ಭತ್ತದ ಬದಲು ಬಂದೂಕು ನೆಡಬೇಕು ಎನ್ನುತ್ತಿದ್ದ ಭಗತ್ ಸಿಂಗ್ ರವರು.

Spread the love

ಭತ್ತದ ಬದಲು ಬಂದೂಕು ನೆಡಬೇಕು ಎನ್ನುತ್ತಿದ್ದ ಭಗತ್ ಸಿಂಗ್ ಎಂಬ ಪುಟ್ಟ ಪೋರ ಬೆಳೆದು ದೊಡ್ಡವನಾಗುತ್ತಿದ್ದಂತೆ ಯುವಸಮುದಾಯದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ.

ಬ್ರಿಟಿಷರ ಎದೆನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 111ನೇ ಜನ್ಮದಿನದಂದು ದೇಶ ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ.
ಸೆಪ್ಟಂಬರ್ 27, 1907ರಂದು ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ (ಈಗಿನ ಪಾಕಿಸ್ತಾನದಲ್ಲಿರುವ) ಭಗತ್ ಸಿಂಗ್ ರವರ ಜನನವಾಯಿತು. ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಪ್ರೇರಣೆಯಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಹುತಾತ್ಮರಾದ ಇವರ ಬಗೆಗೆ ನಿಮಗೆ ತಿಳಿಯದಿರಬಹುದಾದ ವಿಷಯಗಳಿವು:
* 1931ರ ಮಾರ್ಚ್ 23ರಂದು ಸಂಜೆ 7 ಗಂಟೆ 33 ನಿಮಿಷಗಳ ಸಮಯದಲ್ಲಿ ತಮ್ಮ ಇಬ್ಬರು ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್‌ರವರ ಜೊತೆ ಗಲ್ಲಿಗೇರಿಸಲ್ಪಟ್ಟಾಗ ಭಗತ್ ಸಿಂಗ್‌ಗೆ ಕೇವಲ 23 ವರ್ಷ.
* ಮಹಾತ್ಮಾ ಗಾಂಧಿಯವರ ಅಹಿಂಸಾವಾದದ ಬಗ್ಗೆ ಭಗತ್ ಸಿಂಗ್‌ಗೆ ಹೆಚ್ಚು ನಂಬಿಕೆ ಇರಲಿಲ್ಲ.
* ಮದುವೆಯಾಗಲು ನಿರಾಕರಿಸಿದ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಅವರು ಬ್ರಿಟಿಷ್ ಪೊಲೀಸರಿಗೆ ಶರಣಾದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವುನೋವು ಆಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಅರುಹುವುದೇ ಭಗತ್, ಅವನ ಗೆಳೆಯರ ಉದ್ದೇಶವಾಗಿತ್ತು. ಹೀಗಾಗಿ, ರಿವಾಲ್ವಾರ್ ಎಸೆದು, ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡದೆ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಲೇ ಸೆರೆಯಾದರು.
*ಇನ್ಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಘೋಷಣೆ ಹುಟ್ಟುಹಾಕಿದ್ದೇ ಭಗತ್ ಸಿಂಗ್. ಇದು ಅಂತಿಮವಾಗಿ ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಮಾರ್ಪಟ್ಟಿತು.
* ಸಮಾಜವಾದ ಮತ್ತು ಸಮಾಜವಾದಿ ಕ್ರಾಂತಿಯ ಬಗೆಗಿನ ಸಾಹಿತ್ಯವನ್ನು ಅವರು ಚಿಕ್ಕ ವಯಸ್ಸಿನಲ್ಲಿಯೇ ಓದಲಾರಂಭಿಸಿದ್ದರು. ಅವರಲ್ಲಿದ ಓದಿನ ಪ್ರೀತಿ ಬದುಕಿನ ಕೊನೆಕ್ಷಣದವರೆಗೂ ಇತ್ತು. ಭಗತ್ ಸಿಂಗ್ ಪರ ವಕೀಲ ಪ್ರಾಣನಾಥ್ ಮೆಹ್ತಾ, ಕೊನೆಯದಾಗಿ ಭೇಟಿಯಾದಾಗ ಭಗತ್ ‘ನಾನು ಹೇಳಿದ್ದ ‘The Revolutionary lenin’ ಪುಸ್ತಕ ತಂದಿದ್ದೀರಾ?’ ಎಂದು ಕೇಳಿದ್ದರು. ಪುಸ್ತಕ ಕೈಗೆ ಬರುತ್ತಿದ್ದಂತೆ ಓದಲು ಕುಳಿತೇ ಬಿಟ್ಟರು! ನಾಳೆ ನೇಣಿಗೆ ಕೊರಳುಡ್ಡುತ್ತಿರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ? ಎಂದು ರೋಮಾಂಚನಗೊಂಡ ಮೆಹ್ತಾ, ‘ದೇಶವಾಸಿಗಳಿಗೆ ನಿಮ್ಮ ಸಂದೇಶವೇನು?’ ಎಂದಾಗ ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ ‘ಸಾಮ್ರಾಜ್ಯಷಾಹಿಗೆ ಧಿಕ್ಕಾರ,ಇನ್ಕ್ವಿಲಾಬ್ ಜಿಂದಾಬಾದ್- ಈ ಎರಡು ಘೋಷಣೆಗಳನ್ನು ತಿಳಿಸಿ’ ಎಂದರು.
* ಬ್ರಿಟಿಷ್ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪದ ಮೇಲೆ ಅವರನ್ನು ನೇಣಿಗೇರಿಸಲಾಯಿತು.
* ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23. 1931, 7.30ಕ್ಕೆ ಗಲ್ಲಿಗೇರಿಸಲಾಯಿತು.
* ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಭಗತ್ ನನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೇರವೇರಿಸಿದರು.
*ಉತ್ತಮ ನಟರೂ ಆಗಿದ್ದ ಭಗತ್ ಕಾಲೇಜಿನಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.
*ಬಾಲ್ಯದಲ್ಲಿ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಹೇಳುತ್ತಿದ್ದ.
*ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ ‘ಹುತಾತ್ಮ’ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ ‘ಹುತಾತ್ಮ’ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡುವಂತೆ ಹೋರಾಡುತ್ತಲೇ ಇದೆ.  ಸಂಪಾದಕರು

Leave a Reply

Your email address will not be published. Required fields are marked *