ಭಾಲ್ಕಿ ತಾಲೂಕಿನ ವಿವಿಧೆಡೆ ಬೇಳೆ ಹಾನಿ ವೀಕ್ಷಿಸಿದ ಸಚಿವ ಪ್ರಭು ಚೌಹಾಣ್.
ಸರ್ಕಾರಕ್ಕೆ ನಿಖರ ಮಾಹಿತಿ ತುರ್ತಾಗಿ ಸಲ್ಲಿಸಿ * ಹಾನಿಯ ನಿಖರ ಮಾಹಿತಿಯನ್ನು ಸಲ್ಲಿಸಿ * ಇಂಚೂರ್ ಸೇತುವೆ ಎತ್ತರ ಹೆಚ್ಚಿಸಲು ಸೂಚನೆ. * ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ. ಭಾಲ್ಕಿ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಭೇಟಿ ನೀಡಿ ಭಾರಿ ಮಳೆಯಿಂದ ರೈತರ ಬೆಳೆ, ಮನೆ ಹಾನಿ, ರಸ್ತೆ, ಸೇತುವೆ ಹಾನಿಯನ್ನು ಪರಿಶೀಲಿಸಿದರು. ಅತಿವೃಷ್ಟಿಯಿಂದಾಗಿ ಉಂಟಾದ ಹಾನಿಯ ನಿಖರ ಮಾಹಿತಿಯನ್ನು ಸರ್ಕಾರಕ್ಕೆ ಕೂಡಲೇ ಸಲ್ಲಿಸಬೇಕೆಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಆನಂದವಾಡಿ-ನಿಡೇಬನ ಬ್ರಿಜ್ ಕಂ ಬ್ಯಾರೇಜ್‌ಗೆ ಭೇಟಿ ನೀಡಿ, ಸೇತುವೆಯ ಸ್ಥಿತಿಗತಿಯನ್ನು ಅವಲೋಕಿಸಿದರು. ಅತ್ಯಂತ ಹಳೆಯದಾದ ಸೇತುವೆಯನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಗೇಟ್‌ಗಳು ತುಂಬಾ ಹಳೆಯದಾಗಿದ್ದರಿಂದ ಮುಂದಿನ ದಿನಗಳಲ್ಲಿ ಅಪಾಯವಾಗಬಹುದು. ಮುಂಚಿತವಾಗಿ ಹಳೆಯ ಗೇಟ್‌ಗಳನ್ನು ಬದಲಾಯಿಸಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನಿಡೇಬನ್ ಬ್ರಿಜ್ ಕಂ ಬ್ಯಾರೇಜ್‌ಗೆ ಭೇಟಿ : ನೀಡಿದ ವೇಳೆ ಸ್ಥಳದಲ್ಲಿ ಹಾಜರಿರದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾತಂಬ್ರಾ ಗ್ರಾಮದ ಹಸಿಮೋದಿನ್, ರಾಜಕುಮಾರ ಬೋರಾಳೆ ಅವರ ಕೃಷಿ ಭೂಮಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾಳಾಗಿರುವ ಸೋಯಾಬಿನ್, ತೊಗರಿ ಬೆಳೆಯನ್ನು ಪರಿಶೀಲಿಸಿದರು. ನಮ್ಮ ಕುಟುಂಬ ಕೇವಲ ಕೃಷಿಯನ್ನು ಮಾತ್ರ ಅವಲಂಬಿಸಿದೆ. ಬೇರೆ ಯಾವುದೇ ಆರ್ಥಿಕ ಸಂಪನ್ಮೂಲಗಳಿಲ್ಲ. ಬೇಗ ಬೆಳೆ ವಿಮೆ ಸಿಗುವಂತೆ ಮಾಡಬೇಕು ಎಂದು ರೈತರು ಸಚಿವರಿಗೆ ಮನವಿ ಮಾಡಿದರು. ಇಂಚೂರ ಸೇತುವೆ ಬಹಳ ಹಳೆಯದು ಮತ್ತು ಕಿರಿದಾಗಿದೆ. ಮಳೆ ಜಾಸ್ತಿಯಾಗಿ ನೀರು ತುಂಬಿದ್ದಲ್ಲಿ ಸುತ್ತಲಿನ ರೈತರು, ಸಾರ್ವಜನಿಕರಿಗೆ, ಸಾಕಷ್ಟು ಸಮಸ್ಯೆಯಾಗುತ್ತಲಿದೆ. ಸೇತುವೆಯ ಎತ್ತರವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ತಾ.ಪಂ. ಇಒ ದೀಪಿಕಾ ನಾಯ್ಕರ್ ವಿರುದ್ಧ ಹರಿಹಾಯ್ದ ಸಚಿವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಬರುತ್ತಿವೆ. ಯಾಕೆ ಸರಿಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪಿಡಿಒಗಳ ಕೆಲಸ ಕಾರ್ಯಗಳನ್ನು ಗಮನಿಸಬೇಕು. ಅನೇಕ ಗ್ರಾಮಗಳಲ್ಲಿ ಚರಂಡಿ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಇವುಗಳನ್ನು ಸರಿಪಡಿಸುವಂತೆ ಸೂಚಿಸಬೇಕು. ವಿದ್ಯುತ್ ಸಮಸ್ಯೆ ಸೇರಿದಂತೆ ಗ್ರಾಮಗಳಲ್ಲಿರುವ ಇನ್ನಿತರ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ತಹಶೀಲ್ದಾರ್ ಕೀರ್ತಿ ಚಾಲಾಕ್, ಪ್ರಮುಖರಾದ ಶಾಂತವೀರ ಕೇಸ್ಕರ್, ಪ್ರಸನ್ನ ಖಂಡ್ರೆ, ಸಂಗಮೇಶ ಭೂರೆ, ಪಂಡಿತ ಶಿರೋಳೆ ಸಂತೋಷ ಪಾಟೀಲ್ ಹಲಸಿ ಇತರರು ಇದ್ದರು.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