ಅಮ್ಮನ ನಿಸ್ವಾರ್ಥ ಸೇವೆ.

Spread the love

ಅಮ್ಮನ ನಿಸ್ವಾರ್ಥ ಸೇವೆ.

ಅಮ್ಮ ಎಂದರೆ, ನನ್ನ ಮೈ ಮನವೆಲ್ಲವೂ ರೊಮಾಂಚನವಾಗಿ, ಹೂವಾಗುವುದಮ್ಮ, ಪ್ರತಿ ಸಲವೂ ಈ ಮಾತು ಕೇಳಿದಾಗ ಏನೋ ಮನಸ್ಸಿನಲ್ಲಿ ಪುಳಕ, ಅಮ್ಮ ಎಂಬ ಎರಡೂವರೆ ಅಕ್ಷರದ ಈ ಪದದ ಶಕ್ತಿಯೇ ಅದ್ಭುತ ಜೊತೆಗೆ ತ್ಯಾಗಜೀವಿ ಎಂದರೆ ತಪ್ಪಾಗಲಾರದು. ಈಗ ನಾವು ಏನಾಗಿದ್ದೆವೋ ಅದರ ಎಲ್ಲ ಜೀವಸೆಲೆ ಅಮ್ಮನದ್ದು. ಹಾಗಾಗಿಯೇ ಕವಿಯೊಬ್ಬರು ‘ಪಿರುತಿಲೆ ಸಾಕಿ ಸಲುಹುವಾಕಿಗೆ, ಕಳ್ಳು ಕಕ್ಕುಲಾತಿ ಇರುವಾಕಿಗೆ, ತಾಯೆಂಬೋ ಹೆಸರು’ ಎಂದು ಬರೆದಿದ್ದಾರೆ.ಆದಕಾರಣ ತಾಯಿಯ ಋಣ ತೀರಿಸುವುದು ಅಸಾಧ್ಯ ಹಾಗಾಗಿ ಅಮ್ಮನಿಗೆ ಅಮ್ಮನೆ ಸಾಟಿ ಅಲ್ಲವೇ, ಅಮ್ಮನೆಂದರೆ ಅದು ಅಮ್ಮ ಅಷ್ಟೆ.  ಅಮ್ಮನನ್ನು ನೆನೆಯುವುದೆಂದರೆ, ಅದು ನಮ್ಮೊಳಗೆ ನಾವೇ ಸಂಭ್ರಮಿಸಿದಂತೆ ಹಾಗೆ ಸರ್ವಸ್ವವನ್ನೂ ಧಾರೆಯೆರೆದ ಆ ತಾಯಿಗೆ ಜೀವನ ಪೂರ್ತಿ ಚೀರ ನಾವು ಋಣಿಯಾಗಿರಬೇಕೆಂಬುವುದು ಅಷ್ಟೇ ನಿಜ ತಾನೇ ಅಲ್ಲವೇ, ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಅದಕ್ಕಾಗಿ ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅಮ್ಮ ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ತಾಳೆ. ಒಬ್ಬ ಸಾಮಾನ್ಯ ಅಮ್ಮ ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿಯುವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ತಾಯಿತನದ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿ ಅಮ್ಮನಿಗಿದೆ ಎನ್ನುವುದು ಸುಳ್ಳಲ್ಲ. ಹಾಗಾಗಿ ಈಗ ತಾಯಿಯ ಬಗ್ಗೆ ಬರೆಯುವುದಕ್ಕೆ ಹೋದರೆ ಭಾಷೆ ಬಡವಿ ಅನ್ನಿಸುತ್ತೆ. ಯಾವುದೇ ಪದದಲ್ಲಿ ಅಮ್ಮನನ್ನು ವರ್ಣಿಸುವುದಕ್ಕೆ ಹೋದರೂ, ಆಕೆಯ ಪಾತ್ರದೆದುರು ಆ ಪದವೇ ಸೋತುಬಿಡುತ್ತದೆ! ಒಂದು ಪದದಲ್ಲಿ, ಒಂದು ವಾಕ್ಯದಲ್ಲಿ, ಒಂದು ಕತೆಯಲ್ಲಿ, ಒಂದು ಹೊತ್ತಿಗೆಯಲ್ಲಿ ಹಿಡಿದಿಡಲು ಸಾಧ್ಯವಾಗದ ಮಹೋನ್ನತ ವ್ಯಕ್ತಿತ್ವ ಅಮ್ಮನದು.ತಾಯಿ ಎಂಬ ಶಿಲ್ಪಿಗೆ ಆಕಾರವಿಲ್ಲದ ಕಲ್ಲನ್ನೂ ಸಂಸ್ಕಾರದ ಉಳಿಪೆಟ್ಟಿನಿಂದ ಪೂಜನೀಯ ಮೂರ್ತಿಯನ್ನಾಗಿಸುವ ತಾಕತ್ತಿದೆ. ಇಂದು ಮಹೋನ್ನತವಾದದ್ದನ್ನು ಸಾಧಿಸಿದ ಶೇ.95 ರಷ್ಟು ಜನರ ಸಾಧನೆಯಲ್ಲಿ ನಿಸ್ಸಂದೇಹವಾಗಿ ಅವರಮ್ಮನ ಬೆವರಿದೆ, ಪ್ರೋತ್ಸಾಹವಿದೆ ಜೊತೆಗೆ ಆಶೀರ್ವಾದವಿದೆ. ಹೀಗೆ ತಾಯಿಯ ನಿದ್ದೆಯಿಲ್ಲದ ರಾತ್ರಿಯಿದೆ, ಹಸಿದ ಹೊಟ್ಟೆಯ ತ್ಯಾಗವಿದೆ,ಮಮಕಾರವಿದೆ ಬಂಧುಗಳೆ.ಸ್ವಂತ ಮಗನಿಂದ ಪರಿತ್ಯಕ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕೂತರೂ ಅದೇ ಮಗನ ಬಾಲ್ಯವನ್ನು ನೆನಪಿಸಿಕೊಂಡು ನಸುನಗೆಬೀರುವ, ಆತನ ಭವಿಷ್ಯ ಚೆನ್ನಾಗಿರಲೆಂದು ಎರಡೂ ಕೈಯೆತ್ತಿ ಹಾರೈಸುವ ಆ ದೈವತ್ವದ ಸಾಕಾರ ಮೂರ್ತಿಯನ್ನು ಪುಟ್ಟ ಲೇಖನದಲ್ಲಿ ಕಟ್ಟಿಹಾಕೋಕೆ ಸಾಧ್ಯಾನಾ? ಖಂಡಿತಾ ಸಾಧ್ಯವೇ ಇಲ್ಲಾ ಸ್ನೇಹಿತರೇ.ಅಮ್ಮ ಎಂಬ ವಾತ್ಸಲ್ಯಮಯಿ ನಮ್ಮಿಂದ ಶಾಶ್ವತವಾಗಿ ವಿದಾಯ ಹೇಳುವಾಗ ಪ್ರೀತಿಯ ಸುಂದರ ಪ್ರಪಂಚವೊಂದು ಕಳೆದುಹೋದ ಅನುಭವವಾಗುತ್ತದೆ. ತಾಯಿ ನಮ್ಮೊಂದಿಗಿರುವ ಆ ಕಾಲವು ಜೀವನದ ಸುಂದರ ಕಾಲ. ಅವರಿರುವರೆಗೆ ನಾವು ಮಕ್ಕಳೇ ಆಗಿರು ತ್ತೇವಲ್ಲಾ. ಅವರಲ್ಲೊಬ್ಬರನ್ನು ಕಳೆದುಕೊಂಡಾಗ ರೆಕ್ಕೆ ಮುರಿದ ಹಕ್ಕಿಯಂತೆ ಹತಾಶರಾಗುತ್ತೇವೆ. ಇವತ್ತು ನಮಗಾಗಿ ಕಾಯುವವರೂ, ನಮ್ಮನ್ನು ಇಷ್ಟಪಡುವವರೂ ನಮ್ಮ ಸುತ್ತಲೂ ಇದ್ದಾರೆ. ಆದರೆ ಇವರೆಲ್ಲಾ ನಮ್ಮನ್ನು ಪ್ರೀತಿಸಲು ಆರಂಭಿಸಿದ್ದು ನಾವು ಒಂದು ವ್ಯಕ್ತಿತ್ವ ಆದ ಬಳಿಕ. ನಾವು ಏನೂ ಅಲ್ಲದ,ಒಂದು ರೂಪವೂ ಇಲ್ಲದ ಕಾಲದಲ್ಲಿ, ಈ ಲೋಕಕ್ಕೆ ಬರುವುದಕ್ಕಿಂತಲೂ ಮೊದಲು ನಮ್ಮನ್ನು ಪ್ರೀತಿಸಲು, ಕಾಯಲು ತೊಡಗಿದವರೇ ನಮ್ಮ ಅಮ್ಮ ಎನ್ನುವುದು  ನಾವ್ಯಾರು ಮರೆಯುವಂತಿಲ್ಲ, ಅಲ್ಲಗಳೆಯುವಂತಿಲ್ಲ.ನೋವು, ಸಂಕಟಗಳೊಂದಿಗೆ ಒಂಭತ್ತು ತಿಂಗಳ ಗರ್ಭಧಾರಣೆ, ಅಸಹನೀಯವಾದ ನೋವಿ ನೊಂದಿಗೆ ಪ್ರಸವ, ಶ್ರಮದಾಯಕವಾದ ಪರಿಪಾಲನೆ, ಮಗುವಿನ ಮಲಮೂತ್ರ ಪ್ರೀತಿಯೊಂದಿಗೆ ಒಡನಾಟ, ಒಂದು ಕ್ಷಣವೂ ಬಿಟ್ಟಿರಲಾಗದ ಆತ್ಮೀಯತೆ, ಜೀವನವಿಡೀ ಮಕ್ಕಳ ನೆನಪಿನೊಂದಿಗೆ ನಿಟ್ಟುಸಿರು, ಹಸಿವಿನ ತೀವ್ರತೆಯಲ್ಲೂ ಮಗುವಿನ ಅಳು ಸಹಿಸಲಾಗದ ದುರ್ಬಲ ಮನಸ್ಸು, ಮಗುವಿನ ಮುಖದಲ್ಲಿ ಕಾಣುವ ಲವಲವಿಕೆಗೆ, ಅಮ್ಮನ ಖುಷಿಗೆ ಪಾರವೇ ಇರುವುದಿಲ್ಲ. ಹೀಗಾಗಿಯೇ ಅಮ್ಮನಿಗೆ ಸಮನಾಗಿ ಅಂದರೆ ಸರಿಸಾಟಿಯಾಗಿ ಈ ಪ್ರಪಂಚದಲ್ಲಿ ನಿಲ್ಲುವ ವ್ಯಕ್ತಿತ್ವ ಖಂಡಿತವಾಗಿಯೂ ಯಾರಲ್ಲೂ ಇಲ್ಲ ಎಂದು ನಿಸ್ಸಂದೇಹವಾಗಿ ಹೇಳಲು ಬಯಸುತ್ತೇನೆ.