ಆಡುವ, ವಯಸ್ಸಲ್ಲಿ ಪುಸ್ತಕ ಹಿಡಿದು ಸಾಧನೆ ಮಾಡಿದ ಮುದ್ದು ಕಂದ…!
ಇದು ಸ್ಪರ್ಧಾತ್ಮಕ ಜಗತ್ತು, ಇಂದಿನ ದಿನಗಳಲ್ಲಿ ದೇಶಾದ್ಯಂತ ಬಹಳಷ್ಟು ಮಂದಿ ಕೆಎಎಸ್, ಐಎಎಸ್, ಐಪಿಎಸ್ನಂತ ಸ್ಪಧಾತ್ಮಕ ಪರೀಕ್ಷೆಗಳನ್ನು ಬರೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಇಂತಹ ಪರೀಕ್ಷೆಗಳನ್ನು ಬರೆಯುವ ಮುನ್ನ ಅದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗಾಗೇ ಸಾಕಷ್ಟು ತರಬೇತಿ ಕೇಂದ್ರಗಳು ಕೆಲಸ ಮಾಡುತ್ತಿವೆ. ಈ ತರಬೇತಿ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಎಲ್ಲಾ ತರಬೇತಿ ನೀಡಲಾಗುತ್ತದೆ. ನಿಮ್ಮ ಐಕ್ಯೂ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ಈ ಐಕ್ಯೂ ಅಥವಾ ಇಂಟಲಿಜೆಂಟ್ ಕೋಶಿಯಂಟ್ ಎನ್ನುವುದು ಕೆಲವರಿಗೆ ನೈಸರ್ಗಿಕವಾಗಿ ಬಂದಿರುತ್ತದೆ. ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸಿದ ಭೌತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಹೆಸರನ್ನು ನೀವೆಲ್ಲಾ ಕೇಳಿರುತ್ತೀರಿ. ಮತ್ತೊಬ್ಬ ಭೌತವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ ಹೆಸರನ್ನು ಕೂಡಾ ನೀವು ಕೇಳಿರುತ್ತೀರಿ. ಇವರ ಐಕ್ಯೂ ಸಾಮಾನ್ಯ ಮನುಷ್ಯನ ಐಕ್ಯೂಗಿಂತ ಬಹಳಷ್ಟು ಪಟ್ಟು ಹೆಚ್ಚಾಗಿತ್ತು. ಆ ಕಾರಣದಿಂದಲೇ ಇವರಿಬ್ಬರೂ ಖ್ಯಾತ ಭೌತವಿಜ್ಞಾನಿಗಳಾಗಿ ಗುರುತಿಸಿಕೊಂಡರು. ಈ ರೀತಿ ಐಕ್ಯೂ ಮಟ್ಟ ಇರುವುದು ಲಕ್ಷಕ್ಕೊಬ್ಬರಲ್ಲಿ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಈ ವಿಡಿಯೋದಲ್ಲಿರುವ ಮಗು ಹೆಸರು ಸಾತ್ವಿಕ ರಾಜೇಶ್. ಬೆಂಗಳೂರು ನಿವಾಸಿಗಳಾದ ರಾಜೇಶ್ ಹಾಗೂ ಪದ್ಮ ದಂಪತಿಯ ಪುತ್ರಿ. ಈ ಮಗುವಿಗೆ ಈಗ 1.7 ವರ್ಷ. 2 ತಿಂಗಳ ಹಿಂದೆ, ಅಂದರೆ 1.5 ವರ್ಷದವಳಿರುವಾಗ ಈ ಮಗು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. ಗೊಂಬೆಗಳನ್ನು ಹಿಡಿದು ಆಡುವ ವಯಸ್ಸಿನಲ್ಲಿ ಕೈಯಲ್ಲಿ ಪುಸ್ತಕ ಹಿಡಿದು ಅಮ್ಮನ ಬಳಿ ಪಾಠ ಹೇಳಿಕೊಡುವಂತೆ ಕೇಳುತ್ತಿದೆ ಈ ಮಗು. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಮಕ್ಕಳು ಆಗ ತಾನೇ ಮಾತನಾಡಲು ಆರಂಭಿಸಿರುತ್ತವೆ. ಆದರೆ ಸಾತ್ವಿಕ ಈಗಲೇ ಸ್ಪಷ್ಟವಾಗಿ ಮಾತನಾಡುತ್ತಾಳೆ. ಸಾತ್ವಿಕ ಹುಟ್ಟಿದ್ದು 12 ಜುಲೈ 2019. ಈ ಮಗು ಇಷ್ಟು ಚಿಕ್ಕ ವಯಸ್ಸಿಗೆ 15 ವಿವಿಧ ರಾಷ್ಟ್ರಿಯ ಚಿಹ್ನೆಗಳು, 9 ರೀತಿಯ ಆಕೃತಿಗಳು, 9 ದೇಶಗಳ ಧ್ವಜಗಳು, 8 ರೀತಿಯ ಪಕ್ಷಿಗಳು, 7 ರೀತಿಯ ಬಣ್ಣಗಳು, ಮನುಷ್ಯನ ಅಂಗಾಂಗಳು, 8 ರೀತಿಯ ತರಕಾರಿಗಳು, ಹಣ್ಣುಗಳು, 9 ರೀತಿಯ ವಾಹನಗಳನ್ನು ಗುರುತಿಸುತ್ತಾಳೆ. ಅಷ್ಟೇ ಅಲ್ಲ, 12 ರೀತಿಯ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತಾಳೆ. ಈಕೆಯ ಬುದ್ಧಿವಂತಿಕೆಗೆ ಮಕ್ಕಳ ವೈದ್ಯರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಮಗುವಿನ ತಾಯಿ ಪದ್ಮ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಕೆ 2019 ರಲ್ಲಿ ಹೆರಿಗೆ ರಜೆ ಪಡೆದು ತಾಯಿ ಮನೆಗೆ ತೆರಳಿದ್ದಾರೆ. ಸಾತ್ವಿಕ ಹುಟ್ಟಿದ ನಂತರ 8 ತಿಂಗಳ ಹೆರಿಗೆ ರಜೆ ಮುಗಿದು ಶಾಲೆಗೆ ಹೋಗಬೇಕು ಎನ್ನುವಷ್ಟರಲ್ಲಿ ಕೊರೊನಾ ಲಾಕ್ಡೌನ್ ಕಾರಣದಿಂದ ಮನೆಯಲ್ಲೇ ಉಳಿದು ಆನ್ಲೈನ್ ತರಬೇತಿ ಮಾಡಬೇಕಾಗಿ ಬಂತು. ಆನ್ಲೈನ್ ತರಗತಿ ವೇಳೆ ಅಮ್ಮ, ಇತರ ಮಕ್ಕಳಿಗೆ ಹೇಳಿಕೊಡುತ್ತಿದ್ದ ಪಾಠವನ್ನು ಸಾತ್ವಿಕ ಕೂಡಾ ಕಲಿತಳು. ಮಗಳ ಬುದ್ಧಿವಂತಿಕೆ ನೋಡಿ ಸಂತೋಷಪಟ್ಟ ಪದ್ಮ, ಆಕೆಗೆ ಮತ್ತಷ್ಟು ಕಲಿಸಲು ಮುಂದಾಗಿದ್ದಾರೆ. ಆಶ್ವರ್ಯ ಎಂದರೆ ಈ ಮಗು ಒಂದೆರಡು ಬಾರಿ ಹೇಳಿಕೊಡುತ್ತಿದ್ದಂತೆ ಎಲ್ಲಾ ಪಾಠವನ್ನೂ ಕಲಿತಿದೆ. ಇಷ್ಟು ಪುಟ್ಟ ವಯಸ್ಸಿಗೆ ಆ ಮಗುವಿನ ತಲೆಯಲ್ಲಿ ಇಷ್ಟೆಲ್ಲಾ ಬಲವಂತವಾಗಿ ಹೇರುವುದು ಬೇಡ ಎಂದು ಪದ್ಮ ಹಾಗೂ ಪತಿ ರಾಜೇಶ್ ಅಂದುಕೊಂಡರೂ ಸಾತ್ವಿಕ ಮಾತ್ರ ಪುಸ್ತಕ ಹಿಡಿದು ಅಮ್ಮನ ಬಳಿ ಬರುತ್ತಿದ್ದಳಂತೆ. ಇದರ ಫಲವೇ ಈ ಮಗು ಇಷ್ಟು ಚಿಕ್ಕ ವಯಸ್ಸಿಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಲು ಸಾಧ್ಯವಾಯ್ತು. ಭವಿಷ್ಯದಲ್ಲಿ ನನ್ನ ಮಗಳು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಆಕೆಗೆ ಪ್ರೋತ್ಸಾಹ ನೀಡುತ್ತೇವೆ ಎನ್ನುತ್ತಾರೆ ಸಾತ್ವಿಕ ಪೋಷಕರು. ಒಟ್ಟಿನಲ್ಲಿ ಆಡುವ, ನಿದ್ರೆ ಮಾಡುವ ವಯಸ್ಸಿನಲ್ಲಿ ಈ ಮಗು ಇಷ್ಟು ಸಾಧನೆ ಮಾಡಿದ್ದಾಳೆ ಎಂದರೆ ಮುಂದಿನ ದಿನಗಳಲ್ಲಿ ಮತ್ತೆಷ್ಟು ಸಾಧನೆ ಮಾಡಬಹುದು ನೀವೇ ಊಹಿಸಿ. ಈ ಮಗುವಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸೋಣ.
ವರದಿ – ಸಂಪಾದಕೀಯ