ಗವಿಸಿದ್ಧ ಬಳ್ಳಾರಿ ಕಾವ್ಯದ ಅಧ್ಯಯನ ದೊಡ್ಡ ನೆಲೆಯಲ್ಲಿ ವಿಸ್ತಾರವಾಗಬೇಕಿದೆ : ಎಂ.ಎನ್. ನಂದೀಶ….

Spread the love

ಗವಿಸಿದ್ಧ ಬಳ್ಳಾರಿ ಕಾವ್ಯದ ಅಧ್ಯಯನ ದೊಡ್ಡ ನೆಲೆಯಲ್ಲಿ ವಿಸ್ತಾರವಾಗಬೇಕಿದೆ : ಎಂ.ಎನ್. ನಂದೀಶ….

ಕೊಪ್ಪಳ, ೨೯ : ಕವಿಯಾದವನಿಗೆ ಸಾಂಸ್ಕೃತಿಕ ಪ್ರಜ್ಞೆ ಅವಶ್ಯಕವಾಗಿದೆ. ಸಾಮಾಜಿಕ ಕಳಕಳಿ, ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಧ್ವನಿಯಾಗಿ ಕವಿ ವರ್ತಿಸಬೇಕು. ಕಲಾತ್ಮಕತೆ ಮಾತ್ರವೇ ಕಾವ್ಯದ ಶಕ್ತಿಯಲ್ಲ. ಗವಿಸಿದ್ಧ ಎನ್. ಬಳ್ಳಾರಿಯವರು ಸಶಕ್ತ ಕವಿಯಾಗಿದ್ದರೂ ಅವರ ಕಾವ್ಯ ರಾಜ್ಯಮಟ್ಟದಲ್ಲಿ ಅವರ ಕಾವ್ಯ ಚರ್ಚೆಯಾಗಲಿಲ್ಲವೇಕೆ ಎನ್ನುವುದು ವಿಷಾದನೀಯ. ಕವಿಯಾದವನಿಗೆ ಪ್ರಶಸ್ತಿಗಳು ಮಾನದಂಡವಲ್ಲ, ಕನ್ನಡ ಕಾವ್ಯ ಪರಂಪರೆಯಲ್ಲಿ ಇವರೊಬ್ಬ ಮಹತ್ವದ ಕವಿ. ಈ ಕವಿಯ ಹೆಸರಿನಲ್ಲಿ ಹಸ್ತಪ್ರತಿಗೆ ಕೊಡಮಾಡುವ ಕಾವ್ಯಪ್ರಶಸ್ತಿಗೆ ಸಂತೆಬೆನ್ನೂರು ಫೈಜ್ನಟ್ರಾಜ್ ಉತ್ತಮ ಆಯ್ಕೆ. ಕಾವ್ಯವನ್ನು ಬಹುವಾಗಿ ಪ್ರೀತಿಸುತ್ತಿದ್ದ ಕವಿಯ ನೆನಪಿನಲ್ಲಿ ಆಯೋಜಿಸುತ್ತಿರುವ ‘ಸಾಹಿತ್ಯೋತ್ಸವ’ ಉತ್ತಮ ಕಾರ್ಯಕ್ರಮವಾಗಿದ್ದು, ಸಾಹಿತ್ಯ ಮನಸ್ಸುಗಳ ಬೆಸೆಯುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಂ.ಎನ್. ನಂದೀಶ್ ಹಂಚೆ ಅವರು ಹೇಳಿದರು.

ಅವರು ಕೊಪ್ಪಳದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ, ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ – ೨೦೨೧’ ರ ಉದ್ಘಾಟಕರಾಗಿ ಆಗಮಿಸಿ ಈ ಮೇಲಿನಂತೆ ನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿಂತಕ ಪ್ರಮೋದ ತುರ್ವಿಹಾಳ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯದ ಕುರಿತು ಸಮಗ್ರವಾಗಿ ಮಾತನಾಡಿದರು. ಗವಿಸಿದ್ಧ ಬಳ್ಳಾರಿ ಈ ನೆಲದ ಶಕ್ತಿಯ ಧ್ಯೋತಕದಂತಿದ್ದರು. ಸಮಾಜಮುಖಿ ಬರವಣಿಗೆಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಇವರ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ ಎಂದು ಹೇಳಿದರು.