ಅಮ್ಮನಿಗೆ ನಮ್ಮ ಬಗೆ ತಿಳಿದಷ್ಟು ಬೇರ್ಯಾರಿಗೂ ನಮ್ಮನ್ನು ಅರಿಯಲು ಸಾಧ್ಯವಿಲ್ಲ. ನಮ್ಮ ಇಷ್ಟ, ಅನಿಷ್ಟ, ಸಿಟ್ಟು, ಸಂತೋಷ ಎಲ್ಲವೂ ಅಮ್ಮನಿಗೆ ತಿಳಿದಿದೆ. ಹಾಗಾಗಿ ಅಮ್ಮನೊಂದಿಗೆ ಬೆಳೆಯದ ಯಾವುದೇ ಮಗು, ಪ್ರೀತಿ ಅನುಕಂಪ ಕರುಣೆಯಂತಹ ಸದ್ಗುಣಗಳ ಕೊರತೆಯನ್ನು ಸದಾ ಅದರ

ಜೀವನದಲ್ಲಿ ಅನುಭವಿಸುತ್ತದೆಂದು ಹಲವು ಅಧ್ಯಯನಗಳ ಆಧಾರದ ಗ್ರಂಥಕರ್ತದಲ್ಲಿ ಹೇಳುತ್ತಾರೆ.ಆದಕಾರಣ ಲಾಲನೆ – ಪಾಲನೆ, ಪೋಷಣೆಯ, ಪ್ರೀತಿಯಿಂದ ಮಗು ಕುಟುಂಬದ ಆಸ್ತಿಯಾಗಿ ಮಾರ್ಪಡಲು ಅಮ್ಮನ ನಿಸ್ವಾರ್ಥ ಪರಿಶ್ರಮವೇ ಪ್ರಮುಖ ಕಾರಣ.ಜೊತೆಗೆ ಅಮ್ಮನ ಆದೇಶಗಳು, ಸಲಹೆ, ಮಾರ್ಗದರ್ಶನ, ಸ್ನೇಹದ ನೋಟ ಮಾತ್ರ ಸಾಲದು. ಸ್ಪರ್ಶ, ಆಲಿಂಗನ,  ಮುತ್ತು ಇವೆಲ್ಲವೂ ಅಮ್ಮನಿಂದ ಮಕ್ಕಳಿಗೆ ವರ್ಗಾವಣೆಯಾಗಬೇಕು. ಅಂದಾಗಲೇ ಮನೆಯ ಪ್ರಮುಖನಾಗಿ, ಸಮಾಜದ ಮತ್ತು ದೇಶದ ಸಂರಕ್ಷಕರಾಗಿ ಕಂಗೊಳಿಸುತ್ತಾರೆ.ಕಂಗೊಳಿಸುವ ಸನ್ನಿವೇಶಗಳು ನೋಡುವಾಗ – ಅಮ್ಮನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಖಂಡಿತಾ ಅಮ್ಮನಿಗಾಗುವ ಆನಂದವೂ ಅಗಾಧವಾದುದು. ಅವರು ನಮ್ಮೊಂದಿಗೆ ಇರುವ ಸಮಯವೇ ಬದುಕಿನ ಸುಂದರ ಕಾಲವೆಂದು ಹೆಮ್ಮೆಯಿಂದ ಹೇಳಬಹುದಾಗಿದೆ. ನಮ್ಮ ವ್ಯಕ್ತಿತ್ವ ರೂಪಿಸಿದ ಮಹಾನ್ ಚೇತನಗಳಲ್ಲವೇ ಅವರೇ ಅವರು,ಹೌದು ತಾನೇ, ತಾಯಿಯ ಅವಿರತ ಶ್ರಮದ ಫಲದಿಂದ ನಾಡಿನ ಆಸ್ತಿಯಾಗಿರುವ ಮಕ್ಕಳು ಎಂದೆಂದಿಗೂ ತಾಯಿಯನ್ನು ಯಾವ ಕಾರಣಗಳಿಂದಲೂ ಮರೆಯಬಾರದು.ಮರೆತು ಮರುಕವಂತು ಪಡಬಾರದು.ಆದರೆ ಇಂದು ಹಲವು ಮನೆಗಳಲ್ಲಿ ತಾಯಿ – ತಂದೆ ಅನಾಥರಾಗಿದ್ದಾರೆ. ಮಕ್ಕಳ ಮೊಮ್ಮಕ್ಕಳ ಸಹವಾಸವಿಲ್ಲದೆ, ಆಯಾಸದಿಂದ ಬಸವಳಿಯುವಾಗ ಕೈ ಹಿಡಿದು ಎಬ್ಬಿಸಲು ಜನರಿಲ್ಲದೆ, ಪಾಪ ಇಬ್ಬರೂ ಪರಸ್ಪರ ಮುಖ ನೋಡುತ್ತಾ, ದೊಡ್ಡ ದೊಡ್ಡ ಮನೆಗಳಲ್ಲಿ ಅವರು ಒಬ್ಬಂಟಿಯಾಗುತ್ತಿದ್ದಾರೆ. ಅವರ ಯೌವನ ತಮ್ಮ ಮಕ್ಕಳಿಗಾಗಿಯೇ ಕಳೆದು ಹೋಗಿದೆ. ಹಾಗಾದರೆ ಮಕ್ಕಳ ಯೌವನ ತಮ್ಮ ಗುರಿ ಸಾಧನೆಗಾಗಿ ಮಾತ್ರ  ಸೀಮಿತಗೊಂಡಿದಾರೇ ಅಥವಾ ಸಂಕುಚಿತಗೊಂಡಿದಾರೇ ಎಂಬುದು ತಿಳಿಯದೇ ಇರುವ ದೊಡ್ಡ ಸಮಸ್ಯೆ, ಹೌದು ತಾನೇ, ಇದು ನ್ಯಾಯವೇ ನೀವೇ ಹೇಳಿ, ಆಧುನಿಕ ಪ್ರಪಂಚದಲ್ಲಿ ಮನುಷ್ಯನಿಗೆ ಎಲ್ಲವೂ ಕೈಗೆ ದಕ್ಕಬಹುದು.ಆದರೆ ಹೆತ್ತ ತಾಯಿ -ತಂದೆಯನ್ನು ಪಡೆಯಲು ಸಾಧ್ಯವೇ ಇಲ್ಲ. ಇಂತಹ ವಿಚಾರಗಳು ನಮಗೆ ತಿಳಿದರೂ ಸಹ ನಾವು ನಮ್ಮ ತಂದೆ – ತಾಯಿಯರ ನಿಸ್ವಾರ್ಥ ಸೇವೆಯನ್ನು ಮರೆತು ಮೃಗಗಳಂತೆ ಬಾಳುವ ಕೆಲಸಕ್ಕೆ ಮುಂದಾಗುತ್ತೀರುವುದು ದುರುಷ್ಟರ ಸಂಗತಿಯಾಗಿದೆ. ಇನ್ನು ತಂದೆ ತಾಯಿಯವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿಗೆ ಇಂದಿನ ಆಧುನಿಕ ಸಮಾಜದವರು ಮುನ್ನುಡಿ ಬರೆಯುತ್ತಿದ್ದಾರೆ ಎಂಬುದು ಅತ್ಯಂತ ನೋವಿನ ವಿಚಾರ ಜೊತೆಗೆ ಮನ ಕಲಕುವ ಸಂಕಟ.ಹೀಗೆ ಅನಾಥ ಆಶ್ರಮಕ್ಕೆ ನೂಕುವ ಮನೋಪ್ರವೃತ್ತಿ ನಮ್ಮಲ್ಲಿ ದಿನೇ ದಿನೇ ಹೆಚ್ಚಾಗಿ ಬೆಳೆಯತ್ತಿದ್ದೇ ? ಈ  ಪದ್ಧತಿ ಸರಿಯೇ? ಎಂಬುದು ನಾವೆಲ್ಲರೂ ಒಮ್ಮೆ ನಮ್ಮ ನಮ್ಮ ಎದೆ ಮೇಲೆ ಕೈ ಇಟ್ಟುಕೊಂಡು ಯೋಚನೆ ಮಾಡಬೇಕಾದ  ಸಂದರ್ಭವಿದೆ.

