ಭದ್ರಾ ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ಸೇರುವ ಹರಿಹರ ತಾಲ್ಲೂಕು ಹಲವು ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಪ್ರವಾಸ ಕೈಗೊಳ್ಳಲಾಯಿತು.
ಮೇಲ್ಕಂಡ ವ್ಯಾಪ್ತಿಯ ರೈತರು ತಮ್ಮ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕಾಣದೇ ತೊಂದರೆ ಎದುರಿಸುತ್ತಿರುವುದನ್ನು ಕಚೇರಿಯ ಅವಧಿಯಲ್ಲಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ರೈತರೊಂದಿಗೆ ಸಮಸ್ಯೆಗಳಿರುವ ಸ್ಥಳಕ್ಕೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಗದ್ದೆ ಹಾಗೂ ತೋಟದಲ್ಲಿರುವ ನೀರಿನ ತೇವಾಂಶವನ್ನು ಹಿರಿಕೊಂಡು ಅದರಿಂದ ಬರುವ ಬಸಿ ನೀರನ್ನು ಮರಳಿ ರೈತರು ಬೆಳೆಗಳಿಗೆ ಉಪಯೋಗಿಸಲು ನಿರ್ಮಿಸಿರುವ ನಾಲೆ ಪಿಕಪ್, ರಸ್ತೆಗಳು ದುರಸ್ಥಿ ಗೊಂಡಿರುವುದನ್ನು ಪರಿಶೀಲನೆ ನಡೆಸಲಾಯಿತು. ಅಭಿವೃದ್ದಿ ಕೆಲಸಗಳಿಗೆ ಹೊಸ ಅನುದಾನದ ಕೊರತೆ ಹಾಗೂ ಪ್ರಸ್ತುತ ಇರುವ ದುರಸ್ಥಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ವಹಣಾ ವೆಚ್ಚ ಬಿಡುಗಡೆಯಾಗದಿರುವುದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲು ತೊಂದರೆಯಾಗಿದೆ ಎಂದು ಅವಲತ್ತುಕೊಂಡ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಅನುದಾನದ ಆಧಾರದ ಮೇಲೆ ಸಮಸ್ಯೆ ಪರಿಹರಿಸುತ್ತೆವೆ ಎಂದು ಹೇಳಿದರು. ಮಲೆಬೆನ್ನೂರು ಹೋಬಳಿಯ ಹೊಳೆಸಿರಿಗೆರೆ, ಕಡನಾಯಕನಹಳ್ಳಿ, ಕೊಕ್ಕನೂರು, ಯಲವಟ್ಟಿ ಅಚ್ಚುಕಟ್ಟು ರಸ್ತೆ, ಚಾನೆಲ್ ಏರಿ ರಸ್ತೆ, ಸೋಪಾನಕಟ್ಟೆ ನಿರ್ಮಾಣ ಮತ್ತು ಜಂಗಲ್ ಹಾಗೂ ಹೂಳು ತೆಗೆಯುವ ಕಾಮಗಾರಿಯನ್ನು ನರೇಗಾ ಯೋಜನೆ ಬಳಸಿಕೊಂಡು ಪರಿಹರಿಸಲು ಅವಕಾಶವಿದ್ದು ಇದನ್ನು ಕಾರ್ಯರೂಪಕ್ಕೆ ತರುವಂತೆ ಈ ಮೂಲಕ ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ರೈತರ ಸಮಸ್ಯೆಗಳು ಪರಿಹರಿಸುವಂತೆ ಸೂಚನೆ ನೀಡಲಾಯಿತು. ನಂತರ ಮಲೆಬೆನ್ನೂರಿನ ಸುಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ನಿಕಟ ಪೂರ್ವ ಮುಖ್ಯಮಂತ್ರಿಗಳು ರಾಜ್ಯ ಕಾರ್ಯಕಾರಿಣಿ ಸಭೆಯ ನಿಮಿತ್ತ ದಾವಣಗೆರೆ ಜಿಲ್ಲೆಗೆ ಪ್ರವಾಸ ಕೈಗೊಂಡ ಮಾರ್ಗ ಮಧ್ಯೆ ಭೇಟಿ ನೀಡುವ ವಿಚಾರ ತಿಳಿದು ಅವರೊಂದಿಗೆ ಭೇಟಿ ನೀಡಿ ದರ್ಶನ ಪಡೆಯಲಾಯಿತು. ಈ ಸಂದರ್ಭದಲ್ಲಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಂತೋಷ್ ಅವರು, ಭದ್ರಾ ಕಾಡಾ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರ ಅವರು, ರೈತರಾದ ರುದ್ರಪ್ಪ ಹಾಗೂ ಪಾಲಕ್ಷಪ್ಪ ಅವರು ಉಪಸ್ಥಿತರಿದ್ದರು.
ವರದಿ –ಮಹೇಶ ಶರ್ಮಾ