ತಳಮಳ ಪ್ರಕಾಶನದ ೬ ಕೃತಿಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾವ್ಯದ ಹಸ್ತಪ್ರತಿಗೆ ಕೊಡಮಾಡುವ ‘ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ – ೨೦೨೧’ ನ್ನು ಸಂತೆಬೆನ್ನೂರು ಫೈಜ್ ನಟ್ರಾಜ್‌ರಿಗೆ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದ ಐವರು ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು. ಕಿವಿ, ಮೂಗು ಮತ್ತು ಗಂಟಲು ತಜ್ಞರಾದ ಡಾ. ಮಲ್ಲಿಕಾರ್ಜುನ ಕೆ., ೮೦೦ ಆಕಳು ಸಲಹುತ್ತಿರುವ ರೈತ ಭರಮಪ್ಪ, ವಿಕಲಚೇತನ ಸಾಧಕಿ ರೇಣುಕಾ, ೬೮ ಸಲ ರಕ್ತದಾನ ಮಾಡಿರುವ ಲಕ್ಷ್ಮೀಕಾಂತ ಗುಡಿ, ಶಿಕ್ಷಕ ಹಾಗೂ ನಾಟಿ ವೈದ್ಯರಾದ ಶೈಲಾನಿ ಭಾಷಾರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವಿಭಾಗದಲ್ಲಿ ಮೊಹಮ್ಮದ್ ವಾಹಿದ್, ಅಡ್ವೆಂಚರ್ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮತ್ತು ಕೊರೊನಾ ಸಂದರ್ಭದ ಮನೆಯಲ್ಲಿನ ಸಮಯದಲ್ಲಿ ವೇಸ್ಟ್ ಮಟೀರಿಯಲ್ಸ್ ಗಳನ್ನು ಮೋಟರ್‌ಗೆ ಅಳವಡಿಸಿ ಬೈಕ್ ತಯಾರಿಸಿದ ಬಾಲ ವಿಜ್ಞಾನಿ ಕು. ಬಾಳೇಶ ಹಿರೇಮಠರಿಗೂ ಗೌರವ ಸನ್ಮಾನ ಮಾಡಲಾಯಿತು. ಆರಂಭದಲ್ಲಿ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ವಿಜೇತ ಸಂತೆಬೆನ್ನೂರು ಫೈಜ್ನಟ್ರಾಜ್ ಮತ್ತು ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಬಿ. ಪಾಟೀಲ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಬಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಎಚ್.ಎಸ್. ಪಾಟೀಲ, ವೀರಪ್ಪ ಬಳ್ಳಾರಿ, ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ. ಗೊಂಡಬಾಳ ಉಪಸ್ಥಿತರಿದ್ದರು. ಜಾನಪದ ಕಲಾವಿದರಾದ ಮಹೆಬೂಬ್ ಕಿಲ್ಲೇದಾರ್ ಮತ್ತು ಟಿ.ಆರ್. ಬೆಲ್ಲದ್, ಸಂಜನ್ ಬೆಲ್ಲದ ಗೀತಗಾಯನ ನೆರವೇರಿಸಿದರು. ಸಂಚಾಲಕ ಮಹೇಶ ಬಳ್ಳಾರಿ ಕಾರ್ಯಕ್ರಮ ನಿರ್ವಹಿಸಿದರು. ವೀರೇಶ ಕೊಪ್ಪಳ ಸ್ವಾಗತಿಸಿದರೆ, ಫಕೀರಪ್ಪ ಎಮ್ಮಿಯವರ್ ಕಾರ್ಯಕ್ರಮ ನಿರೂಪಿಸಿದರು. ಅಪಾರ ಸಾಹಿತ್ಯ ಬಳಗ ಸಾಹಿತ್ಯೋತ್ಸವಕ್ಕೆ ಸಾಕ್ಷಿಯಾಗಿತ್ತು.

ವರದಿ – ಎಸ್.ಎ.ಗಫರ್

Leave a Reply

Your email address will not be published. Required fields are marked *