ಕರೋನಾ ನಿರುದ್ಯೋಗವನ್ನು ನಿವಾರಿಸಲು ಸರ್ವಜ್ಞ ನಗರದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆ ನಗರದ ಯುವಕರಿಗೆ ತರಬೇತಿಯ ಜೊತೆಯಲ್ಲಿ ಉದ್ಯೋಗ ದೊರಕಿಸುವ ವ್ಯವಸ್ಥೆ..
-ಮಾನ್ಯ ಕೌಶಲ್ಯಾಭಿವೃದ್ದಿ ಸಚಿವರಾದ ಡಾ ಅಶ್ವಥ್ ನಾರಾಯಣ ಅವರಿಂದ ಸೆಪ್ಟೆಂಬರ್ 30 ರಂದು ಈ ಕೌಶಲ್ಯಾಭಿವೃದ್ದಿ ಕೇಂದ್ರ ಉದ್ಘಾಟನೆ -ಮಾಜಿ ಸಚಿವ ಕೆ.ಜೆ ಜಾರ್ಜ ಅವರ ಆಲೋಚನೆ – ಮೊದಲ ಹಂತದಲ್ಲಿ 90 ಯುವಕರಿಗೆ ತರಬೇತಿ -ಸಿಎಸ್‌ಆರ್ ಫಂಡ್ ಮೂಲಕ ಸರ್ವಜ್ಞನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸರಕಾರಿ ಶಾಲೆಗಳ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆ -ಅಂಗನವಾಡಿ ಕೇಂದ್ರ ಹಾಗೂ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಗುಣಮಟ್ಟದಲ್ಲಿ ಪರಿವರ್ತನೆ – 18 ಸರಕಾರಿ ಶಾಲೆಗಳು – 38 ಅಂಗನವಾಡಿಗಳು ಫುಲ್ ಹೈಟೆಕ್ ಬೆಂಗಳೂರು ಸೆಪ್ಟೆಂಬರ್ 26: ಕರೋನಾ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ಎಲ್ಲಾ ಕ್ಷೇತ್ರಗಳು ನಲುಗಿ ಹೋಗಿವೆ. ಅದರಲ್ಲೂ ಹಲವಾರು ಕ್ಷೇತ್ರಗಳಲ್ಲಿ ಸಂಸ್ಥೆಗಳು ಬಾಗಿಲು ಮುಚ್ಚಿದ್ದು, ಸಾವಿರಾರು ಜನರು ಉದ್ಯೋಗವಂಚಿತರಾಗಿದ್ದಾರೆ. ಈ ಉದ್ಯೋಗವಂಚಿತರಿಗೆ ತಮ್ಮ ಸ್ವಂತ ಉದ್ಯೋಗ ಪ್ರಾರಂಭಿಸಲು ಹೆಚ್ಚಿನ ಕೌಶಲ್ಯದ ಅಗತ್ಯವನ್ನು ಮನಗೊಂಡಿರುವ ಮಾಜಿ ಸಚಿವರಾದ ಕೆ.ಜೆ ಜಾರ್ಜ್ ಅವರು ತಮ್ಮ ಕ್ಷೇತ್ರ ಸರ್ವಜ್ಞನಗರದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಸ್ಥಾಪಿಸಿದ್ದು, ಸಾವಿರಾರು ಜನ ಯುವಕರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಯುವಕರು ಹಾಗೂ ನಮ್ಮ ನಗರದ ಕಾರ್ಮಿಕ ವರ್ಗದವರಿಗೆ ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವುದರಿಂದ ಅವರ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಅಲ್ಲದೆ, ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅನುಕೂಲವಾಗುತ್ತವೆ. ಕರೋನಾ ನಂತರದ ಬದಲಾವಣೆಗಳಲ್ಲಿ ಹಲವಾರು ಜನರು ಪ್ರಾಥಮಿಕವಾಗಿ ತಮ್ಮ ಜೀವನಕ್ಕೆ ಅವಲಂಬಿತರಾಗಿದ್ದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ, ಹೊಸ ಉದ್ಯೋಗಕ್ಕೆ ಅವರಿಗಿದ್ದ ಕೌಶಲ್ಯಗಳಲ್ಲಿ ಕೊರತೆ ಉಂಟಾಗುವುದನ್ನು ನಾವು ಗಮನಿಸಿದೆವು. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಿ ಅದರಲ್ಲಿ ಸಫಲರಾಗಿದ್ದೇವೆ ಎಂದು ಮಾಜಿ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಜೀವನಹಳ್ಳಿಯಲ್ಲಿ ಮತ್ತೊಂದು ಕೌಶಲ್ಯಾಭಿದ್ದಿ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಕೌಶಲ್ಯಾಭಿವೃದ್ದಿ ತರಬೇತಿ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಡಾನ್ ಬಾಸ್ಕೋ ಟೆಕ್ ಸೋಸೈಟಿ ಸಂಯುಕ್ತಾಶ್ರಯದಲ್ಲಿ, ಈ ಕೌಶಲ್ಯಾಭಿವೃದ್ದಿ ಕೇಂದ್ರದಲ್ಲಿ ರೆಫ್ರೆಜರೇಶನ್ ಮತ್ತು ಏರ್ ಕಂಡೀಷನರ್ ತಾಂತ್ರಿಕ ತರಬೇತಿ, ಎಲೆಕ್ಟ್ರಕಿಕ್ ಟೆಕ್ನೀಶಿಯನ್ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿಯ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದೇವೆ. ತರಬೇತಿಯ ನಂತರ ಅವರಿಗೆ ಉದ್ಯೋಗಾವಕಾಶ ದೊರಕಿಸಿಕೊಡುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ ಎಂದು ಕೆ.ಜೆ. ಜಾರ್ಜ್ ಹೇಳಿದರು. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 18 ಸರಕಾರಿ ಶಾಲೆಗಳು ಹಾಗೂ 38 ಅಂಗನವಾಡಿ ಕೇಂದ್ರಗಳನ್ನು ತಮ್ಮ ಸಿಎಸ್‌ಆರ್ ನಿಧಿಯಿಂದ ಫುಲ್ ಹೈಟೆಕ್ ಮಾಡಿದ್ದಾರೆ. ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ಅಳವಡಿಸಿದ್ದು, ಆಂಡ್ರಾಯ್ಡಿ ಟಿವಿಗಳು, ಇಂಟರ್‌ನೆಟ್ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಇಲ್ಲಿ ಅಳವಡಿಸಲಾಗಿದೆ. ಅಂಗನವಾಡಿಗಳ ಚಿತ್ರಣವೇ ಬದಲು: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 38 ಅಂಗನವಾಡಿ ಕೇಂದ್ರಗಳು ಯಾವುದೇ ಖಾಸಗಿ ಪ್ಲೇಹೋಂಗಳಿಗೂ ಕಮ್ಮಿಯಿಲ್ಲದಂತೆ ರೂಪಿಸಲಾಗಿದೆ. ಅತ್ಯಾಧುನಿಕ ಆಟದ ಸಾಮಗ್ರಿಗಳು, ಪಾಠ ಕಲಿಕೆಯ ವಸ್ತುಗಳನ್ನು ಇಲ್ಲಿ ಕಾಣಬಹುದಾಗಿದೆ. ಮೊದಲ ಬ್ಯಾಚ್ ನ 90 ಜನ ವಿದ್ಯಾರ್ಥಿಗಳಿಂದ ಈಗಾಗಲೇ ಈ ಕೇಂದ್ರ ತನ್ನ ಕಾರ್ಯವನ್ನು ಪ್ರಾರಂಭಿಸಿದೆ. ಮಾನ್ಯ ಕೌಶಲ್ಯಾಭಿವೃದ್ದಿ ಸಚಿವರಾದ ಡಾ ಅಶ್ವಥ್ ನಾರಾಯಣ ಅವರಿಂದ ಸೆಪ್ಟೆಂಬರ್ 30 ರಂದು ಈ ಕೌಶಲ್ಯಾಭಿವೃದ್ದಿ ಕೇಂದ್ರ ಉದ್ಘಾಟನೆಯಾಗಲಿದೆ..
ವರದಿ – ಮಹೇಶ ಶರ್ಮಾ