ಅನಿವಾರ್ಯತೆ ಸಹ ಸಧ್ಯ ನಮ್ಮ ಎದುರಿಗೆ ಎದುರಾಗಿದೆ ಹಾಗೂ ಕಾಣುತ್ತಿದ್ದೇವೆ. ಹೀಗೆ ನಮ್ಮಗಾಗಿ,ನಮ್ಮ ಉನ್ನತಿಗಾಗಿ ಹಗಲಿರುಳು ದುಡಿದ ಮಾಹಾ ತಾಯಿಗೆ ನಾವು ಕೊಡುತ್ತಿರುವ ಗೌರವ ಇಷ್ಟೇನಾ? ನಮಗೂ ಸಹ ವಯಸ್ಸಾಗುತ್ತದೆ. ವಯಸ್ಸಾದ ಮೇಲೆ ವಯೋವೃದ್ಧರೂ ಖಂಡಿತಾ ಆಗುತ್ತೇವೆಂಬ ಕಲ್ಪನೆ ನಮ್ಮಗೆ ಬೇಡವೇ.ಬೇಡ ಎಂದರೆ ನಾವು  ಕಾಡುಪ್ರಾಣಿಗಳಗಿಂತ ಕಡೆಯ ಜೀವನ ನಮ್ಮದಾಗುತ್ತದೆ ಎನ್ನುವ ಅರಿವು ನಮ್ಮಲ್ಲಿ ಇರುವುದು ಒಳ್ಳೆಯದು.ಇಲ್ಲವಾದರೆ ನಾವು ಹೇಗೆ ನಮ್ಮ ತಂದೆ – ತಾಯಿಯರಿಗೆ ಅನಾಥಾಶ್ರಮಗಳಿಗೆ ಸೇರಿಸಿದ್ದೇವೆ.ಹಾಗೆ ಮೂದೊಂದು ದಿನ ನಮ್ಮನ್ನು ನಮ್ಮ ಮಕ್ಕಳು ಖಂಡಿತಾ ಅನಾಥಾಶ್ರಮಕ್ಕೆ (ನಮ್ಮನ್ನು) ಸೇರಿಸುವುದು ಪಕ್ಕಾ – ಖಂಡಿತಾ ಎನ್ನುವುದು ನಾವು ಮರೆಯುವಂತಿಲ್ಲ. ಹೀಗಾಗಬಾರದೆಂದರೆ ನಮ್ಮ ತಂದೆ ತಾಯಿಯನ್ನು ನಾವುಗಳು ಆದಷ್ಟೂ ಸುಖವಾಗಿ ಇರುವಂತೆ ನೋಡಿಕೊಳ್ಳುವುದು ಅತ್ಯುತ್ತಮ ಹಾಗೂ ನಮ್ಮ ಜವಾಬ್ದಾರಿ ಸ್ನೇಹಿತರೆ. ಕೊನೆಯದಾಗಿ: ಪ್ರತಿ ಕ್ಷಣದಲ್ಲೂ ನಾವು ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಚಿಕ್ಕ ಸಮಸ್ಯೆ ಅನಿಸಿದರೂ, ಅಲ್ಲಿ ಅಮ್ಮ ಬೇಕು ಅಂತ ಅನಿಸುತ್ತದೆ. ನಾವಂತಲ್ಲ, ಬಹುತೇಕ ಮಕ್ಕಳಿಗೂ ಕಾಡುವ ಸಮಸ್ಯೆವಿದು.ಎಲ್ಲೋ ಒಂದು ಕಡೆ ನಮ್ಮಲ್ಲಿ ಕೀಳರಿಮೆ ಅಂತ ಬಂದಾಗ ಸ್ಫೂರ್ತಿ ತುಂಬಿ, ನಮ್ಮ ಸಾಮರ್ಥ್ಯ‌ ನೆನಪಿಸುವ ದಿವ್ಯ ಶಕ್ತಿ ತಾಯಿಗಿದೆ.