75ನೇ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಲೇಖನ………
ನಮಗೆ ಸ್ವಾತಂತ್ರ್ಯ ದೊರೆತು ಇದೀಗ 75 ವರ್ಷಗಳು ತುಂಬುತ್ತೀವೆ. 75 ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ ಇಡೀ ದೇಶ. ಎಲ್ಲೆಡೆ ದೇಶ ಭಕ್ತಿ, ದೇಶಪ್ರೇಮ ವ್ಯಕ್ತವಾಗುತ್ತಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ ಅಭೂತಪೂರ್ವ ದಿನ ಇದಾಗಿದೆ.ಹೀಗಾಗಿ
ಭಾರತದ ದೇಶ 75 ರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲು ದೇಶವಾಸಿಗಳು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಕುರಿತು ಕೆಲ ವಿಚಾರಗಳು ತಮ್ಮ ಮುಂದೆ ಹಂಚಿಕೊಳ್ಳುವ ಪ್ರಯತ್ನ ಈ ಮೂಲಕ ಮಾಡುತ್ತಿದ್ದೇವೆ. ಬ್ರಿಟೀಷರ ಆಡಳಿತದ ಕಪಿಮುಷ್ಟಿಯಿಂದ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು ಎನ್ನುವುದು ತಮ್ಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಹಾಗಾಗಿ ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಅತ್ಯಂತ ಗೌರವ ಪೂರ್ವಕವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ದಿನವನ್ನು ನಾವೆಲ್ಲರೂ ಅತ್ಯಂತ ಸಡಗರ,ಸಂಭ್ರಮ ಹಾಗೂ ಸಂತೋಷದಿಂದ ಆಚರಣೆ ಮಾಡುತ್ತೇವೆ. ಜೊತೆಗೆ ಈ ದಿನ ಇಡೀ ದೇಶದಲ್ಲೆಡೆ ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ. ದೇಶದ ನಾನಾ ಭಾಗದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ಸಿಹಿ ಹಂಚಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತು, ಬಲಿದಾನ ಮಾಡಿದ ಪ್ರತಿಯೊಬ್ಬ ದೇಶಭಕ್ತರನ್ನು ನೆನಪಿಸಿಕೊಳ್ಳುತ್ತಾ, ಅವರ ತ್ಯಾಗವನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವಂತೆ ಸರ್ವರಿಗೂ ಈ ಸಂದರ್ಭದಲ್ಲಿ ಕರೆ ನೀಡಲಾಗುತ್ತದೆ. ಅಂತೆಯೇ ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೈಗೊಂಡ ಪ್ರಗತಿ ಯೋಜನೆಗಳನ್ನು ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕೆಲಸಗಳ ಬಗೆ ವಿವರಿಸಿ, ಹೊಸ ಯೋಜನೆಗಳನ್ನು ಪ್ರಕಟಿಸುವುದು ವಾಡಿಕೆಯಾಗಿದೆ. ಇನ್ನು ದೇಶಾದ್ಯಂತ ಸರಕಾರಿ ಕಚೇರಿಗಳು ವಿದ್ಯುದ್ದೀಪಗಳಿಂದ ಬೆಳಗುತ್ತವೆ. ಎಲ್ಲಾ ಆಯಾ ರಾಜ್ಯಗಳ ರಾಜ್ಯ ರಾಜಧಾನಿಗಳಲ್ಲಿ ಮುಖ್ಯಮಂತ್ರಿಗಳೂ ಧ್ವಜಾರೋಹಣ ಮಾಡುತ್ತಾರೆ. ಮತ್ತು ಸಾಂಸ್ಕೃತಿಕ ಸಮಾರಂಭಗಳು ಜರುಗುತ್ತವೆ. ಅಲ್ಲದೆ ದೇಶದ ವಿವಿಧ ನಗರಗಳಲ್ಲಿ ಧ್ವಜಾರೋಹಣವನ್ನು ಆಯಾ ಕ್ಷೇತ್ರಗಳ ಮಹನೀಯರ ಸಮ್ಮುಖದಲ್ಲಿ ನಡೆಯುತ್ತದೆ . ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣವನ್ನು ಆಯಾ ಸಂಸ್ಥೆಯ ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು ನೆರೆವೇರಿಸುತ್ತಾರೆ. ಇವುಗಳಲ್ಲದೆ ಶಾಲೆ ಕಾಲೇಜುಗಳು ಅವರ ಆವರಣದಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.ಇದೆ ಸಮಯದಲ್ಲಿ ಉಪನ್ಯಾಸಕರಿಂದ ದೇಶ ಭಕ್ತಿ, ಸ್ವಾತಂತ್ರ್ಯ ಹೋರಾಟದ ಕುರಿತು ಭಾಷಣವನ್ನು ಮಾಡುತ್ತಾರೆ.ಹಾಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸದ ಮಕ್ಕಳಿಗೆ ಬಹುಮಾನ ವಿತರಣೆ ಸಹ ನಡೆಯುತ್ತದೆ. ಹೀಗೆ ನಾವೆಲ್ಲರೂ ಇಂದಿನವರೆಗೂ ಸ್ವಾತಂತ್ರ್ಯ ದಿನಾಚರಣೆ ಮಾಡಿಕೊಂಡು ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಇನ್ನು ಮಾಡಬೇಕಾಗಿರುವ ಅಭಿವೃದ್ಧಿ ಕೆಲಸಗಳ ಚಿಂತನೆ ಮಾಡೋಣ. ಸ್ವಾತಂತ್ರ್ಯ ನಂತರ ಭಾರತ:- 74 ವರ್ಷಗಳ ಹಿಂದೆ ಆಗಸ್ಟ್ 15 ರಂದು ಪರಕೀಯರ ಆಡಳಿತದ ಅಂಧಕಾರದಿಂದ ಮುಕ್ತಿ ದೊರೆಯುವ ಮೂಲಕ, ಹೊಸ ಬೆಳಕಿಗೆ ಭಾರತ ತನ್ನನ್ನು ತಾ ತೆರೆದುಕೊಂಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬ್ರಿಟಿಷ್ ಆಡಳಿತದ ಕಾಲದ ವಸಾಹತುಷಾಹಿ ಪ್ರಭುತ್ವಕ್ಕೆ ಇತಿಶ್ರೀ ಹಾಡಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತ ಸಾಗಿದ್ದೇವೆ. ‘ಎಸೂರು ಕೊಟ್ಟರೂ ಈಸೂರು ಬಿಡೆವು’ ಎಂದು ಬ್ರಿಟಿಷರಿಗೆ ಸವಾಲು ಹಾಕಿ ಪ್ರಾಣತ್ಯಾಗ ಮಾಡಿದ ಈಸೂರಿನ ಸತ್ಯಾಗ್ರಹಿಗಳು ಸೇರಿದಂತೆ ಅಪಾರ ಪ್ರಮಾಣದ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿದೆ. ಹಾಗೆಯೇ ಭಾರತೀಯರ ಉಜ್ವಲ ಭವಿಷ್ಯಕ್ಕಾಗಿ ಅಂದು ಹೆಜ್ಜೆ ಹಾಕಿದ ಸಾವಿರ ಸಾವಿರ ಧೀರ ದೇಶ ಪ್ರೇಮಿಗಳಿಗೆ, ನಾವು ಈ ದಿನ ತಲೆಬಗ್ಗಿಸಿ ಗೌರವ ಸಲ್ಲಿಸಬೇಕು.ಅಂದಾಗಲೇ ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಲು ಸಾಧ್ಯ. ಹಾಗಾಗಿಯೇ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವ ರಾಷ್ಟ್ರವಾಗಿ ಭಾರತ ದೇಶ ಹೊರಹೊಮ್ಮಿದೆ. ಇಲ್ಲಿಯವರೆಗೆ ದೇಶ ಹಾಗೂ ರಾಜ್ಯಗಳನ್ನು ಆಳಿದ ಎಲ್ಲಾ ಸರ್ಕಾರಗಳು ಈ ಸಾಧನೆಗೆ ಕೊಡುಗೆ ನೀಡಿರುವುದನ್ನು ಸ್ಮರಣೆ ಮಾಡುತ್ತಾ, ನೆನಪು ಮಾಡಿಕೊಂಡು ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.ಅದೇ ರೀತಿ ಈ ದೇಶದಲ್ಲಿ ಇರುವ ಪ್ರಜೆಗಳು ಪರಸ್ಪರ ಪ್ರೀತಿ, ಸಹಕಾರ ಮತ್ತು ಸೌಹಾರ್ದತೆಯ ಮೂಲಕ ಅಭಿವೃದ್ಧಿ ಪಥದತ್ತ ಸಾಗಬೇಕಾಗಿದೆ ಮತ್ತು ಕೊಂಡೊಯ್ಯಬೇಕಾಗಿದೆ. ದ್ವೇಷಾಸೂಯೆಗಳಿಗೆ ಕಿವಿಗೊಡದೇ ಮುಂದಡೆ ಸಾಗಿ, ಸಮೃದ್ಧ ಮತ್ತು ಸುಭದ್ರ ಭಾರತ ನಿರ್ಮಾಣಕ್ಕಾಗಿ ದುಡಿಯಬೇಕಾಗಿದೆ.ಅದಕ್ಕಾಗಿ ನಾವು ವಿಶಾಲ ದೃಷ್ಟಿಕೋನ ಬೆಳೆಸಿಕೊಂಡು ಸಾಗುವುದು ನಮಗೆಲ್ಲ ಅನಿವಾರ್ಯತೆ ಇದೆ. ವೈಜ್ಞಾನಿಕವಾಗಿ ಯೋಚನೆ ಮಾಡುವುದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಾಗಿದೆ. ಆದರೆ ಸ್ವಾತಂತ್ರ್ಯ ನಂತರ ಭಾರತ ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಕೆಲವು ಅಮಾನವೀಯ ಘಟನೆಗಳು ನಮ್ಮ ಒಳ್ಳೆಯ ವಿಚಾರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ.ಬಡವರು ಮತ್ತು ಮಹಿಳೆಯರು ಇನ್ನೂ ನಮ್ಮ ಸಮಾಜದಲ್ಲಿ ಸಮಾನತೆಯಿಂದ ಹಾಗೂ ಸುರಕ್ಷಿತವಾಗಿ ಬಾಳುವ ಸ್ಥಿತಿಯಲ್ಲಿ ಇಲ್ಲವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಇವರುಗಳ ಮೇಲೆ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ನಮ್ಮ ದೇಶ ಹಾಗೂ ಸಮಾಜಕ್ಕೆ ಅಂಟಿದ ಕಳಂಕ ಮತ್ತು ದುರಂತ ಎಂದರೆ ತಪ್ಪಾಗಲಾರದು. ಇಂತಹ ಅಮಾನವೀಯ ನಡವಳಿಕೆಗಳ ವಿರುದ್ಧದ ಹೋರಾಟ ಮಾಡಬೇಕಾಗಿದೆ. ಅಂದರೆ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿಯೇ ಈ ಹೋರಾಟವೂ ನಡೆಯಬೇಕಾಗಿದೆ. ಜೊತೆಗೆ ಬಡತನ, ಅನಕ್ಷರತೆ, ಮೂಢ ನಂಬಿಕೆ, ಕಂಧಾಚಾರ, ಬೃಷ್ಟಾಚಾರಿಗಳ ವಿರುದ್ಧವು ಸಹ ಹೋರಾಟ ಮಾಡುವುದು ಸಧ್ಯ ಅನಿವಾರ್ಯವಾಗಿದೆ. ಹಾಗಾಗಿ ಇವುಗಳೆಲ್ಲ ಮೆಟ್ಟಿ ನಿಲ್ಲಲು ನಿರಂತರವಾಗಿ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯವಿದೆ. ಅದೇ ರೀತಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಸರ್ಕಾರಗಳು ಯೋಚನೆ ಮಾಡಲಿ. ಈ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರು ಮತ್ತು ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು ಮತ್ತು ಔಷಧಿ ಒದಗಿಸುವ ಪರಿಹಾರ ಕಾರ್ಯ ಸುಸೂತ್ರವಾಗಿ ಮಾಡಬೇಕಾಗಿದೆ. ಜೊತೆಗೆ ರೈತಪರ ಸರ್ಕಾರ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿರದೇ ನುಡಿದಂತೆ ನಡೆಯುವ ರೀತಿಯಲ್ಲಿ ಕೆಲಸಗಳು ಸಾಗಬೇಕು. ಸರಿಯಾದ ಸಮಯಕ್ಕೆ ಜನರ ಕಾರ್ಯಗಳನ್ನು ಮಾಡುವ ಮೂಲಕ ಜನಸಮುದಾಯದ ವಿಶ್ವಾಸ ಉಳಿಸಿಕೊಳ್ಳುವ ಕಾರ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಬೇಕು. ಈ ದಿಸಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರವತೃರಾಗಬೇಕು ಹಾಗೆ ಕುಲಂಕುಶವಾಗಿ,ಮುಕ್ತಮನಸ್ಸಿನಿಂದ ಚಿಂತನೆ ಮಾಡುವ ಮೂಲಕ ಪ್ರಗತಿ ಪಥದ ಜೊತೆ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಬೇಕಾಗಿದೆ. ಹಾಗೆಯೇ ದೇಶದ ಯಾವ ವ್ಯಕ್ತಿಯೂ ಅನಾರೋಗ್ಯದ ಕೊರತೆಯಿಂದ ನರಳುವಂತಾಗಬಾರದೆಂದರೇ, ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳ ಮೇಲೆ 24 ಘಂಟೆಯೂ ಸರಕಾರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕು. ಯಾಕೆಂದರೆ ಇಂದಿನ ದಿನಗಳಲ್ಲಿ ಆರೋಗ್ಯ ವ್ಯವಸ್ಥೆ ಬಹಳ ಹದಗೆಟ್ಟಿದೆ. ಸರಿಯಾದ ಸಮಯಕ್ಕೆ ಯಾವುದೇ ರೀತಿಯಲ್ಲೂ ಬಡಜನರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ.ಇದರಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಆಗುವುದನ್ನು ಕಂಡಿದ್ದೇವೆ. ಇದಕ್ಕೆ ಕಾರಣ ಕೆಲ ಸ್ವಾರ್ಥ ಅಧಿಕಾರಿಗಳ ವರ್ಗ ಹಾಗೂ ರಾಜಕೀಯ ನಾಯಕರು ಎನ್ನಬಹುದು.ಅದಕ್ಕಾಗಿ ಇವರ ಮೇಲೆ ಕಟ್ಟುನಿಟ್ಟಿನ ಕ್ರಮಗಳು ಕೈಗೊಳ್ಳುವುದು ಸೇರಿದಂತೆ ಸರಿಯಾದ ಸಮಯಕ್ಕೆ ಸರಿಯಾಗಿ ಬಡವರಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುವ ವ್ಯವಸ್ಥೆ ಆಗಬೇಕಾಗಿದೆ.ಹಾಗೆ ವೈದ್ಯಕೀಯ ಕ್ಷೇತ್ರಕ್ಕೆ ಹೊಸದಾಗಿ ಬೇಕಾಗುವ ಉಪಕರಣಗಳು ಸೇರಿದಂತೆ ಇನ್ನಿತರ ಅವಶ್ಯಕತೆ ಇರುವ ಸಾಮಾಗ್ರಿಗಳನ್ನು ಸರಕಾರ ಆದಷ್ಟು ಬೇಗ ಕೊಡುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲೇಬೇಕು.ಹಾಗೆ ಆಯುಷ್ ಇಲಾಖೆಯನ್ನು ಮತ್ತಷ್ಟು ಜನ-ಸ್ನೇಹಿ ಮಾಡಲು ಸರಕಾರ ಗಂಭೀರ ಚಿಂತನೆ ಮಾಡುವುದು ಒಳ್ಳೆಯದು. ಅಲ್ಲದೆ ಬಡವರಿಗೆ ಅಂದರೆ ವಸತಿ ರಹಿತ ಬಡ ಜನರನ್ನು ಗುರುತಿಸಿ,ಅವರಿಗೆ ವಿಶೇಷ ವಸತಿ ವ್ಯವಸ್ಥೆ ಮಾಡುವುದು ಸರಕಾರದ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ನಡೆಸುವುದು ಅಗತ್ಯವಿದೆ.