ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧಿ ಅವರ ಪರಿಚಯ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ — ಮೌಲಾನಾ ಸಿದ್ದೀಕ್ ಸಖಾಫಿ….
ಕೊಪ್ಪಳ:- ಅ.2.ಭವಿಷ್ಯದಲ್ಲಿ ಭಾರತವನ್ನು ಕಟ್ಟಬೇಕಾದ ಇಂದಿನ ವಿದ್ಯಾರ್ಥಿಗಳಿಗೆ ಅವರು ಸ್ಪರ್ಶಿಸುವ ಎಲ್ಲಾ ಮಜಲುಗಳಲ್ಲೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದು ಮಸ್ ದರ್ ಎಜ್ಯು ಅಂಡ್ ಚಾರಿಟಿ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಮೌಲಾನಾ ಸಿದ್ದೀಕ್ ಸಖಾಫಿ ಬಾಜಾರ ಹೇಳಿದರು. ನಗರದ ಸಿರಸಪ್ಪಯ್ಯನ ಮಠದ ಬಳಿಯ ಮಸ್ ದರ್ ಎಜ್ಯು ಅಂಡ್ ಚಾರಿಟಿ ಸಂಸ್ಥೆಯ ತಹ್ಫೀಝ್ ಕ್ಯಾಂಪಸ್ ನಲ್ಲಿ ಮಹಾತ್ಮ ಗಾಂಧಿ 153ನೇ ಜನ್ಮದಿನಾಚರಣೆಯ ಅಂಗವಾಗಿ ‘ ಗಾಂಧಿ ವಾಚನ ಭಾರತದ ಪುನಶ್ಚೇತನ ‘ ಎಂಬ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೌಲಾನಾ ಸಿದ್ದೀಕ್ ಸಖಾಫಿ ಬಾಜಾರ ಮುಂದುವರೆದು ಮಾತನಾಡಿ ಮಾದರಿ ಯೋಗ್ಯವಾದ ಚಳವಳಿಗಳ ಮೂಲಕ ನಾಡಿನ ಕಟ್ಟಕಡೆಯ ಪ್ರಜೆಗಳ ಬಗ್ಗೆಯೂ ಕಾಳಜಿ ಹೊಂದಿದ್ದ ಗಾಂಧೀಜಿಯವರು ಮಾತ್ರವೇ ಭಾರತದ ರಾಷ್ಟ್ರಪಿತರಾಗಲು ಅರ್ಹರು. ಆದ್ದರಿಂದ ಅವರನ್ನು ನೋಟುಗಳಿಗೆ ಅಥವಾ ಪೇಜುಗಳಿಗೆ ಮಾತ್ರ ಸೀಮಿತ ಗೊಳಿಸದೆ ಅವರ ಕನಸನ್ನು ನನಸು ಮಾಡುವಲ್ಲಿ ಸರ್ಕಾರಗಳು ಮುಂದೆ ಬರಬೇಕಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ ಮಹಾತ್ಮ ಗಾಂಧೀಜಿಯವರು ಜಾತ್ಯತೀತತೆ. ಸೌಹಾರ್ದತೆ ಹಾಗೂ ಶಾಂತಿಯ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಉನ್ನತ ವಿಚಾರಧಾರೆವುಳ್ಳ ಅವರು ಅಖಂಡ ಭಾರತವನ್ನು ಬಯಸಿದ್ದರು. ಆದರೀಗ ಕೊಲೆಗಡುಕರನ್ನು ಪೂಜಿಸುವ ಕೆಟ್ಟ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ ಎಸ್. ಎಸ್.) ಜಿಲ್ಲಾ ಕಾರ್ಯದರ್ಶಿ ನೌಫಲ್ ಮರ್ಝೂಖಿ ಸ್ವಾಗತಿಸಿದರು. ಮಸ್ ದರ್ ಎಜ್ಯು ಅಂಡ್ ಚಾರಿಟಿ ಸಂಸ್ಥೆಯ ನಿರ್ದೇಶಕರಾದ ಅಫ್ಸರ್ ಹುಸೇನ್ ಅತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಹಜರತ್ ಮುಸ್ತಫ ಮುಈನಿ, ಅಬೂಬಕ್ಕರ್ ಮಆಲಿ, ಸಾಬಿತ್ ರಬ್ಬಾನಿ, ಹಬೀಬ್ ಖಾನ್ (ಎಫ್ಎಫ್ಸಿ), ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್. ಎಸ್. ಎಫ್.) ನಗರ ಘಟಕದ ಉಪಾಧ್ಯಕ್ಷ ಗೌಸ್ ನೀಲಿ, ರಹೀಮ್ ಶೈಖ್, ಶಾರುಖ್ ಮುಂತಾದವರು ಉಪಸ್ಥಿತರಿದ್ದರು. ವರದಿ – ಎಸ್.ಎ.ಗಫೂರ ಕೊಪ್ಪಳ