ಸರಕಾರದಿಂದ ಹೆಬ್ಬಾಳದಲ್ಲಿ ಪುಷ್ಪ ಮಾರುಕಟ್ಟೆಗೆ ಜಾಗ ಮಂಜೂರಾತಿ ….
ಪುಷ್ಟ ಬೆಳೆಗಾರರ ಸಂಘದಿಂದ ಸ್ವಾಗತ -ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷ ಟಿ ಎಂ ಅರವಿಂದ್ ಹಾಗೂ ನಿರ್ದೇಶಕ ಶ್ರೀಕಾಂತ ಬೆಳ್ಳಂಪಳ್ಳೀ ಅವರ ಪ್ರಯತ್ನಕ್ಕೆ ದೊರೆತ ಫಲ-ಕೆ.ಆರ್ ಮಾರುಕಟ್ಟೆಯ ಬೀದಿಗಳಲ್ಲಿ ನಡೆಯುವ ಮಾರುಕಟ್ಟೆಗೆ ಅತ್ಯುತ್ತಮ ಪರ್ಯಾಯ ವ್ಯವಸ್ಥೆ ಬೆಂಗಳೂರು ಆಗಸ್ಟ್ 20: ಕರ್ನಾಟಕ ರಾಜ್ಯದ ರೈತರಿಗೆ ತಾವು ಬೆಳೆದ ಹೂಗಳನ್ನು ಮಾರಾಟ ಮಾಡಲು ಬೆಂಗಳೂರು ನಗರದಲ್ಲಿ ವ್ಯವಸ್ಥಿತವಾದ ಮಾರುಕಟ್ಟೆಯನ್ನು ನಿರ್ಮಿಸುವ ಉದ್ದೇಶದಿಂದ, ಹೆಬ್ಬಾಳ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗದಲ್ಲಿ 10 ಏಕರೆ ಜಾಗವನ್ನು ತೋಟಗಾರಿಕಾ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿರುವುದಕ್ಕೆ ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷ ಟಿ ಎಂ ಅರವಿಂದ್ ಹರ್ಷ ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳಿಂದ ರಾಜ್ಯದ ರೈತರು ತಾವು ಬೆಳೆದಂತಹ ಹೂಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಇರಲಿಲ್ಲ. ಕೆ. ಆರ್ ಮಾರುಕಟ್ಟೆಯಲ್ಲಿ ಸರಿಯಾದ ಜಾಗವಿಲ್ಲದೆ ಇಕ್ಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿತ್ತು. ಈ ಹಿನ್ನಲೆಯಲ್ಲಿ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿರುವ ಜಾಗವನ್ನು ನೀಡುವಂತೆ ಈ ಹಿಂದೆ ಪತ್ರ ಬರೆದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದೇವು. ಅದರ ಫಲಶೃತಿಯಾಗಿ ತೋಟಗಾರಿಕಾ ಇಲಾಖೆಗೆ 10 ಎಕರೆಗಳ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದು ಬಹಳ ಸ್ವಾಗತಾರ್ಹ ವಿಷಯವಾಗಿದೆ. ಸರಿಯಾದ ಮಾರುಕಟ್ಟೆ ಇಲ್ಲದೆ, ಸರಿಯಾದ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದ ಪುಷ್ಪ ಬೆಳೆಗಾರರಿಗೆ ಎಲ್ಲಾ ಋತುಮಾನಗಳಲ್ಲೂ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುವಂತಹ ವ್ಯವಸ್ಥೆ ನೂತನ ಮಾರುಕಟ್ಟೆಯಲ್ಲಿ ಇರಲಿದೆ. ನಮ್ಮ ಮನವಿಯನ್ನು ಅರಿತು ರೈತರ ಪರ ಆದೇಶ ನೀಡಿದ್ದಕ್ಕೆ ರಾಜ್ಯದ ಪುಷ್ಪ ಬೆಳೆಗಾರ ಸಂಘದ ಹಾಗೂ ರಾಜ್ಯದ ರೈತರ ಪರವಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ ಅರವಿಂದ್ ಹೇಳಿದರು. ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘದ ನಿರ್ದೇಶಕ ಶ್ರೀಕಾಂತ್ ಬೊಲ್ಲಂಪಳ್ಳಿ ಮಾತನಾಡಿ, ರಾಜ್ಯ ಸರಕಾರ ತನ್ನ 2021-22 ನೇ ಆಯವ್ಯಯದಲ್ಲಿ ಈ ಘೋಷಣೆಯನ್ನು ಮಾಡಿತ್ತು. ಆದರೆ, ಈ ಬಗ್ಗೆ ಸರಿಯಾದ ಸಮಯದಲ್ಲಿ ಕಾರ್ಯಗಳು ಪ್ರಾರಂಭವಾಗಿರಲಿಲ್ಲ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಪುಷ್ಪ ಹರಾಜು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ ಹಾಗೂ ಪುಷ್ಪ ಬೆಳೆಗಾರ ರೈತರ ಸಹಯೋಗದಲ್ಲಿ ನಾವುಗಳು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ್ದೇವು. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನು ಇಟ್ಟಿರುವುದು ನಮಗೆ ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು. ಆಗಸ್ಟ್ 19, 2021 ರಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಈ ಆದೇಶ ಹೊರಡಿಸಿದ್ದಾರೆ.
ವರದಿ – ಹರೀಶ ಶೇಟ್ಟಿ ಬೆಂಗಳೂರು