ಹೃದಯದೊಂದಿಗೆ ಬಾಂಧವ್ಯ ಬೆಳೆಸೋಣ ಎಂಬ ಘೋಷ ವಾಕ್ಯದೊಂದಿಗೆ : ವಿಶ್ವ ಹೃದಯ ದಿನಾಚರಣೆ ಆಚರಣೆ.

Spread the love

ಹೃದಯದೊಂದಿಗೆ ಬಾಂಧವ್ಯ ಬೆಳೆಸೋಣ ಎಂಬ ಘೋಷ ವಾಕ್ಯದೊಂದಿಗೆ : ವಿಶ್ವ ಹೃದಯ ದಿನಾಚರಣೆ ಆಚರಣೆ.

ಬೀದರ :  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ, ಬೀದರ ಬೋಧಕ ಆಸ್ಪತ್ರೆ ಬೀದರ ಮತ್ತು ಗುದಗೆ ಆಸ್ಪತ್ರೆ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ವಿಶ್ವ ಹೃದಯ ದಿನವನ್ನು ಆಚರಿಸಲಾಯಿತು. ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ಎಲ್.ನಾಗೇಶ ಅವರು ಜ್ಯೋತಿ ಬೆಳಗಿಸುವುದರ ಮೂಲಕ ವಿಶ್ವ ಹೃದಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೃದಯ ಮಾನವನ ಬಹುಮೂಲ್ಯ ಅಂಗವಾಗಿದ್ದು, ಇಂದಿನ ಒತ್ತಡದ ಜೀವನ, ಹಾನಿಕಾರಕ ಆಹಾರ ಪದ್ಧತಿ, ಧೂಮಪಾನ, ಮಧ್ಯಪಾನದ ಕಾರಣದಿಂದಾಗಿ ಹೃದ್ರೋಗ ಹೆಚ್ಚಿನ ಪ್ರಮಾಣ ಆಗುತ್ತಿದೆ, ಇದನ್ನು ತಡೆಗಟ್ಟಲು ಹೃದಯ ದಿನಾಚರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೃದಯಕ್ಕೆ ಮಾರಕವಾಗುವಂತಹ ಅಂಶಗಳ ಕುರಿತು ಜನಜಾಗೃತಿಯ ಜೊತೆಗೆ ಉಪನ್ಯಾಸ ಕೊಡಿಸುವ ಕೆಲಸ ಇಂದಿನ ಬಹಳ ಅಗತ್ಯವಿದೆ. ಪ್ರತಿಯೊಬ್ಬರು ದೈಹಿಕ ಚಟುವಟಿಕೆಗಳನ್ನು ಮಾಡುವುದರ ಮೂಲಕ ಹೃದಯದ ಕಂಪನಕ್ಕೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಸಂಗಪ್ಪ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ 1999 ರಿಂದ ಇಲ್ಲಿಯವರೆಗೆ ವಿಶ್ವ ಹೃದಯ ದಿನವನ್ನು ಆಚರಣೆ ಮಾಡುವುದರ ಮೂಲಕ ಜನಜಾಗೃತಿ ಹಾಗೂ ತಂಬಾಕು ಉತ್ಪನ್ನಗಳ ಸೇವನೆ, ದೈಹೀಕ ಚಟುವಟಿಕೆ ಇಲ್ಲದಿರುವಿಕೆ, ಹಾನಿಕಾರಕ ಆಹಾರ ಪದ್ಧತಿಯಿಂದಾಗಿ ಹೃದ್ರೋಗಕ್ಕೆ ಒಳಪಟ್ಟು ಮರಣ ಹೊಂದುತ್ತಿರುವ 54.5 ಲಕ್ಷ ಮರಣಗಳಲ್ಲಿ 80% ಕಡಿಮೆ ಮಾಡುವ ಉದ್ದೇಶದೊಂದಿಗೆ ಈ ವರ್ಷದ ವಿಶ್ವ ಹೃದಯ ದಿನಾಚರಣೆಯನ್ನು ಹೃದಯದೊಂದಿಗೆ ಬಾಂಧವ್ಯ ಬೆಳೆಸೋಣ ಎನ್ನುವ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.  ಉಪನ್ಯಾಸಕರಾದ ಖ್ಯಾತ ಹೃದ್ರೋಗ ತಜ್ಞ ಡಾ|| ನಿತೀನ ಗುದಗೆ ಅವರು ಮಾತನಾಡುತ್ತಾ ಪ್ರಚಲಿತ ಹೃದಯ ರೋಗದ ಕಾರಣದಿಂದಾಗಿ ಬಹಳಷ್ಟು ಮರಣಗಳು ಸಂಭವಿಸುತ್ತಿದ್ದು. ಇದನ್ನು ತಡೆಯಲು ತಂಬಾಕು ಮತ್ತು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಬೇಕಾಗಿದೆ. ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು, ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮ ಮಾಡುವುದು, ಜಂಕ್ ಫುಡ್ ಹಾಗೂ ಪಾಕೇಟ್ ಫುಡ್ ಸೇವಿಸದಿರುವುದು ಹಾಗೂ ಕಾಲಕಾಲಕ್ಕೆ ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಮತ್ತು ರಕ್ತದೊತ್ತಡ ಕಾಯಿಲೆ ಇರುವವರು ಪರೀಕ್ಷೆ ಮಾಡಿಕೊಂಡು ಮುಂಜಾಗೃತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಹೃದಯ ಸ್ತಂಬನದ ಅಂಶಗಳನ್ನು ವಿವರಿಸುತ್ತಾ ಮಾಂಸಾಹಾರ ಕಡಿಮೆ ಮಾಡುವುದು, ಉಪ್ಪಿನಾಂಶ ಕಡಿಮೆ ಮಾಡುವುದು ಅಧಿಕ ಕೊಲೆಸ್ಟ್ರಾಲ್ ಆಹಾರ ಪದ್ಧತಿಗಳನ್ನು ಕೈಬಿಡುವುದು ಸೇರಿದಂತೆ ಹಲವು ಸೂಕ್ತ ಕ್ರಮಗಳ ಮೂಲಕ ಮುಂಜಾಗೃತಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಕೊಂಡು ಪ್ರತಿಯೊಬ್ಬರ ಹೃದಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಆಗಮಿಸಿದ ಡಾ|| ಚಂದ್ರಕಾಂತ ಗುದಗೆ ರವರು  ಹೃದಯದ ಸಂರಕ್ಷಣೆಗೆ ಕೈಕೊಳ್ಳಬೇಕಾದ ಕ್ರಮಗಳ ವ್ಯಾಪಕ ಪ್ರಚಾರ ಹಾಗೂ ತಮ್ಮ ಆಸ್ಪತ್ರೆಯಲ್ಲಿ ಯಾವುದೇ ಸರ್ಕಾರಿ ವೈದ್ಯರು ಹಾಗೂ ಖಾಸಗಿ ವೈದ್ಯರು ಇ.ಸಿ.ಜಿ ವರದಿಯನ್ನು ವ್ಯಾಟ್ಸ್ ಆ್ಯಪ್ ನಲ್ಲಿ ಕಳುಹಿಸಿದರೆ ತಕ್ಷಣ ಸ್ಪಂದಿಸಿ ಇದು ಹೃದಯ ರೋಗದ ಕಾಯಿಲೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಧ ಗಂಟೆಯೊಳಗಾಗಿ ಮಾಹಿತಿ ಹಾಗೂ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|| ವಿ.ಜಿ.ರೆಡ್ಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ ಅವರು ಇಂದು ಹೃದಯ ರೋಗ 25 – 30 ವರ್ಷದ ಯುವಕರನ್ನಲ್ಲದೇ ಮಕ್ಕಳಿಗೂ ಕೂಡ ಸಂಭವಿಸುತ್ತಿದೆ. ಹೃದಯದ ಆರೋಗ್ಯಕ್ಕಾಗಿ ಅಗತ್ಯ ಮುಂಜಾಗೃತಾ ಕ್ರಮ ಹಾಗೂ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಾಗಿದೆ, ಪ್ರತಿಯೊಬ್ಬರು ಒತ್ತಡವನ್ನು ನಿಯಂತ್ರಿಸಿ ಧೂಮಪಾನ ಹಾಗೂ ಮಧ್ಯಪಾನಕ್ಕೆ ಕಡಿವಾಣಹಾಕಿ,ಹಸಿರು ತರಕಾರಿ, ಒಣ ಬೀಜಗಳು ಹಾಗೂ ಕಡಿಮೆ ಕೊಲೆಸ್ಟ್ರಾಲ್ ನಂತಹ ತೈಲ, ಮಿತ ಆಹಾರ ಸೇವನೆಯ ಅಗತ್ಯೆತೆಯನ್ನು ಜನಸಾಮಾನ್ಯರಿಗೆ ತಿಳಿಸಬೇಕಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ  ಡಾ|| ಕ್ರಿಷ್ಣರೆಡ್ಡಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಡಾ|| ಮಹೇಶ ಬಿರಾದರ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳು, ಡಾ|| ಶಂಕರ ದೇಶಮುಖ, ಡಾ|| ಮಹೇಶ ತೊಂಡಾರೆ, ಡಾ|| ಸಚೀನ ಗುದಗೆ, ಡಾ|| ವಿರೇಶ, ಶ್ರೀ. ಪ್ರವೀಣಕುಮಾರ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.  ಜನಜಾಗೃತಿ ಜಾಥಾ :  ಈ ಕಾರ್ಯಕ್ರಮದ ನಂತರ ಬೀದರ ನಗರದ ನಾನಾಕಡೆ ಜಾಥಾ ಮೂಲಕ  ಹೃದಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವ ಕುರಿತು ಅರಿವು ಮೂಡಿಸುವ ಕಾರ್ಯ ಜರುಗಿತ್ತು. ಈ ನಿಟ್ಟಿನಲ್ಲಿ ಹಲವು‌ ಘೋಷ ವಾಕ್ಯಗಳೊಂದಿಗೆ ಮೈಕ್ ಮೂಲಕ ಜಾಗೃತಿ ಮೂಡಿಸಿ, ವಿಶ್ವ ಹೃದಯ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ವರದಿ : ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *