೆ ಸೂತ್ತಣ
ಲಕ್ಷ್ಮಣ ರೇಖೆ ಎಳೆದು
ಸ್ವತಂತ್ರ ಕದಿಯುವ ಮಹಾಕಲೆ
ಹದ್ದು ಮೀರಬಹುದೆಂಬ
ಭಯದ ಹದ್ದಿನಕಣ್ಣುಗಳು
ಅಬಲೆಯೆಂಬ ಬೇಲಿ
ಹಾಕುವ ನಿರಂತರ ಹುನ್ನಾರಗಳು
ಅಡುಗೆ ಮನೆಯ ಮಸಾಲಾ
ಡಬ್ಬಿಯ ಬಣ್ಣದಲ್ಲಿ
ನಾರಿಯ ಬಾಳು
ಬಣ್ಣಗೆಟ್ಟು ಮಸಕಾಗಿದೆ !!
ಮಕ್ಕಳ ಪಠ್ಯ ಅಂಕಕ್ಕೂ
ಬೆಂದ ಅನ್ನದ ತಟ್ಟೆಗೂ
ಬಳೆ ತೊಟ್ಟವಳ ಹೆಗಲ
ಹೇರಿಕೆಯ ತಲಾತಲಾಂತರ
ತಾಲೀಮು !!
ಕಛೇರಿ ಬಾಸ್ ಕೆಂಗಣ್ಣಿಗೆ
ಶೋಷಣೆ ದೌರ್ಜನ್ಯದ
ಬಲಿಪಶು ನೀ ಹುಣ್ಣಿಗೆ !!
ಅರಿಯಲಿ ಜಗ ನಿನ್ನಂಥ ಅವಳು
ಅವಳಂತೆ ಅವಳು ಬಾಳಲು ಬಿಡಿ
ಹೆರುವದಷ್ಟೆ ಅಲ್ಲಾ
ನಿಮ್ಮ ಕುಡಿ
ಸಂಸ್ಕಾರ ತೋರಲು
ಸುತ್ತಬೇಕಿಲ್ಲಾ ಗುಡಿ
ಹೆಣ್ಣೆಂದರೆ ಹೀಗೇ ಇರಬೇಕೆಂಬ
ಭ್ರಮೆಯ ದಪ೯ಣ
ಸ್ವಚ್ಛಗೊಳಿಸಿಕೊಳ್ಳಲಿ
ಅವಳಿಗೂ ಅವಳದೆ ವ್ಯಕ್ತಿತ್ವ
ಮನವಿದೆ ಗೌರವಿಸಿ
ಸ್ವಚ್ಛಂದ ವನದಲಿ ನಾರಿ
ಬಾಳು ಹೂವಂತೆ ನಗುತ್ತಿರಲಿ .
* ರತ್ನಾ ಎಂ ಅಂಗಡಿ ✍🏼
ಹುಬ್ಬಳ್ಳಿ