ಎನ್‌ಇಪಿ ಮುಂದಿನ ಪೀಳಿಗೆಯ ಅಪರಿಮಿತ ಸಾಧ್ಯತೆಗಳಿಗೆ ಅವಕಾಶ ಕಲ್ಪಿಸಲಿದೆ: ಡಾ ತೇಜಸ್ವಿನಿ ಅನಂತಕುಮಾರ್..
ಅನಂತಕುಮಾರ್ ಪ್ರತಿಷ್ಠಾನದ ದೇಶ ಮೊದಲು ವೆಬಿನಾರ್ ಸರಣಿಯ 7 ಕಂತು. ಸಿಎಬಿಈ ಸದಸ್ಯ ಪ್ರೋ. ಎಂ.ಕೆ ಶ್ರೀಧರ್ – ಜಿಪಿಡಿಡಿ ಅಧ್ಯಕ್ಷೆ ಡಾ ಇಂದುಮತಿ ಸೇರಿದಂತೆ ಹಲವರು ಭಾಗಿ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಂವಾದ ಬೆಂಗಳೂರು ಆಗಸ್ಟ್ 28: ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಸುಮಾರು 30 ಕೋಟಿ ಯುವ ಮನಸ್ಸುಗಳಿಗೆ ಸ್ವತಂತ್ರವಾಗಿ ಯೋಚಿಸುವ ಹಾಗೂ ಆಲೋಚಿಸುವ ಸಾಮರ್ಥ್ಯವನ್ನ ಹೆಚ್ಚಿಸುವಂತಹ ಅಪರಿಮಿತ ಅವಕಾಶಗಳನ್ನು ನೀಡುವಂತೆ ರೂಪಿಸಲಾಗಿದೆ ಎಂದು ಅನಂತಕುಮಾರ್ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು. ಇಂದು ಅನಂತಕುಮಾರ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ 7 ನೇ ದೇಶ ಮೊದಲು – ರಾಷ್ಟ್ರೀಯ ಶಿಕ್ಷಣ ನೀತಿ – 30 ಕೋಟಿಗೂ ಅಧಿಕ ಭಾರತೀಯರ ಭವಿಷ್ಯ ವೆಬಿನಾರ್ ನಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಜಾರಿಗೊಳಿಸಲಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶಿಕ್ಷಣ ಕ್ಷೇತ್ರವನ್ನು ಅಮೂಲಾಗ್ರವಾಗಿ ಬದಲಾಯಿಸುವಂತಹ ನೀತಿಯಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ವೃತ್ತಿ ಜೀವನಕ್ಕೆ ಅಥವಾ ಸ್ವಂತ ಉದ್ಯೋಗ ಪ್ರಾರಂಭಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರೇರೇಪಣೆ ನೀಡುವುದಿಲ್ಲ ಎನ್ನುವುದು ಎಲ್ಲರ ದೂರಾಗಿತ್ತು. ಕಲಿಕೆಯಲ್ಲಿ ಕೌಶಲ್ಯತೆ ಹಾಗೂ ವೈವಿಧ್ಯತೆಯೂ ಕಡಿಮೆಯಾಗಿತ್ತು. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯಗಳನ್ನು ಹೊರತುಪಡಿಸಿ ಹಲವಾರು ಸಂಧರ್ಭಗಳಲ್ಲಿ ಇಷ್ಟವಿಲ್ಲದ ವಿಷಯಗಳನ್ನು ಅಧ್ಯಯನ ಮಾಡಬೇಕಾಗಿತ್ತು. ಇದನ್ನು ಅಮೂಲಾಗ್ರವಾಗಿ ಚಿಂತಿಸಿ ಬದಲಾವಣೆ ಮಾಡುವಂತಹ ಪ್ರಯತ್ನದ ಫಲ ನೂತನ ರಾಷ್ಟ್ರೀಯ ಶಿಕ್ಷಣ ನೀತಿ. ವಿದ್ಯಾರ್ಥಿ ತನ್ನ ಕೌಶಲ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ, ತನ್ನ ಸ್ವಂತ ಸಾಮರ್ಥ್ಯ ಮತ್ತು ಆಸಕ್ತಿಯ ಅನುಗುಣವಾಗಿ ವಿಷಯಗಳ ಆಯ್ಕೆ ಹೀಗೆ ಹತ್ತು ಹಲವು