ಹಾಗಾಗಿ  ನಮ್ಮ ಏನೆಲ್ಲ ಸಮಸ್ಯೆಗಳಿಗೂ ಅಮ್ಮ ಉತ್ತರವಾಗಿ ನಿಲ್ಲುತ್ತಾರೆ. ಹಾಗಾಗಿ ಅಮ್ಮನೇ ನಮಗೆ ನಿಜವಾದ ದೇವರು, ದೇವಸ್ವರೂಪಿ. ಇಂದು ನಾವು ಈ ಭೂಮಿ ಮೇಲೆ ಇರುವುದಕ್ಕೆ ಕಾರಣವೇ ಅಮ್ಮ. ಭೂಮಿ ಮೇಲಿನ ಅತ್ಯಂತ ಶಕ್ತಿಯುತವಾದ ಜೀವವೆಂದರೆ ಅದು ತಾಯಿ. ಹಾಗಾಗಿ ಅಮ್ಮನೆಂದರೆ ಪ್ರೀತಿ, ಮಮತೆ, ಆತ್ಮಸ್ಥೈರ್ಯ ಹೀಗೆ ಎಲ್ಲವನ್ನೂ ತುಂಬಿಕೊಂಡಿರುವ ಜಗತ್ತು. ನಮ್ಮ ಪಾಲಿಗೆ ಅಮ್ಮನೇ ಸರ್ವಶ್ಯ,ಸರ್ವಶ್ರೇಷ್ಠ,ಆದ್ದರಿಂದ ತಾಯಿಯ ಋಣವನ್ನು ತೀರಿಸುವುದಕ್ಕಂತೂ ಈ ಜನ್ಮದಲ್ಲಿಯಂತೂ ಸಾಧ್ಯವಿಲ್ಲ.ತಾಯಿ ಎಂಬ ಪಾತ್ರದ ಮಹೋನ್ನತಿಯ ಮೌಲ್ಯಾಧಾರಿತ ವಿಚಾರಗಳು ಆಗಾರ – ಸಾಗರ, ಅಗೋಚರ – ಅಪ್ರತಿಮ. ನಮಗೆ ಜನ್ಮ ನೀಡಿದವರು, ನಮಗೆ ಸುಂದರ ಹೆಸರನ್ನಿಟ್ಟವರು, ನಮ್ಮನ್ನು ಸಾಕಿ ಬೆಳೆಸಿದವರು, ನಮ್ಮ ಏಳಿಗೆ, ಯಶಸ್ಸು, ಪ್ರಸಿದ್ಧಿಯನ್ನು ಕಂಡು ನಮಗಿಂತಲೂ ಹೆಚ್ಚು ಸಂತೋಷಪಟ್ಟವರು, ನಮ್ಮ ನೋವಿಗಾಗಿ ಬಹಳವಾಗಿ ದುಃಖಿಸಿದವರು, ಅವರೇ ನಮ್ಮ ಪ್ರೀತಿಯ ಅಮ್ಮ. ಅಮ್ಮನ ನೆರಳಾಗಿ, ಅವರ ಆರೈಕೆ ಮಾಡಬೇಕಾದವರು ಮಕ್ಕಳಾದ ನಮ್ಮ ಕರ್ತವ್ಯ.

ವರದಿ –  ಸಂಗಮೇಶ ಎನ್ ಜವಾದಿ. ಬರಹಗಾರ, ಪರಿಸರ ಸಂರಕ್ಷಕ,ಸಮಾಜಿಕ ಕಾರ್ಯಕರ್ತ.

Leave a Reply

Your email address will not be published. Required fields are marked *