ಗುರಿ ದೊಡ್ಡದಾಗಿರಬೇಕು, ಅದು ಒಳ್ಳೆಯದಾಗಿರಬೇಕು.
ಚಿಟಗುಪ್ಪಾ : ಮಕ್ಕಳ ಉಜ್ವಲ್ ಭವಿಷ್ಯ ನಿರ್ಮಾಣದಲ್ಲಿ ಪ್ರೌಢ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಅದು ಮುಂದೆ ದೇಶ ನಿರ್ಮಾಣದ ಮಹತ್ವ ಕಾರ್ಯದಲ್ಲಿ ನೆರವಾಗುತ್ತದೆ. ಶಿಕ್ಷಣವು ಅಜ್ಞಾನ ತೊಳೆದು ಸುಜ್ಞಾನ ಬಿತ್ತುವ ಕೆಲಸ ಅರ್ಥಪೂರ್ಣವಾಗಿ ಮಾಡುತ್ತದೆ ಎಂದು ಪ್ರಕಾಶ ದೇಶಮುಖ ಹೇಳಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ವಿಕಾಸ ಅಕಾಡೆಮಿ ಚಿಟಗುಪ್ಪಾ ರವರ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಶಿಕ್ಷಣವು ಮಕ್ಕಳನ್ನು ಒಳ್ಳೆಯ ಬುದ್ದಿವಂತ, ಶ್ರೇಷ್ಠ ಮಾನವರಾಗಿ, ದೇಶದ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮಾರ್ಗದರ್ಶನ ನೀಡುತ್ತದೆ. ಹಿಂದೆ ಗುರು,ಮುಂದೆ ಗುರಿ ಇದ್ದು.ಕಷ್ಟಪಟ್ಟು ಅಭ್ಯಾಸ ಮಾಡಿದರೆ,ಒಳ್ಳೆಯ ಸ್ಥಾನ ಪಡೆಯಬಹುದು. ಗುರಿ ದೊಡ್ಡದಾಗಿರಬೇಕು, ಅದು ಒಳ್ಳೆಯದಾಗಿರಬೇಕು. ಪ್ರಮಾಣಿಕತೆ,ಸೌಜನ್ಯ, ವಿನಯ,ವಿಶ್ವಾಸ,ತಾಳ್ಮೆ,ಕರುಣೆ, ಸಮಯ ಪಾಲನೆಗಳನ್ನು ಮಕ್ಕಳು ಅವರ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿಯಾಗಿ ಅಂದಿದ್ದನ್ನು ಸಾಧಿಸುತ್ತಾರೆ.ಶಿಕ್ಷಣ ಎನ್ನುವ ಅವಸ್ಥೆ ಮಾನವ ತನ್ನ ಜೀವನದಲ್ಲಿ ಕಂಡುಕೊಳ್ಳುವ ಅತ್ಯಂತ ಶ್ರೇಷ್ಠವಾದ ಕಾಲಮಾನ. ಇದು ಹೊಸ ವಿಚಾರಗಳು, ಮತ್ತು ಕಲ್ಪನೆಗಳನ್ನು ಹುಟ್ಟುಹಾಕಿ ಮನುಷ್ಯನನ್ನು ಆದರ್ಶಪ್ರಾಯನನ್ನಾಗಿ ರೂಪಿಸುತ್ತದೆ. ವಿಧ್ಯಾರ್ಥಿ ದೆಸೆಯಲ್ಲಿಯೇ ಮನುಷ್ಯ ನಡೆ ನುಡಿ, ಆಚಾರ ವಿಚಾರ, ಸಮಯದ ಸದುಪಯೋಗತೆ, ಸುಂದರ ವ್ಯಕ್ತಿತ್ವದ ಅನುಶಾಸನಗಳನ್ನು ರೂಪಿಸಿಕೊಳ್ಳುವ, ರೂಢಿಸಿಕೊಳ್ಳುವ ಮಾಗಿಕಾಲ. ಇದೆಲ್ಲದುರ ಅನುಚರಣೆಯಾಗಲು ಹಲವಾರು ಸಂದರ್ಭಗಳು ಕಾರಣಿಭೂತವಾಗುತ್ತವೆ. ಅದರಲ್ಲಿ ಮುಖ್ಯವಾದವು ವಿಧ್ಯಾರ್ಥಿ ಬೆಳೆದು ಬರುವ ವಾತಾವರಣ, ಜ್ಞಾನಾರ್ಜನೆ ಮಾಡಿಕೊಳ್ಳುವ ಶಿಕ್ಷಣ ಪ್ರೌಢಶಾಲೆಯ ಪರಿಸರವಾಗಿದೆ ಎಂದು ತಿಳಿಸಿದರು.
ವಿಕಾಸ ಅಕಾಡೆಮಿ ತಾಲೂಕು ಸಂಚಾಲಕರು, ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿ ಶಿಕ್ಷಕರು ತನ್ನಲ್ಲಿರುವ ಅಪಾರ ಜ್ಞಾನವನ್ನು ವಿಧ್ಯಾರ್ಥಿಗಳಿಗೆ ದಾರೆಯೆರೆಯುತ್ತಾರೆ. ಅದೇ ರೀತಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯನ್ನು ತಲುಪಿದಾಗ ಪೋಷಕರಿಗಿಂತ ಹೆಚ್ಚು ಸಂಭ್ರಮ ಪಡುವವರು ಶಿಕ್ಷಕರಾಗಿದ್ದಾರೆ.ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಸೇರಿಸಿಕೊಂಡು ನೈತಿಕತೆಯೊಂದಿಗೆ, ಶಿಸ್ತುಬದ್ಧ, ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಅದೇ ರೀತಿ ಶಿಕ್ಷಕರು ವಿದ್ಯಾರ್ಥಿಯನ್ನು ತಿದ್ದಿ, ಶಿಕ್ಷಣವನ್ನು ನೀಡಿ ಒಬ್ಬ ಉತ್ತಮ ವ್ಯಕ್ತಿಯಾಗಿ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಅನನ್ಯವಾಗಿದೆ. ವಿದ್ಯಾರ್ಥಿಗಳನ್ನು ಅಜ್ಞಾನದಿಂದ ವಿಜ್ಞಾನದೆಡೆಗೆ ಸಾಗಿಸುವವರಾಗಿದ್ದಾರೆ ಶಿಕ್ಷಕರು.ವಿದ್ಯಾರ್ಥಿಗಳಲ್ಲಿನ ಚಿಂತನಶೀಲತೆಯನ್ನು ಬೆಳೆಸಿ, ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಿಗೊಳಿಸುವಲ್ಲಿ ಶಿಕ್ಷಕರು ಮಹತ್ವ ಪೂರ್ಣ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಿದರು. ಶಿಕ್ಷಕ ಯೋಗೇಶ ಬಂಢಾರಿಯವರು ಮಾತನಾಡಿ ವಿದ್ಯಾರ್ಥಿಗಳು ತೀವ್ರ ಪ್ರಭಾವಕ್ಕೊಳಗಾಗುವುದು ಸಾಮಾನ್ಯವಾಗಿ ಒಬ್ಬ ಶಿಕ್ಷಕನಿಂದ. ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮಃ ತಸ್ಮೈಶ್ರೀ ಗುರುವೇ ನಮಃ ಎನ್ನುವ ಮಾತುಗಳು ಗುರುವನ್ನು ದೇವರ ಮಟ್ಟಕ್ಕೆ ನಿಲ್ಲಿಸಿವೆ.ನಿಜವಾಗಿ ಹೇಳುವುದಾದರೆ ಪ್ರಾಮಾಣಿಕತೆಯಿಂದ ಶಿಕ್ಷಕ ತನ್ನ ಹೊಣೆಯನ್ನರಿತು ಜವಾಬ್ದಾರಿ ನಿರ್ವಹಿಸಿದರೆ ದೇಶದ ಭವಿಷ್ಯವನ್ನೇ ನಿರ್ಮಿಸಿದಂತೆ.ಪ್ರತಿಯೊಂದು ವಸ್ತು, ವ್ಯಕ್ತಿಯ ಅಂತರಾಳದಲ್ಲಿ ಒಂದೊಂದು ರೀತಿಯ ಶಕ್ತಿ ಸಂಪತ್ತು ಹುದುಗಿರುತ್ತದೆ. ಆ ವೈವಿಧ್ಯತೆಯನ್ನು ವಿದ್ಯಾರ್ಥಿಗಳಿಂದ ಹೊರತರಲು ಪ್ರೌಢಶಾಲೆಯ ಹಂತದಲ್ಲಿ ನಡೆಯುವ ಶಿಕ್ಷಣ ಬಹಳ ಮಹತ್ವದಾಗಿದೆ. ಈ ಶಿಕ್ಷಣದ ಜೊತೆ ಪಟ್ಯೆತರ ಚಟುವಟಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಮುಖ್ಯವಾಗಿ ಸಾಮಾಜಿಕ ಚಟುವಟಿಕೆಗಳು ಇವು ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಿಂದ ಹೊರ ತರಲು ಸಹಕಾರಿಯಾಗುತ್ತದೆ. ದಾರ್ಶನಿಕರ ವಿಚಾರಗಳನ್ನು ಮಕ್ಕಳಿಗೆ ಹೇಳಬೇಕು.ಮಕ್ಕಳು ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಲು ಪ್ರೇರೇಪಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಕನ್ಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರುಬಾಯಿ ಆರ್ ಪವರ್ ರವರು ಮಾತನಾಡಿ ಶಿಕ್ಷಣ ಉತ್ತಮ ಸ್ಪರ್ದಾಳುಗಳನ್ನು, ಆರೋಗ್ಯಕರ ಸಮಾಜದ ರೂವಾರಿಯಾಗಿ ರೂಪಿಸುತ್ತದೆ. ತರಬೇತಿ ಚಟುವಟಿಕೆಗಳು ವಿಧ್ಯಾರ್ಥಿಗಳಲ್ಲಿ ಕರ್ತವ್ಯದ ಅರಿವು ಪ್ರಜ್ಞೆ ಉಂಟುಮಾಡುತ್ತದೆ, ಜವಾಬ್ದಾರಿಯುತ ಮನೋಭಾವವನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ.ಶಿಕ್ಷಕರು ಹೇಳಿದ ಎಲ್ಲಾ ಪಾಠಗಳನ್ನು ವಿಧ್ಯಾರ್ಥಿಗಳು ಕೇಳಬೇಕು.ಕಷ್ಟಪಟ್ಟು ಓದಬೇಕು.ಓದಿ ಒಳ್ಳೆಯ ವಿಧ್ಯಾರ್ಥಿ ಎಂದು ಹೆಸರು ಪಡೆಯಬೇಕು. ಅದೇ ರೀತಿ ಮಕ್ಕಳನ್ನು ತಿದ್ದಿ ತೀಡಿ ಅವರ ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಶಿಕ್ಷಕರ ಸೇವೆ ದೊಡ್ಡದು ಎಂದು ಹೇಳಿದರು. ಸಂಜುಕುಮಾರ ಬೊಸ್ಲೆ ನಿರೂಪಿಸಿದರು.ಗುಂಡಪ್ಪಾ ಕೋಟೆ ವಂದಿಸಿದರು. ಕಾರ್ಯಕ್ರಮದಲ್ಲಿ ಅರವಿಂದ್ ಕುಕಲ್ಡಾಲ್, ರಾಜಕುಮಾರ ಬೆಲೂರೆ,ಮಲ್ಲಿಕಾರ್ಜುನ ತೀರಲಾಪೂರ್, ರೇವಣ್ಣಪ್ಪಾ ಸಜ್ಜನ್,ಶಾಭಾಜ್ ಫಾತಿಮಾ, ಸೈಧಾ ಆಫ್ರೀಮ್, ಸಾದಿಯಾ ಸುಲ್ತಾನ್, ಮಶ್ವಲೀನ್ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ.