ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಉರ್ದು ಕವಿಗೋಷ್ಟಿ….
ಗುಡಿಬಂಡೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಹಾಗೂ ಉರ್ದು ಕವಿಗೋಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಕವಿ ಮೊಹಮದ್ ನಾಸೀರ್, ಇತ್ತೀಚಿನ ದಿನಗಳಲ್ಲಿ ನಮ್ಮ ಮಾತೃಭಾಷೆಯನ್ನು ಮರೆತು ಪಾಶ್ಚಾತ್ಯ ಭಾಷೆಗಳತ್ತ ಹೆಚ್ಚಿನ ಒಲವು ತೋರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉರ್ದು ಭಾಷೆಯನ್ನು ಕಲಿಯುವಂತಹ ವಿದ್ಯಾರ್ಥಿಗಳು ಕಡಿಮೆಯಾಗುತ್ತಿದ್ದಾರೆ. ಉರ್ದು ಭಾಷೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ವಿಶ್ವದ ಅನೇಕ ದೇಶಗಳಲ್ಲಿ ಉರ್ದು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅಂತೆಯೇ ನಮ್ಮ ದೇಶದಲ್ಲೂ ಸಹ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಉರ್ದು ಸಾಹಿತ್ಯ ಪರಿಷತ್ ನ ಜಿಲ್ಲಾ ಘಟಕಗಳು ಬಿಜಾಪುರ, ಗುಲ್ಬರ್ಗ ಮೊದಲಾದ ಕಡೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ, ತಾಲೂಕು ಘಟಕಗಳನ್ನು ಪ್ರಾರಂಭಿಸಲಾಗುತ್ತದೆ. ಪ್ರತಿ ತಿಂಗಳು ಕನ್ನಡ ಹಾಗೂ ಉರ್ದು ಕವಿಗೋಷ್ಟಿಗಳನ್ನು ಆಯೋಜನೆ ಮಾಡಲಾಗುವುದು ಎಂದರು. ನಂತರ ಮಾತನಾಡಿದ ಪತ್ರಕರ್ತ ಹಾಗೂ ಕವಿ ರಾಜಶೇಖರ್, ಕನ್ನಡಪರ ಸಂಘಟನೆಗಳು, ವಿವಿಧ ಭಾಷೆಗಳ ಸಾಹಿತ್ಯ ಪರಿಷತ್‌ಗಳು ಕವಿಗೋಷ್ಟಿ ಸೇರಿದಂತೆ ಭಾಷೆ ಉಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ನಮ್ಮ ಭಾಷೆಯ ಉಳಿವು ಸಾಧ್ಯವಾಗುತ್ತದೆ. ಕನ್ನಡ ಹಾಗೂ ಉರ್ದು ಭಾಷೆಗಳು ಸಹೋದರ ಭಾಷೆಗಳಿದ್ದಂತೆ. ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು. ಉರ್ದು ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೇ, ವಿವಿಧ ರೀತಿಯ ಸಾಮಾಜಿಕ ಕಾರ್ಯಗಳನ್ನು ಭಾಗಿಯಾಗುತ್ತಿರುವುದು ಅಭಿನಂದನಾರ್ಹ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಲಕ್ಷ್ಮೀನಾರಾಯಣ, ಗುಂಪು ಮರದ ಆನಂದದ್, ಟಿಪ್ಪು ಸುಲ್ತಾನ್ ಟ್ರಸ್ಟ್‌ನ ಶಾಬುಲ್ ರವರು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕವನ, ಕವಿತೆ, ಹಾಡುಗಳನ್ನು ಹಾಡಿದರು. ಈ ವೇಳೆ ಕನ್ನಡಸೇನೆಯ ತಾಲೂಕು ಅಧ್ಯಕ್ಷ ಅಂಬರೀಶ್, ಉರ್ದು ಸಾಹಿತ್ಯ ಪರಿಷತ್‌ನ ಶಬ್ಬೀರ್ ಅಹಮದ್, ಜಬೀವುಲ್ಲಾ ಸೇರಿದಂತೆ ಹಲವರು ಇದ್ದರು. ವರದಿ – ನಾಸೀರ್ ಗುಡಿಬಂಡೆ.