ಧ್ವನಿಯಾಗಬೇಕು ನನ್ನ ಕವಿತೆ
——–
ಧ್ವನಿಯಾಗಬೇಕು ನನ್ನ ಕವಿತೆ
ಧ್ವನಿ ಇಲ್ಲದ ನೊಂದ ಜೀವಕೆ
ಅಂಧಕಾರದಲ್ಲಿದ್ದರ ಬದುಕಿಗೆ
ಜ್ಞಾನದ ಪ್ರಭೆಯಾಗಿ ಪ್ರಜ್ವಲಿಸಬೇಕು
ಸದ್ದಡಗಿಸಿಕೊಂಡು ಅಡುಗೆ ಕೋಣೆಗೆ ಸೀಮಿತವಾದ
ಅಬಲೆಯರ ಬಲ ಹೆಚ್ಚಿಸುವ,
ಜಿಡ್ಡುಗಟ್ಟಿದ ಗೊಡ್ಡು ಸಂಪ್ರದಾಯಗಳ
ಮಟ್ಟ ಹಾಕುವ ಧ್ವನಿಯಾಗಬೇಕು ನನ್ನ ಕವಿತೆ
ಭೂಮಿಗೆ ಬೆವರು ಸುರಿಸುವ
ಅನ್ನದಾತನ ಕಷ್ಟ ನಷ್ಟಗಳಿಗೆ ಸ್ಪಂದಿಸುವ,
ಚಹದಂಗಡಿ, ದೇವಾಲಯಗಳ ಹೊರಗೆ
ಕೈಮುಗಿದು ನಿಲ್ಲುವ ಶೋಷಿತನ ಧ್ವನಿಯಾಗಬೇಕು ನನ್ನ ಕವಿತೆ
ಅಭಿವ್ಯಕ್ತಿಯ ಧಮನ ಮಾಡುವ ಸಂಚುಕೋರರ
ವಿರುದ್ಧ ಸೆಟೆದು ನಿಂತು ಉತ್ತರಿಸಬೇಕು
ನಮ್ಮನ್ನಾಳುವವನು ಮಾಡಿದ ಮೋಸವನು
ಪ್ರತಿಭಟಿಸುವ ಧ್ವನಿಯಾಗಬೇಕು ನನ್ನ ಕವಿತೆ
ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ
ಮನುಷ್ಯತ್ವದ ಮೇಲೆ ಚಪ್ಪಟೆ ಬಂಡೆ
ಎಳೆಯುವವರ ವಿರುದ್ಧ ಘೋಷಣೆ ಕೂಗುವ
ಧ್ವನಿಯಾಗಬೇಕು ನನ್ನ ಕವಿತೆ
✍ಕುಬೇರ ಮಜ್ಜಿಗಿ