ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸತ್ಯವನ್ನು ಅರಿತು ಕಾನೂನನ್ನು ಗೌರವಿಸಿ ಮುನ್ನಡೆಯಬೇಕು..
ಮಾನವರಾದ ನಾವುಗಳು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ನಡುವಿನಲ್ಲಿಯೇ ಜೀವನ ನಡೆಸುವುದರಿಂದ ಕಡ್ಡಾಯವಾಗಿ ಕಾನೂನಿನ ಬಗ್ಗೆ ಅರಿವನ್ನು ಮೂಡಿಸಿಕೊಂಡು ವ್ಯಾಜ್ಯಗಳಿಂದ ಮುಕ್ತವಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸತ್ಯವನ್ನು ಅರಿತು ಕಾನೂನನ್ನು ಗೌರವಿಸಿ ಮುನ್ನಡೆಯಬೇಕು ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಸಮೀರ್ ಪಿ . ನಂದ್ಯಾಲ್ ಕರೆ ನೀಡಿದರು . ಅವರು ಇಂದು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಎಪಿಎಂಸಿ, ಪುರಸಭೆ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸುವರ್ಣ ಸ್ವಾತಂತ್ರ್ಯ ಮಹೋತ್ಸವದ ಸವಿನೆನಪಿಗಾಗಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ಯಾನ್ ಇಂಡಿಯಾ ಜಾಗೃತಿ ಹಾಗೂ ಕಾನೂನು ಅರಿವು ನೆರವು ಕುರಿತ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರಾಗಿರುವುದರಿಂದ ಬಡವರು ಶ್ರೀಮಂತರು ಸೇರಿದಂತೆ ತುಳಿತಕ್ಕೊಳಗಾದವರು ಹಾಗೂ ಶೋಷಿತ ವರ್ಗಗಳ ಜನರು ಬಡವರು ಯಾವುದೆಏ ಬೇಧ-ಭಾವವಿಲ್ಲದಂತೆ ನ್ಯಾಯವನ್ನು ಪಡೆಯಬೇಕು ಎನ್ನುವುದು ದೇಶದ ಸರ್ವೋಚ್ಛ ನ್ಯಾಯಾಲಯದ ಮಹದಾಸೆಯಾಗಿದೆ. ಆದ್ದರಿಂದ ಬಡಜನರೂ ಕೂಡ ನ್ಯಾಯವನ್ನು ಉಚಿತವಾಗಿ ಪಡೆಯಬೇಕು, ತಮ್ಮ ಸಮಸ್ಯೆಗೆ ನ್ಯಾಯಾಲಯದಲ್ಲಿ ಪರಿಹಾರವನ್ನು ಕಂಡುಕೊಳ್ಳಲು ನ್ಯಾಯಾಲಯವೇ ಉಚಿತವಾಗಿ ವಕೀಲರನ್ನು ನೇಮಿಸಿಕೊಡುವ ಮೂಲಕ ಬಡಜನರ ಸಮಸ್ಯೆಗಳಿಗೂ ಶಾಶ್ವತವಾದ ಪರಿಹಾರವನ್ನು ದೊರಕಿಸಿಕೊಡಲಿದೆ. ಆದ್ದರಿಂದ ನ್ಯಾಯಾಲಯವೇ ಹಳ್ಳಿಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಂದು ಕಾನೂನಿನ ಬಗ್ಗೆ ಅರಿವಿನ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಕಾನೂನಿನ ಪ್ರಕಾರ ಯಾರೂ ಮೇಲು-ಕೀಳಲ್ಲವಾದ್ದರಿಂದ ಎಲ್ಲರಿಗೂ ಸಮಾನವಾಗಿ ನ್ಯಾಯವು ಹಂಚಿಕೆಯಾಗಬೇಕು, ತುಳಿತಕ್ಕೊಳಗಾದ ಬಡವನಿಗೂ ನ್ಯಾಯವು ಸಿಗಲೇಬೇಕು ಎಂಬ ಆಶಯದಿಂದ ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನವನ್ನು ಮೂಡಿಸುವ ಕೆಲಸವನ್ನು ರಾಜ್ಯದ ಉಚ್ಛ ನ್ಯಾಯಾಲಯವು ರಾಜ್ಯಾಧ್ಯಂತ ವಿಶೇಷ ಕಾನೂನು ಅರಿವು ಶಿಬಿರವನ್ನು ಆಯೋಜಿಸಿದೆ. ಬಡಜನರು ಯಾವುದೇ ಅಂಜಿಕೆಯಿಲ್ಲದೇ ಧೈರ್ಯವಾಗಿ ನ್ಯಾಯಾಲಯಕ್ಕೆ ಬಂದು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಹೇಳಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಗ್ರಾಹಕರ ಹಕ್ಕುಗಳು ಮತ್ತು ನಾಗರೀಕರ ಜವಾಬ್ಧಾರಿಗಳನ್ನು ಕುರಿತು