ವಿಕಾಸಸೌಧದಲ್ಲಿ, ಅಧಿಕಾರಿಗಳೊಂದಿಗೆ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ವೇಗ ಹೆಚ್ಚಿಸಿ, ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇವಾಲಯದ ಸಿಬ್ಬಂದಿ ಆರೋಗ್ಯ ಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣೆ ಒದಗಿಸಲು ಆರೋಗ್ಯ ವಿಮೆ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದು, ಈ ಕುರಿತು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದೇವಾಲಯದ ನೌಕರರನ್ನು 6 ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದರಿಂದ ಮುಜರಾಯಿ ಇಲಾಖೆಯ ಸುಮಾರು 1034 ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ದೇವಸ್ಥಾನಗಳ ಆಸ್ತಿ, ಮಾರ್ಗ ನಕ್ಷೆ, ಅಲ್ಲಿನ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಆನ್ ಲೈನ್ ಮೂಲಕ ತಿಳಿದುಕೊಳ್ಳುವಂತೆ ಐಟಿಎಂಎಸ್ ( ಇಂಟಿಗ್ರೆಟೆಡ್ ಟೆಂಪಲ್ ಮ್ಯಾನೇಜ್ ಮೆಂಟ್ ಸಿಸ್ಟಮ್) ಜಾರಿಗೆ ಕ್ರಮ ವಹಿಸಲಾಗವುದು. ತಸ್ತಿಕ್ ಅನುದಾನವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದ್ದು , ಆನ್ ಲೈನ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ತುಷಾರ್ ಗಿರಿನಾಥ್, ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ – ಮಹೇಶ ಶರ್ಮಾ