ತಾವರಗೇರಾ ಪಟ್ಟಣದಲ್ಲಿಂದು ಪಿತಾಮಹ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು  ಸರಳವಾಗಿ ಆಚರಿಸಲಾಯಿತು..

Spread the love

ತಾವರಗೇರಾ ಪಟ್ಟಣದಲ್ಲಿಂದು ಪಿತಾಮಹ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು  ಸರಳವಾಗಿ ಆಚರಿಸಲಾಯಿತು..

ತಾವರಗೇರಾ ಪಟ್ಟಣದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಇಂದು ಪೂಜಾ ಕಾರ್ಯಕ್ರಮವು ಸರಳವಾಗಿ ಆಚರಿಸಲಾಯಿತು. ಕೀರು ಪರಿಚೆಯ :- ರಾಮಾಯಣವು ಆರಂಭವಾಗುವುದೇ ಒಬ್ಬ ಆದರ್ಶಪುರುಷನನ್ನು ದೃಷ್ಟಿಯಲ್ಲಿಟ್ಟುಕೊಂಡು: ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚವೀರ್ಯವಾನ್ ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ ಲೋಕದಲ್ಲಿ ಯಾವ ಪುರುಷನು ಗುಣವಂತನೂ ವೀರ್ಯವಂತನೂ ಧರ್ಮಜ್ಞನೂ ಕೃತಜ್ಞನೂ ಸತ್ಯವಾಕ್ಯನೂ ದೃಢವ್ರತನೂ ಆಗಿದ್ದಾನೆ? ಆದರ್ಶಗುಣಗಳ ಪಟ್ಟಿ ಇಲ್ಲಿಗೇ ಮುಗಿಯುವುದಲ್ಲ – ಚರಿತ್ರವಂತನೂ ಸತ್ಯವಾದಿಯೂ ದೃಢಸಂಕಲ್ಪನೂ ಸದಾಚಾರನಿಷ್ಠನೂ ಸರ್ವಭೂತಹಿತನೂ ವಿದ್ವಾಂಸನೂ ಸಮರ್ಥನೂ ಪ್ರಿಯದರ್ಶನನೂ ಆತ್ಮವಂತನೂ ಕೋಪವನ್ನು ಗೆದ್ದವನೂ ದ್ಯುತಿಮಂತನೂ ಅಸೂಯೆಪಡದವನೂ – ಇಂಥವನು ಈ ಲೋಕದಲ್ಲಿ ಯಾರಿದ್ದಾನೆ ಎಂಬ ಜಿಜ್ಞಾಸೆ, ‘ತಪಸ್ವಾಧ್ಯಾಯನಿರತ’ ವಾಲ್ಮೀಕಿಮುನಿಗೆ ಮೂಡಿತಂತೆ. ತಪೋನಿರತರಿಗಷ್ಟೇ ಮೂಡುವ ಪ್ರಶ್ನೆಗಳಿವು. ನಮಗೆ ಅನುಮಾನವೇ ಇರಲಾರದು – ಇಂಥವನೊಬ್ಬ ಮನುಷ್ಯ ಇರುವ ಸಾಧ್ಯತೆಯೇ ಇಲ್ಲವೆನ್ನುವ ಬಗ್ಗೆ. ಈ ಪ್ರಶ್ನೆಯನ್ನು ವಾಲ್ಮೀಕಿ ನಾರದರ ಮುಂದಿಟ್ಟಾಗ ನಾರದರ ಉತ್ತರವೂ ಹೀಗೇ ಮೊದಲುಗೊಳ್ಳುತ್ತದೆ – ‘ಬಹವೋ ದುರ್ಲಭಾಶ್ಚೈವ ಯೇ ತ್ವಯಾ ಕೀರ್ತಿತಾ ಗುಣಾಃ’. ಹೀಗೆ ಹೇಳುವ ನಾರದರು ‘ಆದರೂ ಅಂಥವನೊಬ್ಬನಿದ್ದಾನೆ, ಅವನ ವಿಷಯವನ್ನು ಹೇಳುತ್ತೇನೆ ಕೇಳು’ ಎಂದು ಇಕ್ಷ್ವಾಕುವಂಶಪ್ರಭುವಾದ ರಾಮನ ಕತೆಯನ್ನಾರಂಭಿಸುತ್ತಾನೆ – ಇದು ರಾಮಾಯಣದ ಭೂಮಿಕೆ ನಾರದನು ಕೊಡುವ ರಾಮಾದರ್ಶಗಳ ಪಟ್ಟಿಯೇನು ಕಡಿಮೆಯದಲ್ಲ. ವಾಲ್ಮೀಕಿಯ ಆದರ್ಶಪುರುಷನ ಗುಣಗಳು ಮೂರು ಶ್ಲೋಕದಲ್ಲಿ ಮುಗಿದರೆ, ರಾಮನ ಆದರ್ಶಗುಣಗಳು ಹದಿಮೂರು ಶ್ಲೋಕಗಳಲ್ಲಿ ಹರಿಯುತ್ತವೆ – ಈ ಇಕ್ಷ್ವಾಕುವಂಶಪ್ರಭು ನಿಯತಾತ್ಮ, ಮಹಾವೀರ್ಯ, ವಶೀ, ವಾಗ್ಮಿ, ಆಜಾನುಬಾಹು, ಸಮುದ್ರದಂತೆ ಗಂಭೀರ, ಹಿಮವಂತನಂತೆ ಧೈರ್ಯವಂತ, ವಿಷ್ಣುವಿನಷ್ಟು ವೀರ್ಯವಂತ, ಚಂದ್ರನಷ್ಟು ಪ್ರಿಯದರ್ಶನ, ಕಾಲಾಗ್ನಿಯಷ್ಟು ಕೋಪಶಾಲಿ, ಧರಿತ್ರಿಯಷ್ಟು ಕ್ಷಮಾಶೀಲ. ದೊರೆಯಾಗುವುದಕ್ಕೆ ಇದಕ್ಕಿಂತ ಉತ್ತಮ ಗುಣಗಳು ಬೇಕೇ? ಇಂಥಾ ರಾಮನನ್ನು ಕಂಡರೆ ದಶರಥನಿಗೆ ಎಲ್ಲಿಲ್ಲದ ಪ್ರೀತಿ. ವಯಸ್ಸಿಗೆ ಬಂದ ಮಗನಿಗೆ ಯೌವರಾಜ್ಯಾಭಿಷೇಕ ಮಾಡಲು ಅಪೇಕ್ಷಿಸಿದನು. ಮುಂದಿನ ಕತೆ ನಮಗೆಲ್ಲ ಗೊತ್ತೇ ಇದೆ.ನಾರದನಿಂದ ಈ ಕತೆಯನ್ನು ಕೇಳಿದ ವಾಲ್ಮೀಕಿ ಸ್ನಾನಾಹ್ನಿಕಗಳನ್ನು ತೀರಿಸಲೆಂದು ಶಿಷ್ಯರೊಂದಿಗೆ ತಮಸಾನದಿಯ ತೀರಕ್ಕೆ ಬರುತ್ತಾರೆ. ಆ ತಿಳಿನೀರ ಹೊಳೆಯನ್ನು ಕಂಡು ಕವಿ ಹೇಳುವ ಮಾತುಗಳನ್ನು ಕೇಳಿ ಅಕರ್ದಮಮಿದಂ ತೀರ್ಥಂ ಭಾರದ್ವಾಜ ನಿಶಾಮಯ ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ’ ಸಜ್ಜನರ ಮನಸ್ಸಿನಂತೆ ಪ್ರಸನ್ನರಮಣೀಯವಾಗಿರುವ ಈ ತಿಳಿನೀರನ್ನು ನೋಡು ಎಂದು ಶಿಷ್ಯನಾದ ಭಾರದ್ವಾಜನಿಗೆ ಹೇಳುತ್ತಾರೆ ವಾಲ್ಮೀಕಿ. ಸಜ್ಜನರ ಮನಸ್ಸನ್ನು ತಿಳಿನೀರಿಗೆ ಹೋಲಿಸುವುದು ವಾಡಿಕೆ – ಏಕೆಂದರೆ ತಿಳಿನೀರು ನಮಗೆ ಹೆಚ್ಚು ಪರಿಚಿತ; ಸಜ್ಜನರ ಮನಸ್ಸು ಈ ಹೋಲಿಕೆಯಿಂದ ತಿಳಿಯಬೇಕಾದ್ದು. ಆದರೆ ಕವಿಯ ದೃಷ್ಟಿಯಲ್ಲಿ ಸಜ್ಜನರ ಮನಸ್ಸು ತಿಳಿನೀರಿಗೇ ಉಪಮೇಯವಾದುದು. ಹೀಗೆ ಹೇಳಿ ಆ ತೀರ್ಥದಲ್ಲಿ ಮೀಯಬೇಕೆಂದು ಶಿಷ್ಯನಿಂದ ವಲ್ಕಲವನ್ನು ಪಡೆದ ಮುನಿ, ಪ್ರಸನ್ನವಾದ ಪ್ರಕೃತಿಸೌಂದರ್ಯವನ್ನು ಸವಿಯುತ್ತಾ ಅಲ್ಲೇ ಅಡ್ಡಾಡುತ್ತಿರಲಾಗಿ, ಅಲ್ಲೇ ಇಂಪಾಗಿ ಕೂಗುತ್ತಾ ಒಂದನ್ನೊಂದು ಬಿಡದೇ ಹಾರಾಡುತ್ತಿದ್ದ ಕ್ರೌಂಚಪಕ್ಷಿಗಳ ಜೋಡಿಯನ್ನು ನೋಡುತ್ತಾರೆ. ಎಲ್ಲವೂ ಇಷ್ಟು ಸುಂದರವಾಗಿ, ಪ್ರಸನ್ನವಾಗಿ ಇದ್ದುಬಿಟ್ಟಿದ್ದರೆ ರಾಮಾಯಣವೇ ಇರುತ್ತಿರಲಿಲ್ಲವೇನೋ. ವಾಲ್ಮೀಕಿಯ ಕಣ್ಣು ಆ ಪಕ್ಷಿಗಳ ಮೇಲೆ ಬೀಳುವುದಕ್ಕೂ ಅಲ್ಲೇ ಇನ್ನೊಂದು ಕಡೆಯಿಂದ, ದ್ವೇಷಬುದ್ಧಿಯ ಬೇಡನೊಬ್ಬನಿಂದ ಚಿಮ್ಮಿದ ಬಾಣ ಆ ಪಕ್ಷಿಮಿಥುನದಲ್ಲಿ ಗಂಡು ಹಕ್ಕಿಗೆ ನಾಟಿ, ಅದು ಚೀರುತ್ತಾ ಕೆಳಗುರುಳುವುದಕ್ಕೂ ಒಂದೇ ಆಗುತ್ತದೆ. ಅದು ಕೆಳಗೆ ಬಿದ್ದು ವಿಲಗುಟ್ಟುತ್ತಿರಲು, ತನ್ನ ಸಂಗಾತಿಯನ್ನು ಕಳೆದುಕೊಂಡ ಹೆಣ್ಣುಹಕ್ಕಿಯ ಆಕ್ರಂದನ, ಹೆಂಗರುಳಿನ ವಾಲ್ಮೀಕಿಯನ್ನು ಕರಗಿಸಿಬಿಡುತ್ತದೆ. ಅರಿವಿಲ್ಲದೇ ಆತನ ಬಾಯಿಂದ ಶಾಪವಾಕ್ಯವೊಂದು ಹೊಮ್ಮುತ್ತದೆ: ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾ ಯತ್ಕ್ರೌಂಚಮಿಥುನಾದೇಕಂ ಅವಧೀಃ ಕಾಮಮೋಹಿತಮ್’ಎಲೋ ಬೇಡನೇ, ಕಾಮಮೋಹಿತವಾದ ಈ ಜೋಡಿಯಲ್ಲೊಂದನ್ನು ಕೊಂದುಹಾಕಿದ ನೀನು ಬಹುಕಾಲ ಬದುಕಿರಬಾರದು..ಕೋಪದಿಂದ ಇಷ್ಟು ಒದರಿದ ಮೇಲೆ ಮಹರ್ಷಿಗೆ ಇದ್ದಕ್ಕಿದ್ದಂತೆ ಹೊಳೆಯುತ್ತದೆ – ಇದೇನು? ಕೋಪದಿಂದ ಹೊರಟ ಉದ್ಗಾರವೂ ಹೀಗೆ ಪಾದಬದ್ಧವಾಗಿ ಸಮಾಕ್ಷರಗಳಿಂದ ಕೂಡಿ, ವೀಣೆಯೊಡನೆ ಹಾಡಲು ಯೋಗ್ಯವಾದ ಶ್ಲೋಕವಾಯಿತಲ್ಲ. ಹೀಗೆ ಸೋಜಿಗಪಟ್ಟುಕೊಂಡೇ ಆಶ್ರಮಕ್ಕೆ ಹಿಂದಿರುಗಿದ ವಾಲ್ಮೀಕಿಗೆ ಬ್ರಹ್ಮದೇವನ ದರ್ಶನವಾಗುತ್ತದೆ. ಇನ್ನೂ ಆ ಪಕ್ಷಿವಿಯೋಗದ ಗುಂಗಿನಲ್ಲಿ, ಆ ಶೋಕವು ಶ್ಲೋಕವಾದ ಬೆರಗಿನಲ್ಲೇ ಇದ್ದ ಮುನಿಗೆ ಬ್ರಹ್ಮನು ರಾಮಾಯಣದ ರಚನೆಗೆ ಇದು ನಿಮಿತ್ತವಾಯಿತೆಂದು ಹೇಳಿ,ರಾಮಾಯಣವನ್ನು ರಚಿಸುವಂತೆ ಹೇಳಿ ಅಂತರ್ಧಾನನಾಗುತ್ತಾನೆ. ಹೀಗೆ ಹುಟ್ಟಿದ್ದು,‘ಸೀತಾಯಾಶ್ಚರಿತಂ ಮಹತ್’ ಕೂಡ ಆದ ರಾಮಾಯಣ. ಮನುಕುಲದ ಭಾಗ್ಯವೆನಿಸುವ ರಾಮಾಯಣವನ್ನು ಜಗತ್ತಿಗೆ ನೀಡಿದ ವಾಲ್ಮೀಕಿಮುನಿಗಳ ಜನ್ಮದಿನವಂತೆ ಇಂದು. ರಾಮಾಯಣದ ನಮ್ಮೆಲ್ಲರ ಹೃದಯವನ್ನು ಮೆದುಗೊಳಿಸಲಿ, ಸಂಸ್ಕರಿಸಲಿ, ಶ್ರೀಮಂತಗೊಳಿಸಲಿ. ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಚರಣಗಳಿಗೆ ಶತ ಕೋಟಿ ನಮನಗಳು. ಇಂದು ನಡೆದ ಈ ಪೂಜಾ ಕಾರ್ಯಕ್ರಮಗಳಲ್ಲಿ ಸಮಾಜದ ಹಿರಿಯ ಮುಖಂಡರುಗಳಾದ ರಾಘವೇಂದ್ರ, ಯಮನೂರಪ್ಪ ಬಿಳೆಗುಡ್ಡ,ದುರುಗಪ್ಪ ಸಿದ್ದಾಪೂರ, ವೆಂಕಟೇಶ ಗೋತಗಿ ಆನಂದ ಬಂಡಾರಿ, ಶರಣಪ್ಪ ಅಂಚಿ, ಶ್ಯಾಮೂರ್ತಿ ಅಂಚಿ, ಅಂಬರೇಶ ಅಂಚಿ, ಚಂದ್ರು.ಚಿ.ಎಮ್. ಹಾಗೂ ಪಟ್ಟಣ ಪಂಚಾಯತಿಯ ಅಧಿಕಾರಿಗಳಾದ ಶ್ಯಾಮೂರ್ತಿ ಹಳ್ಳದಮನಿ, ಪ್ರಾಣೇಸಿ ಬಳ್ಳಾರಿ, ಮರೇಶ ನಾಯಕ, ಕಂಧಾಯ ಇಲಾಖೆಯ ತಲಾಟಿಗಳಾದ ಸೂರ್ಯಕಾಂತ್ ರವರು ಜೊತೆಗೆ ವಾಲ್ಮೀಕಿ ಯುವಕ ವೃಂದ ಬಳಗವು ಈ ಕಾರ್ಯಕ್ರಮದಲ್ಲಿ ಪಾಲುಗೊಂಡು, ಸಮಾಜದ ಏಳಿಗೆಗಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು,. ನಾಡಿನ ಜನತೆಗೆ  ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ  ಹಬ್ಬದ ಶುಭಾಶಯಗಳು…

ವರದಿ – ಉಪ – ಸಂಪಾದಕೀಯ.

Leave a Reply

Your email address will not be published. Required fields are marked *