ಮಾತನಾಡಿ ಸಾರ್ವಜನಿಕರು ಹಾಗೂ ರೈತಬಾಂಧವರು ತಾವು ಮಾರುಕಟ್ಟೆಯಲ್ಲಿ ಖರೀದಿಸಿದ ವಸ್ತುಗಳಲ್ಲಿ ಗುಣಮಟ್ಟವು ಇಲ್ಲದೇ ಇರುವ ಬಗ್ಗೆ ಖಾತ್ರಿಪಡಿಸಿಕೊಂಡು ಮೋಸಹೋದಾಗ ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಿ ನ್ಯಾಯವನ್ನು ಪಡೆಯಬಹುದಾಗಿದೆ. ರೈತರು ಕೊಳ್ಳುವ ರಸಗೊಬ್ಬರಗಳು, ಭಿತ್ತನೆ ಬೀಜಗಳು ಸೇರಿದಂತೆ ಕೃಷಿ ಹುಟ್ಟುವಳಿಗಳ ಖರೀದಿಯಲ್ಲಿ ಹಾಗೂ ಇಳುವರಿಯಲ್ಲಿ ನಷ್ಠವಾದರೆ ಪರಿಹಾರವನ್ನು ಪಡೆಯಬಹುದಾಗಿದೆ. ಮೋಸದ ಜಾಹಿರಾತುಗಳು, ಕಳಪೆ ಗುಣಮಟ್ಟದ ವಸ್ತುಗಳ ಖರೀದಿಯ ಸಂದರ್ಭದಲ್ಲಿ ಸದಾ ಎಚ್ಚರವಾಗಿರಬೇಕು ಎಂದು ವಕೀಲ ಅನಂತರಾಮಯ್ಯ ಮನವಿ ಮಾಡಿದರು. ವಕೀಲರಾದ ನವೀನಕುಮಾರ್ ಮಾಹಿತಿ ಹಕ್ಕು ಅಧಿನಿಯಮ ಕುರಿತು ಮಾತನಾಡಿ ದೇಶದ ಅಭಿವೃದ್ಧಿಗೆ ಮಾರಕವಾಗಿರು ಭ್ರಷ್ಠಾಚಾರದ ತಡೆಗೆ ಮಾಹಿತಿ ಹಕ್ಕು ಕಾಯ್ದೆಯು ಬ್ರಹ್ಮಾಸ್ತ್ರವಾಗಿದೆ. ಯಾವುದೇ ಇಲಾಖೆಯಲ್ಲಿ ನಡೆದಿರುವ ಆಡಳಿತ ವ್ಯವಹಾರಗಳು ಹಾಗೂ ಅಭಿವೃದ್ಧಿ ಕೆಲಸಕಾರ್ಯಗಳಿಗೆ ಖರ್ಚಾಗಿರುವ ಹಣ ಹಾಗೂ ಕೆಲಸದ ಬಗ್ಗೆ ಅರ್ಜಿಯನ್ನು ಸಲ್ಲಿಸಿ ಸೂಕ್ತವಾದ ಮಾಹಿತಿಯನ್ನು ಪಡೆದುಕೊಂಡು ಯಾವುದೇ ಅಧಿಕಾರಿ ಇಲ್ಲವೇ ಸರ್ಕಾರಿ ನೌಕರರು ತಪ್ಪ ಮಾಡಿರುವುದು ಸೇರಿದಂತೆ ಕರ್ತವ್ಯಲೋಪವೆಸಗಿರುವುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬಹುದು. ಈ ದಿಕ್ಕಿನಲ್ಲಿ ಜನಸಾಮಾನ್ಯರು ಜಾಗೃತರಾಗಿದ್ದು ಮಾಹಿತಿಹಕ್ಕು ಕಾಯ್ದೆಯನ್ನು ಸದ್ಭಳಕೆ ಮಾಡಿಕೊಂಡು ಭ್ರಷ್ಠ ಅಧಿಕಾರಿಗಳನ್ನು ಬಗ್ಗುಬಡಿಯಲು ಮುಂದಾಗಬೇಕು ಎಂದು ಮನವಿ ಮಾಡಿದರು. ಮಂಡ್ಯ ಜಿಲ್ಲಾ ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಹಾಗೂ ಜಂಟಿ ನಿರ್ದೇಶಕರಾದ ಟಿ.ಎ.ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಜನಸಾಮಾನ್ಯರು ಕಾನೂನಿನ ಬಗ್ಗೆ ಅರಿವನ್ನು ಮೂಡಿಸಿಕೊಂಡು ಜಾಗೃತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು. ಪಟ್ಟಣದ ಜೆಎಂಎಫ್‌ಸಿ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜಪ್ಪತುಳಸಪ್ಪನಾಯಕ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಎಪಿಎಂಸಿ ಅಧ್ಯಕ್ಷೆ ಮಾಲತಿಬಸವೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಡಿ.ಆರ್.ಮೋಹನ್, ವಕೀಲರಾದ ಎಂ.ವಿ.ಪ್ರಭಾಕರ್, ಎಂ.ಎಲ್.ವಾಣಿ, ಎಪಿಎಂಸಿ ಕಾರ್ಯದರ್ಶಿ ರಫೀಕ್‌ಅಹಮದ್, ವ್ಯವಸ್ಥಾಪಕ ಸತೀಶ್, ಪಿಎಲ್‌ಡಿ ಬ್ಯಾಂಕಿನ ಮಾಜಿಅಧ್ಯಕ್ಷ ಕೆ.ಎಸ್.ಬಸವೇಗೌಡ, ಚನ್ನಕೇಶವ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಗೂಡೆಹೊಸಳ್ಳಿ ಜವರಾಯಿಗೌಡ ಸೇರಿದಂತೆ ನೂರಾರು ರೈತರು, ವ್ಯಾಪಾರಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ ,