“ಅಕ್ರಮ ಹಿಂದಿ ದಿವಸ್” ಬದಲು ಕರಾಳ ದಿನ ಆಚರಣೆ .! ಹಿಂದಿ ಪ್ರಶಸ್ತಿಯನ್ನು ದಕ್ಷಿಣ ಭಾರತೀಯರು ನಿರಾಕರಿಸಿ..!
ಸೆಪ್ಟೆಂಬರ್ 14 ರಂದು ಕನ್ನಡಿಗರು ನಡೆಸುತ್ತಿರುವ ಹಿಂದಿ ಹೇರಿಕೆ ಬೇಡ ಅಭಿಯಾನದ ಅಂಗವಾಗಿ ಹಿಂದಿ ದಿವಸ್ ಹೆಸರಲ್ಲಿ ಒಕ್ಕೂಟ ಸರ್ಕಾರವು ಕೊಡುವ ಪ್ರಶಸ್ತಿಗಳನ್ನು ದಕ್ಷಿಣ ಭಾರತೀಯರು ನಿರಾಕರಿಸಬೇಕು ಎಂದು ಕನ್ನಡ ರಣಧೀರರ ಪಡೆ ರಾಜ್ಯಾಧ್ಯಕ್ಷ ಚೇತನ್ ಗೌಡ ಎಂ ಒತ್ತಾಯಿಸಿದ್ದಾರೆ. ಒಕ್ಕೂಟ ಸರ್ಕಾರ ನಡೆಸುತ್ತಿರುವ ಹಿಂದಿ ದಿವಸ್ ಕಾರ್ಯಕ್ರಮವೇ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದ್ದು, ಇದೊಂದು “ಅಕ್ರಮ ಹಿಂದಿ ದಿವಸ್” ಕಾರ್ಯಕ್ರಮ ಎಂದು ಅವರು ಹೇಳಿದ್ದಾರೆ. ಹಿಂದಿ ಭಾಷೆ ಮತ್ತು ಹಿಂದಿ ದಿವಸ್ ಅನ್ನು ಪ್ರೋತ್ಸಾಹಿಸಲು ಒಕ್ಕೂಟ ಸರ್ಕಾರವು ‘ರಾಜಭಾಷಾ ಕೀರ್ತಿ ಪುರಸ್ಕಾರ’ ಮತ್ತು ‘ರಾಜಭಾಷಾ ಗೌರವ್ ಪುರಸ್ಕಾರ’ ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗಳನ್ನು ಉದ್ದೇಶಪೂರ್ವಕವಾಗಿ ದಕ್ಷಿಣ ಭಾರತದ ಬ್ಯಾಂಕುಗಳು, ಒಕ್ಕೂಟ ಸರ್ಕಾರದ ಸಂಸ್ಥೆಗಳಿಗೆ ನೀಡುವ ಮೂಲಕ ಹಿಂದಿ ದಿವಸ್ ಅನ್ನು ಪ್ರೋತ್ಸಾಹಿಸುವ ತಂತ್ರಗಾರಿಕೆ ನಡೆಸುತ್ತಿದೆ. ಹಾಗಾಗಿ ಒಕ್ಕೂಟ ಸರ್ಕಾರದ ಈ ಕುತಂತ್ರವನ್ನು ದಕ್ಷಿಣ ಭಾರತೀಯರು, ಅದರಲ್ಲೂ ಕನ್ನಡಿಗರು ವಿಫಲಗೊಳಿಸಬೇಕು. ಸೆಪ್ಟೆಂಬರ್ 14 ರಂದು ಕರ್ನಾಟಕದಲ್ಲಿ ಕನ್ನಡಿಗರು ಕರಾಳ ದಿನ ಆಚರಿಸಲಿದ್ದಾರೆ ಎಂದು ಚೇತನ್ ಗೌಡ ಹೇಳಿದ್ದಾರೆ.
ಭಾರತವು ಒಕ್ಕೂಟ ವ್ಯವಸ್ಥೆಯಾಗಿ ಆಡಳಿತ ಪ್ರಾರಂಭ ಮಾಡಿದ ದಿನದಿಂದಲೇ ನಮ್ಮ ದೇಶವನ್ನು ಭಾಷಾವಾರು ವಿಂಗಡಣೆ ಮಾಡಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಭಾಷೆ ಇದೆ. ವಿವಿಧತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯವಾಗಿರುವಾಗ ಒಂದೇ ಭಾಷೆಯನ್ನು ಹೇರುವುದು ಸರಿಯಲ್ಲ ಎಂಬುದೇ ಹಿಂದಿ ಹೇರಿಕೆ ವಿರುದ್ಧದ ಕೂಗಿನ ನಿಜವಾದ ಉದ್ದೇಶ. ಸೆಪ್ಟೆಂಬರ್ 14 ರಂದು ಒಕ್ಕೂಟ ಸರ್ಕಾರವು ನಡೆಸುತ್ತಿರುವ “ಅಕ್ರಮ ಹಿಂದಿ ದಿವಸ್” ಆಚರಣೆಯೂ ಹಿಂದಿ ಹೇರಿಕೆಯ ಭಾಗವೇ ಆಗಿದೆ. ಆದ್ದರಿಂದಲೇ ಕನ್ನಡ ಸಂಘಟನೆಗಳೆಲ್ಲವೂ ಒಮ್ಮತದ ನಿರ್ಧಾರ ತೆಗೆದುಕೊಂಡು ಸೆಪ್ಟೆಂಬರ್ 14ನ್ನು ಕರಾಳ ದಿನ ಎಂದು ಆಚರಿಸಲು ನಿರ್ಧರಿಸಿದೆ. ಒಕ್ಕೂಟ ಸರ್ಕಾರವು ಹಿಂದಿಗೆ ಪ್ರಾಧಾನ್ಯತೆ ಕೊಡುವುದರಿಂದ ದಕ್ಷಿಣ ಭಾರತೀಯರಿಗೆ ಅನ್ಯಾಯವಾಗುತ್ತಿದೆ. ಮುಖ್ಯವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷಿಕರು ಈ ಕಾರಣದಿಂದಾಗಿಯೇ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾರೆ. ಒಕ್ಕೂಟ ಸರ್ಕಾರವು ದ್ರಾವಿಡ ರಾಜ್ಯಗಳನ್ನು ಅನುದಾನಕ್ಕಾಗಿ ಸತಾಯಿಸುತ್ತಲೇ ಬಂದಿದೆ. ನಮ್ಮದೇ ಜಿ ಎಸ್ಟಿ ಪಾಲಿನ ಹಣವನ್ನು ನೀಡಲು ಒಕ್ಕೂಟ ಸರ್ಕಾರ ಸಿದ್ದವಿಲ್ಲ. ಇವೆಲ್ಲಾ ಮನಸ್ಥಿತಿಯು ಒಕ್ಕೂಟ ಸರ್ಕಾರಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯರ ಬಗೆಗಿರುವ ಧೋರಣೆಯನ್ನು ತೋರಿಸುತ್ತದೆ. ಹಿಂದಿಯ ವ್ಯವಸ್ಥಿತ ಹೇರಿಕೆಯಿಂದಾಗಿ ಒಕ್ಕೂಟ ಸರ್ಕಾರದಲ್ಲಿ ಸೃಷ್ಟಿಯಾಗುವ ಲಕ್ಷಾಂತರ ಉದ್ಯೋಗಗಳಲ್ಲಿ ಕನ್ನಡಿಗರ ಪಾಲೇ ಇಲ್ಲವಾಗಿದೆ. ಈ ಉದ್ಯೋಗಗಳ ಪೈಕಿ ಬಹುತೇಕ ಪರೀಕ್ಷೆಗಳು ಇರುವುದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ. ಯುಪಿಎಸ್‌ಸಿ ಮೊದಲನೇ ಹಂತದ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತವೆ. ಬ್ಯಾಂಕಿಂಗ್ ಮತ್ತು ರೈಲ್ವೇ ಉದ್ಯೋಗಗಳ ಪರೀಕ್ಷೆಯಲ್ಲಿ ಪ್ರಾದೇಶಿಕ ರಾಜ್ಯ ಭಾಷೆಯೂ ಇರಬೇಕು ಎಂಬ ಹೋರಾಟಕ್ಕೆ ಮಣಿಯುವ ಒಕ್ಕೂಟ ಸರ್ಕಾರವು ಈವರೆಗೂ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಭಾಷೆ ಎಂದರೆ ಬರಿಯ ಶೋಕಿಯಲ್ಲ. ನುಡಿ ಎಂಬುದು ಬದುಕು. ನನಗೆ ಬೇಕಾದ ಭಾಷೆಯನ್ನು ನಾನು ಮಾತನಾಡುತ್ತೇನೆ ಎಂಬ ದಾಷ್ಟ್ಯವನ್ನು ಮನೆಯೊಳಗಷ್ಟೇ ಸೀಮಿತ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ ಅನ್ನದ ಭಾಷೆ. ಇಲ್ಲಿನ ರೈತರು, ಕೂಲಿಕಾರ್ಮಿಕರಿಂದ ಹಿಡಿದು ಎಲ್ಲರೂ ಕನ್ನಡ ಭಾಷಿಕರೇ ಆಗಿದ್ದಾರೆ. ಒಕ್ಕೂಟ ಸರ್ಕಾರವು ಹಿಂದಿಯಲ್ಲಿ ಬ್ಯಾಂಕ್, ರೈಲ್ವೇ ಪರೀಕ್ಷೆ ನಡೆಸುವುದರಿಂದ ಕರ್ನಾಟಕದ ಬ್ಯಾಂಕುಗಳಲ್ಲಿ ಹಿಂದಿ ನೌಕರರು ತುಂಬಿ ಹೋಗಿದ್ದಾರೆ. ಈ ಹಿಂದಿ ನೌಕರರ ಜೊತೆಗೆ ಕರ್ನಾಟಕದ ಜನ ವ್ಯವಹಿಸುವುದಾದರೂ ಹೇಗೆ ? ಬೆರಳೆಣಿಕೆಯ ಸಿಬ್ಬಂದಿಗಾಗಿ ಕರ್ನಾಟಕದ ಜನರು ಹಿಂದಿ ಕಲಿಯಬೇಕೇ ? ಅಗತ್ಯವಿಲ್ಲದ ಭಾಷಾ ಹೇರಿಕೆಯ ಬಗ್ಗೆ ಇಷ್ಟು ಸರಳವಾದ ವಿಷಯ ಒಕ್ಕೂಟ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ. ಒಕ್ಕೂಟ ಸರ್ಕಾರವು ಒಂದು ಹುನ್ನಾರದ ಭಾಗವಾಗಿ ಈ ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಹಿಂದಿ ನಾಮ ಫಲಕ ತೆರವು,ರೈಲ್ವೇ, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದಿ ಪ್ರಚಾರ ಸಭಾಗಳು ಸೇರಿದಂತೆ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧ, ಬ್ಯಾಂಕ್/ ರೈಲ್ವೇ ಉದ್ಯೋಗಗಳಲ್ಲಿ ಕನ್ನಡದಲ್ಲೇ ಪರೀಕ್ಷೆ, ಕನ್ನಡಿಗರಿಗೇ ಉದ್ಯೋಗ ಸೇರಿದಂತೆ ಹಲವು ಚಳವಳಿಗಳನ್ನು ನಡೆಸಿರುವ ನಾವುಗಳು ಇದಕ್ಕಾಗಿ ಲಾಠಿ ಏಟು, ಜೈಲುವಾಸವನ್ನು ಅನುಭವಿಸಿದ್ದೇವೆ. ಒಕ್ಕೂಟ ಸರ್ಕಾರವು ಮತ್ತು ಅದರ ಬಾಲಂಗೋಚಿಯಂತೆ ವರ್ತಿಸುವ ರಾಜ್ಯ ಸರ್ಕಾರವು ಏನೇ ಮಾಡಿದರೂ ನಮ್ಮ ಹಿಂದಿ ಹೇರಿಕೆ ವಿರೋಧಿ ಚಳುವಳಿಯನ್ನು ತಡೆಯಲು ಸಾಧ್ಯವಿಲ್ಲ. ಕನ್ನಡಿಗರೆಲ್ಲಾ ಸೇರಿಕೊಂಡು ಸೆಪ್ಟೆಂಬರ್ 14 ರಂದು ಕರಾಳ ದಿನ ಎಂದು ಆಚರಿಸಲಿದ್ದಾರೆ ಎಂದು ಹಿಂದಿ ಹೇರಿಕೆ ವಿರುದ್ಧ ಸಮರ ತಂಡದ ಹೋರಾಟಗಾರ ಹಾಗೂ ಕನ್ನಡ ರಣಧೀರರ ಪಡೆ ರಾಜ್ಯಾಧ್ಯಕ್ಷ ಚೇತನ್ ಗೌಡ ಹೇಳಿದ್ದಾರೆ.
ವರದಿ – ಮಹೇಶ ಶರ್ಮಾ