ರಾನಡೆಯವರ ಜೀವನ ಜ್ಞಾನದ ಪ್ರವಾಹ ಇದ್ದಹಾಗೆ : ಸಿದ್ದೇಶ್ವರ ಮಹಾಸ್ವಾಮಿಗಳು.
ಜನಸ್ಪಂದನ ನ್ಯೂಸ್, ಅಥಣಿ- ಮೇರು ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳ ಪುಸ್ತಕ ಬಿಡುಗಡೆ ಸ್ಮರಣೀಯ ಕಾರ್ಯ, ಶ್ರೇಷ್ಠ ಜ್ಞಾನಿಗಳನ್ನು ಗೌರವಿಸುವುದು ಶ್ಲಾಘನೀಯ ಕಾರ್ಯ, ರಾಡನೇಯವರು ತತ್ವಜ್ಞಾನ ಹಾಗೂ ಅನುಭಾವ ಎಂಬ ಎರಡೂ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ ಮೇರು ವ್ಯಕ್ತಿ ಎಂದು ವಿಜಯಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಸ್ಥಳೀಯ ಡಾ ಆರ್ ಎಚ್ ಕುಲಕರ್ಣಿ ಸಭಾಭವನದಲ್ಲಿ ಜೆ ಇ ಶಿಕ್ಷಣ ಸಂಸ್ಥೆ ಅಥಣಿ ಹಾಗೂ ಅಕಾಡೆಮಿ ಆಫ್ ಕಂಪೇರಿಟಿವ್ ಫಿಲಾಸಫಿ ಆ್ಯಂಡ್ ರಿಲಿಜಿಯನ್, ಗುರುದೇವ ರಾನಡೆ ಮಂದಿರ, ಹಿಂದವಾಡಿ ಬೆಳಗಾವಿ ಇವರಿಗಳ ಸಹಯೋಗದಲ್ಲಿ ಶ್ರೀ ಗುರುದೇವ ಡಾ ಆರ್ ಡಿ ರಾನಡೆಯವರ ನಿಕಟ ಶಿಷ್ಯ ಮನೋಹರರಾವ್ ದೇಶಪಾಂಡೆ ಅವರ ವಿರಚಿತ ಪುಸ್ತಕ ಶ್ರೀ ಗುರುದೇವ ಡಾ ಆರ್ ಡಿ ರಾನಡೆ ಅವರ ಪುಸ್ತಕದ ಬಿಡುಗಡೆ ಸಮಾರಂಭದ ದಿವ್ಯಸಾನಿಧ್ಯ ಮತ್ತು ಗ್ರಂಥ ಬಿಡುಗಡೆ ಮಾಡಿ ಮಾತನಾಡುತ್ತಾ ನದಿಯ ನೀರಿನಲ್ಲಿ ಓಂಕಾರವನ್ನು ಕೇಳಿ ಆನಂದ ಪಟ್ಟವರು ರಾನಡೆಯವರು, ನಾವು ಅವರ ತತ್ವಗಳ ಜ್ಞಾನ ಪಡೆಯಬೇಕು ತತ್ವದಲ್ಲಿ ಮಗ್ನತೆ ಹೊಂದಿದರೆ ಜೀವನ ಸಾರ್ಥಕ ಎಂದರು. ಮುಂದುವರೆದು ಮಾತನಾಡುತ್ತಾ ಕಾಳಿದಾಸ, ವಾಲ್ಮೀಕಿ ಅವರ ಮಗ್ನತೆ ಅಪರೂಪ ಅವರು ಸತ್ಯದಲ್ಲಿ ತಮ್ಮ ಮನ ಮುಳುಗಿಸಿದವರು, ಪ್ರಶಾಂತಿಯಲ್ಲಿ, ವಿಶ್ವಸೌಂದರ್ಯದಲ್ಲಿ ತಮ್ಮ ಮನ ಮುಳುಗಿಸಿದವರು. ಶಬ್ದಜ್ಞಾನ ಬೇರೆ ಅನುಭಾವ ಬೇರೆ, ಮನುಷ್ಯ ಆನಂದ ಅನುಭವಿಸಬೇಕಾದರೆ ತನನ್ನು ತಾನು ಮಗ್ನಗೊಳಿಸಬೇಕು ಎಂದರು. ರಾನಡೆ ಅವರ ಜೀವನವೇ ಒಂದು ಜ್ಞಾನದ ಪ್ರವಾಹ. ಎಲ್ಲರನ್ನು ಸಮಾನವಾಗಿ ನೋಡಿದವರು ರಾನಡೆಯವರು, ಜಗತ್ತಿನ ಎಲ್ಲ ಸಿದ್ದಾಂತಗಳ ಮುಂದೆ ತತ್ವದ ಪ್ರೇಮ, ದರ್ಶನ ಎತ್ತಿಹಿಡಿದವರು. ಆದ್ದರಿಂದ ಅವರ ಮಾತುಗಳಿಗೆ ಅಷ್ಟು ಬೆಲೆ ಇದೆ. ಸಗುಣ ನಿರ್ಗುಣ ಸಮನ್ವಯ, ದ್ವೈತ ಅದ್ವೈತ ಸಮನ್ವಯ ಎಂದವರು ರಾನಡೆಯವರು ಎಂದರು. ಶ್ರೇಷ್ಠ ತತ್ವಜ್ಞಾನಿ ರಾಧಾಕೃಷ್ಣನ ಅವರು ರಾನಡೆಯವರ ಅನುಭಾವ ವಿಶೇಷ ಎಂದರು, ಕಳೆದ ಶತಮಾನದ ಬಹುದೊಡ್ಡ ತತ್ವಜ್ಞಾನಿಗಳು ರಾನಡೆಯವರು. ಅವರ ಅನುಭವ ಚಿಂತನೆಗಳು ಜ್ಞಾನದ ಪ್ರವಾಹ ಇದ್ದಹಾಗೆ. ರಾನಡೆಯವರ ಗುರುದೇವ ಎನ್ನುವುದು ಬಿರುದಲ್ಲ ಎಲ್ಲರ ಹೃದಯದಿಂದ ಬಂದಿರುವುದು, ಅವರ ಗುರುತ್ವ ಶ್ರೇಷ್ಠವಾದದ್ದು. ಗ್ರಂಥಗಳನ್ನು ಓದಿದರೆ ಮನಸ್ಸು ಅರಳುತ್ತದೆ. ಯಾರ ಬದುಕು ನೋಡಿದರೆ ಮನಸ್ಸು ಅರಳುತ್ತದೆಯೋ ಅಂತಹ ಮಹಾನುಭಾವ ರಾನಡೆಯವರು, ಲೇಖಕ ದೇಶಪಾಂಡೆಯವರ ಬರಹ ಸರಳ ಸುಲಲಿತ, ದೊಡ್ಡ ಜ್ಞಾನಿಯಿಂದ ಸಣ್ಣ ಸಾಮಾನ್ಯ ಜನತೆ ಪ್ರೀತಿಸುವಂತ ವ್ಯಕ್ತಿತ್ವ ರಾನಡೆಯವರದ್ದು, ರಾನಡೆಯವರು ಓಳಗೂ ಸ್ವಚ್ಚ ಹೊರಗೂ ಸ್ವಚ್ಚ ಮನೋಭಾವದವರ ಎಂದರು. ಓದುಗರಿಗೆ ಮುಟ್ಟಿಸುವಂತಹ ಲೇಖನ ಆದರೆ ಮಾತ್ರ ಪುಸ್ತಕ ಬರೆದುದ್ದಕ್ಕೂ ಸಾರ್ಥಕ, ಪುಸ್ತಕಗಳು ಎಲ್ಲರುಗೂ ಪ್ರೇರಣೆ ಕೊಡುತ್ತವೆ, ರಾನಡೆಯವರ ಗುರುದೇವ ಎಂಬ ಶಬ್ದಕ್ಕಿರುವ ಬೆಲೆ ಯಾರಿಗೂ ಇಲ್ಲ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕರ್ನಾಟಕ ಆರ್.ಎಸ್.