ಅದೇ ರೀತಿ ಮನೆಗೊಂದು ಶೌಚಾಲಯ ನಿರ್ಮಾಣಕ್ಕೂ ಆದ್ಯತೆ ನೀಡಬೇಕು.ದೇಶದ ಪ್ರತಿಯೊಬ್ಬ ಪ್ರಜೆಗೂ ಅಗತ್ಯ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಅದೇ ರೀತಿ ನೀರಾವರಿ,ವಿದ್ಯುತ್, ಪರಿಸರ, ರಸ್ತೆ, ಶಿಕ್ಷಣ,ಅರಣ್ಯಗಳಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಯೋಚನೆ ಮಾಡುವುದು ಒಳ್ಳೆಯದು. ಜೊತೆ ಜೊತೆಗೆ ಭಾರತ ಹಳ್ಳಿಗಳಿಂದ ಕೂಡಿರುವ ದೇಶ ಹಾಗಾಗಿ ಹಳ್ಳಿಗಳು ಸೇರಿದಂತೆ ನಗರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಬೇಕು. ಅದೇ ರೀತಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಪರಿಚ್ಛೇಧ 371 ಜೆ ಅನ್ವಯ ವಿಶೇಷ ಸ್ಥಾನಮಾನ ಸಿಕ್ಕಿದೆ. ಆದರೆ ಈ ಪ್ರದೇಶಕ್ಕೆ ಸಂವಿಧಾನಬದ್ಧವಾಗಿ ದೊರಕಿಸಿಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನೂ ಇನ್ನು ಮರಿಚೀಕೆಯಾಗಿವೆ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳು ಕಲ್ಪಿಸುವಲ್ಲಿ ಸರ್ಕಾರ ಮುಂದಾಗಬೇಕು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10 ನೇ ತರಗತಿಯವರೆಗಿನ ಎಲ್ಲಾ ಮಕ್ಕಳನ್ನೂ ಸಮಾನವಾಗಿ ಕಾಣುವುದು ಸೇರಿದಂತೆ ಸೌಲಭ್ಯಗಳು ಸೀಗುವಂತಹ ಕಾಯ್ದೆ ಜಾರಿಗೆ ತರಬೇಕು. ಅಂದಾಗಲೇ ಮಕ್ಕಳ ಮನಸ್ಸಿನಲ್ಲಿ ಇರುವ ಅಸಮಾನತೆ ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿ:- ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವುದು ನಿಜವಾದ ದೇಶಪ್ರೇಮ. ದೇಶಭಕ್ತಿ ಎನ್ನುವುದು ರಾಜಕೀಯ ಘೋಷಣೆ ಮಾತ್ರ ಸೀಮಿತವಾಗಬಾರದು. ಅದು ಪ್ರತಿಯೊಬ್ಬ ಭಾರತೀಯನ ಹೃದಯಂತರಾಳದಿಂದ ಪುಟಿದೆದ್ದು ಬರುವ ಜೀವಪರ ದನಿ ಆಗಬೇಕು. ಅಂದಾಗಲೇ ದೇಶಭಕ್ತಿಗೊಂದು ಗೌರವ ದೊರೆಯುತ್ತದೆ. ಅಂದಾಗಲೇ ಬಡವರ ಬಗ್ಗೆ ಕಾಳಜಿ, ಶೋಷಿತರ ಬಗ್ಗೆ ಅನುಕಂಪ. ಮಹಿಳೆಯರ ಬಗ್ಗೆ ಗೌರವ ತೋರುವುದೇ ನಿಜವಾದ ದೇಶಪ್ರೇಮ ಎನ್ನಬಹುದು ಜೊತೆಗೆ ಸಮಾನತೆಯ ತಳಹದಿಯ ಮೇಲೆ ಸಮ ಸಮಾಜ ನಿರ್ಮಾಣದ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು, ಪ್ರಾಮಾಣಿಕವಾಗಿ ಮೂಲಭೂತ ಸೌಕರ್ಯಗಳನ್ನು ಈಡೇರಿಸುವುದೇ ದೇಶಪ್ರೇಮ ಎನ್ನುವುದು ನಾವ್ಯಾರು, ಯಾವತ್ತೂ ಮರೆಯಬಾರದು. ಇನ್ನು ದೇಶದ ಜಲ-ನೆಲ-ಗಡಿಗಳ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಹೋರಾಟ ಮಾಡುವುದು ಅತಿ ಅವಶ್ಯಕತೆ ಇದೆ. ಇದಲ್ಲದೇ ಯಾರಿಗೆ ಬಂತು, ಎಲ್ಲಿಗೆ ಬಂತು ಸ್ವಾತಂತ್ರ್ಯ ಎನ್ನುವ ಮಾತುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ನಿಸ್ವಾರ್ಥ ಸೇವೆಗೆ ಮುಂದಾಗಲಿ, ಮುಂದಾಗುವ ಮೂಲಕ ಸರ್ವರಿಗೂ ಸಮಪಾಲು ಸಮಬಾಳು ಅನ್ನುವ ನೀತಿಯಡಿಯಲ್ಲಿ ಕಾರ್ಯೋನ್ಮುಖವಾಗಿ ಕೆಲಸ ಮಾಡಲಿ,ಕೇವಲ ಉಳ್ಳವರಿಗೆ ಮಾತ್ರ ಅಧಿಕಾರದ ಹಂಚಿಕೆ ಬೇಡ ಅಂದರೆ ಹಕ್ಕು ಬೇಡ, ಕೆಳವರ್ಗದ ಬಡಜನತೆಗೂ ಸರ್ವ ರೀತಿಯಿಂದಲೂ ಎಲ್ಲಾ ಅಧಿಕಾರದ ಹಕ್ಕುಗಳು ಈ 75 ರ ಸ್ವತಂತ್ರ ಸಮಯದಲ್ಲಾದರೂ ಸೀಗಲಿ ಎಂಬ ಭಾವನೆ ಈ ಲೇಖನದ ಆಶಯವಾಗಿದೆ. ಕೇವಲ ತೋರಿಕೆಗಾಗಿ ನಾಟಕ ಮಾಡುವುದು ಖಂಡಿತಾ ಬೇಡವೇ ಬೇಡ. ನುಡಿದಂತೆ ನಡೆಯುವ ಕೆಲಸ ಕ್ರಿಯೆಗಳು ಆಗಲೆಂದು ಆಶಿಸುತ್ತೇವೆ. ಈ ಪುಣ್ಯದ ಕಾಯಕವನ್ನೇ ನಾವೆಲ್ಲರೂ ಸೇರಿದಂತೆ ನಮ್ಮನ್ನು ಆಳುವ ಸರ್ಕಾರಗಳು ಮಾಡಲಿ, ಮಾಡುವುದು ಅವರುಗಳ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಇನ್ನು ಸಾಗಬೇಕಾದ ದಾರಿ ಬಹಷ್ಟು ದೂರು ಇದೆ. ಸಾಗಿ ಬಂದ ದಾರಿಯ ಬಗ್ಗೆ ಹೆಮ್ಮೆ, ತೃಪ್ತಿ ಇದೆ.ಅಭಿವೃದ್ಧಿ ಪಥದಲ್ಲಿ ಸಾಗುವ ಕೆಲಸ ಸರಕಾರದ ಮೇಲಿದೆ.ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಯಪ್ರವತೃರಾಗಲೆಂದು ಬಯಸುತ್ತೇವೆ. ಚೀರಋಣಿ:- ದೇಶದ ಗಡಿ ಕಾಯುವ ಪ್ರತಿಯೊಬ್ಬ ವೀರ ಯೋಧರು, ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ವರ್ಗದವರು, ಅನ್ನವ ಹಾಕುವ ಭಾರತದ ಬೆನ್ನೆಲುಬರಾದ ರೈತ ಸಮುದಾಯವರನ್ನೂ ಈ ಸಂದರ್ಭದಲ್ಲಿ ಅವರುಗಳನ್ನು ಗೌರವಿಸಿ, ನೆನಪಿಸಿಕೊಳ್ಳುತ್ತಾ ಅವರ ಸೇವೆ,ಬಲಿದಾನಕ್ಕೆ ಸದಾ ಚೀರಋಣಿಯಾಗಿರುತ್ತೇವೆ. ಜೊತೆಗೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಹೆಮ್ಮೆಯೆನಿಸುತ್ತದೆ.ಹಾಗಾಗಿ ಅವರ ನಿಸ್ವಾರ್ಥ ಸೇವೆಗೆ ಎಂದೆಂದಿಗೂ ಮಾದರಿ ಜೊತೆಗೆ ಬೆಲೆ ಕಟ್ಟಲಾಗದು. ಶುಭಕಾಮನೆಗಳು:- ದೇಶ ಸಧ್ಯ 75 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಸಜ್ಜಾಗಿದೆ. ಈ ಹೊತ್ತಿನಲ್ಲಿ ಭಾರತದ ಎಲ್ಲಾ ಸೋದರ-ಸೋದರಿಯರಿಗೆ ತುಂಬು ಹೃದಯದ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಸಲ್ಲಿಸುತ್ತೇವೆ.
ಲೇಖಕರು : ಸಂಗಮೇಶ ಎನ್ ಜವಾದಿ.