ರಕ್ಷಣೆಯನ್ನು ನೀಡುವ ಬಂಧನ– ಅದುವೇ ‘ರಕ್ಷಾ ಬಂಧನ‘
ಶ್ರಾವಣ ಮಾಸ ಬಂತೆಂದರೆ ಸಾಕು, ಹಬ್ಬಗಳ ಸುಗ್ಗಿ ಅಂತನೇ ಹೇಳಬಹುದು, ಇಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಬರುವ ಹಬ್ಬಗಳಂತೂ ಸಂತೋಷವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತಾ ಹೋಗುತ್ತವೆ, ಅದರಲ್ಲೂ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ. ಹೌದು, ಸಹೋದರ-ಸಹೋದರಿಯರಿಯರ ಸಂಬಂಧವನ್ನು ಕೊಂಡಾಡುವ ಮತ್ತು ಅದರ ಸ್ವಾದವನ್ನು ಸವಿಯುವ ಹಬ್ಬವೇ ರಕ್ಷಾ-ಬಂಧನ. ಇದನ್ನು ಭಾರತದಲ್ಲಿ ಅಂತೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಇದು ಅಣ್ಣ-ತಂಗಿಯರ ಮತ್ತು ಅಕ್ಕ-ತಮ್ಮನ ನಡುವಿನ ಬಾಂಧವ್ಯವನ್ನು ಸಾರುವ ಹಬ್ಬವಾಗಿರುವುದರಿಂದ, ಈ ಹಬ್ಬದಂದು ಸಹೋದರ-ಸಹೋದರಿಯರು ಪರಸ್ಪರರ ಏಳಿಗೆಯನ್ನು, ಸಂತೋಷವನ್ನು ಮತ್ತು ಒಳ್ಳೆಯದಾಗಲಿ ಎಂಬ ಆಸೆಯನ್ನು ವ್ಯಕ್ತಪಡಿಸುತ್ತ ಹಬ್ಬವನ್ನು ಆಚರಿಸುತ್ತಾರೆ. ರೇಷ್ಮೆಯಿಂದ ಮಾಡಲಾಗಿರುವ ದಾರದಿಂದ ತಯಾರಿಸಲಾದ ರಾಖಿಯನ್ನು ಸೋದರರ ಕೈಗೆ ಕಟ್ಟಲಾಗುತ್ತದೆ. ಹೀಗೆ ಕಟ್ಟುವಾಗ ತಮ್ಮ ಸೋದರರಿಗೆ ಒಳ್ಳೆಯದಾಗಲಿ ಎಂಬ ಆಸೆಯನ್ನು ಸೋದರಿಯರು ವ್ಯಕ್ತಪಡಿಸುತ್ತಾರೆ ಮತ್ತು ಅವರ ಸಹೋದರಿಯರಿಗೆ ಎಂತಹ ಕಷ್ಟದಲ್ಲಾದರು ಬಂದು ಕಾಪಾಡುತ್ತೇವೆ ಎಂಬ ಪ್ರಮಾಣವನ್ನು ಮಾಡುತ್ತಾರೆ. ಅದೇ ರೀತಿ ಸಹೋದರಿಯರು ದೇವರು ತಮ್ಮ ಸಹೋದರನನ್ನು ದುಷ್ಟಶಕ್ತಿಗಳಿಂದ ಕಾಪಾಡಲಿ ಎಂದು ಅರಸಿಕೊಳ್ಳುತ್ತ ರಕ್ಷಾ ಬಂಧನವನ್ನು ಕಟ್ಟುತ್ತಾರೆ. …
ವರದಿ ~ಮೌನೇಶ್ ರಾಥೋಡ್ ಬೆಂಗಳೂರು