ಎಸ್ ಪ್ರಾಂತ ಸಹಸಂಘಚಾಲಕ ಅರವಿಂದರಾವ ದೇಶಪಾಂಡೆ ಅವರು ಮಾತನಾಡುತ್ತಾ ಅಥಣಿಯ ಭೂಮಿ ಪುಣ್ಯ ಭೂಮಿ. ಇಲ್ಲಿ ಆಧ್ಯಾತ್ಮಿಕ ಸ್ಪರ್ಶವಿದೆ. ಮುರುಘೇಂದ್ರ ಶಿಬಯೋಗಿಗಳು ನಡೆದಾಡಿದ ಭೂಮಿಯಲ್ಲಿ ನಾವಿರೋದು ನಮ್ಮ ಪುಣ್ಯ. ಅಥಣಿ ಎಂಬ ತಪೋಭೂಮಿಯ ರಾನಡೆ ಅವರ ಶಿಷ್ಯರಾದ ಮನೋಹರರಾವ ಅವರ ಪುಸ್ತಕ ಅದ್ಭುತವಾದದ್ದು ಎಂದರು. ರಾನಡೆಯವರ ಮೇರು ಸದೃಶ್ಯ ವ್ಯಕ್ತಿತ್ವವನ್ನು ಪುಸ್ತಕದ ರೂಪದಲ್ಲಿ ಹೊರತರುತ್ತಿರುವುದು ವಿಶೇಷ, ಲೇಖಕರ ಮಾತೃಭಾಷೆ ಮರಾಠಿಯಾದರೂ ಕನ್ನಡ ಇಂಗ್ಲೀಷ ನಲ್ಲಿ ಪುಸ್ತಕ ಬರೆದಿರುವುದು ಸ್ವಾಗತಾರ್ಹ ಎಂದರು. ಸಮಾರಂಭದಲ್ಲಿ ಡಿ ದೇವರಾಜ ಅರಸ ರಾಜ್ಯ ಪ್ರಶಸ್ತಿ ಪುರಸ್ಕೃತ ಬಿ ಎಲ್ ಪಾಟೀಲ ಅವರಿಗೆ ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು. ವಿಶೇಷ ಉಪಸ್ಥಿತಿ ವಹಿಸಿದ್ದ ಜೆ ಇ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ ರಾಮ ಕುಲಕರ್ಣಿ ಸ್ವಾಗತಿಸಿದರು, ಹಿರಿಯ ನ್ಯಾಯವಾದಿ ಮಾರುತಿ ಝಿರಲಿ ಪ್ರಾಸ್ಥಾವಿಕ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಿವಾನಂದ ಸ್ವಾಮಿಗಳು, ಬಸವೇಶ್ವರ ಸ್ವಾಮೀಜಿ, ಸುಬ್ರಮಣ್ಯ ಭಟ್, ಆರ್ ಜಿ ಜಕಾತಿ, ಎಲ್ ವಿ ಕುಲಕರ್ಣಿ, ಆರ್ ಎ ಕುಲಕರ್ಣಿ, ನಚಿಕೇತ್ ಕಾಥವಾಟೆ, ಆನಂದರಾವ ದೇಶಪಾಂಡೆ, ಪ್ರಕಾಶ ಮಹಾಜನ್, ಎ ಎಮ್ ಖೋಬ್ರಿ, ಬಾಳಾಸಾಹೇಬ ಲೋಕಾಪೂರ, ದ್ರುವಾ ಕುಲಕರ್ಣಿ, ಆರ್ ಎಮ್ ದೇವರಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಡಾ ಪ್ರೀಯಂವದಾ ಅಣೆಪ್ಪನವರ, ನಿಲೇಶ ಝರೆ, ಅರ್ಚನಾ ಪಾಟೀಲ ನಿರೂಪಿಸಿದರು, ಸಂದೀಪ ಸಂಗೋರಾಮ ವಂದಿಸಿದರು. ವರದಿ – ಮಹೇಶ ಶರ್ಮಾ