ಹೊಸ ಸಾಧ್ಯತೆಗಳನ್ನು ಹೊಂದಿರುವ ಶಿಕ್ಷಣ ನೀತಿ ಇಂದಿನ ಅವಶ್ಯಕತೆಯಾಗಿತ್ತು. ನಮ್ಮ ದೇಶದ ಮುಂದಿನ ಪೀಳಿಗೆಯ ಮುಂದೆ ಅಪರಿಮಿತ ಸಾಧ್ಯತೆಗಳನ್ನು ತರೆದಿಡುವ ಮೂಲಕ ರಾಷ್ಟ್ರದ ಯುವ ಸಂಪತ್ತನ್ನು ಬೌದ್ದಿಕವಾಗಿ ಹಾಗೂ ಶೈಕ್ಷಣಿಕವಾಗಿ ಮತ್ತಷ್ಟು ಬಲಿಷ್ಠಗೊಳಿಸುವ ನಿರೀಕ್ಷೆಯನ್ನು ಹುಟ್ಟಿಸಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಿದ ಸಮಿತಿಯ ಸದಸ್ಯರಾದ ಪ್ರೋ. ಎಂ. ಕೆ ಶ್ರೀಧರ್ ಅವರು ವೆಬಿನಾರ್ ನಲ್ಲಿ ಭಾಗವಹಿಸಿ ಮಾತನಾಡಿ, ನೂತನ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯನ್ನ ಅಮೂಲಾಗ್ರವಾಗಿ ಬದಲಾಯಿಸಲಿದೆ. ಶಿಕ್ಷಣ ಕ್ಷೇತ್ರದ ಎಲ್ಲಾ ಮಜಲುಗಳ ಬಗ್ಗೆ ತಿಳುವಳಿಕೆ ಹಾಗೂ ಸಮಗ್ರ ಅಧ್ಯಯನವನ್ನು ಮಾಡಿರುವಂತಹ ನೀತಿ ಇದಾಗಿದೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ನಮ್ಮ ಯುವ ಜನಾಂಗದ ಕಲ್ಪನೆಗಳನ್ನು ಕಲ್ಪಿಸಿಕೊಳ್ಳುವುದು ನಮ್ಮ ನಿಲುವಿಗೆ ಸಿಗದಂತಹದ್ದು. ಅಂತಹ ಯುವ ಜನಾಂಗಕ್ಕೆ ನೂತನ ರೀತಿಯ ಆಲೋಚನೆ, ಸಂಶೋಧನೆಗೆ ಅವಕಾಶ ನೀಡುವಂತಹ ವ್ಯವಸ್ಥೆ ನೂತನ ಶಿಕ್ಷಣ ನೀತಿಯಲ್ಲಿದೆ. ಇಂತಹ ಸಾಧ್ಯತೆಗಳನ್ನು ಬಳಸಿಕೊಂಡು ಅವರು ಸಾಧಿಸಲಿರುವ ಹೊಸ ಸಾಧ್ಯತೆಗಳ ಬಗ್ಗೆ ನನಗೆ ಕುತೂಹಲವಿದೆ. ಅಲ್ಲದೆ, ಶಿಕ್ಷಕರಿಗೂ ಉತ್ತಮ ತರಬೇತಿಯ ಅಗತ್ಯವನ್ನು ಎನ್‌ಇಪಿಯಲ್ಲಿ ನಮೂದಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೋ. ಪಿ.ವಿ ಕೃಷ್ಣ ಭಟ್, ಗ್ಲೋಬಲ್ ಪಾರ್ಟನರ್‌ಶಿಪ್ ಫಾರ್ ಡಿಸೆಬಲಿಟಿ ಡೆವಲಪ್‌ಮೆಂಟ್ ಅಧ್ಯಕ್ಷೆ ಡಾ. ಇಂದುಮತಿ ರಾವ್, ಬೇಸ್ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಪ್ರಯೋಗ ಸಂಸ್ಥೆಯ ಟ್ರಸ್ಟಿ ಶ್ರೀ ವಲ್ಲೀಶ್ ಹೆರೋರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುಕಾಂತ್ ಚಟ್ಪಲ್ಲಿ, ನೃಪತುಂಗಾ ವಿಶ್ವವಿದ್ಯಾಲಯದ ಕುಲಪತಿ ಡಾ ಶ್ರೀನೀವಾಸ ಬಳ್ಳಿ, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ್ ಓಕ್, ವಿಜೇತಾ ಅನಂತಕುಮಾರ, ಸುಜೀತಕುಮಾರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 400 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ವರದಿ – ಹರೀಶ ಶೇಟ್ಟಿ ಬೆಂಗಳೂರು