ವಿಧಾನಸೌಧದ ಮೆಟ್ಟಿಲುಗಳ ಮೇಲೆ ಲಕ್ಷ ಕಂಠಗಳಲ್ಲಿ ಮೊಳಗಿದ ಗೀತ ಗಾಯನ…
ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶಿಷ್ಠವಾಗಿ ಆಚರಿಸುತ್ತಿದ್ದು, ರಾಜ್ಯೋತ್ಸವಕ್ಕೆ ನಾಲ್ಕು ದಿನ ಮೊದಲೇ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಕನ್ನಡ ಕಲರವ ವಿಶ್ವಾದ್ಯಂತ ಮೇಳೈಸುವಂತೆ ಮಾಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು. ಸಾವಿರಾರು ಗಾಯಕರು, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಕನ್ನಡದ ಪ್ರಸಿದ್ದ ಮೂರು ಗೀತೆಗಳಾದ ’ಕನ್ನಡ ನಾಡಲ್ಲಿ ಹುಟ್ಟಬೇಕು’, ’ಬಾರಿಸು ಕನ್ನಡ ಡಿಂಡಿಮವ’, ’ಜೋಗದ ಸಿರಿ ಬೆಳಕಿನಲ್ಲಿ’ ಹಾಡುಗಳಿಗೆ ದ್ವನಿಯಾದರು. ಈ ಮೂಲಕ ನಾಡಿನಾದ್ಯಂತ 5 ಲಕ್ಷ ಕಠಗಳ ಸಾಮೂಹಿಕ ಗೀತ ಗಾಯನಕ್ಕೆ ಚಾಲನೆ ದೊರೆತಿದೆ. ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲೂ ಕನ್ನಡ ಕಲರವ ಮೇಳೈಸಲಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣ, ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲೂ ಸಹಸ್ರ ಕಂಠ ಗೀತ ಗಾಯನ ನಡೆಯಲಿದೆ. ಇನ್ನು ಬೆಂಗಳೂರಿನ ಮೆಟ್ರೋದ ಎಲ್ಲಾ ರೈಲು ನಿಲ್ದಾಣಗಳಲ್ಲಿಯೂ ಸುಗಮ ಸಂಗೀತ ಗಾಯನ ತಂಡಗಳು ಗೀತ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ.
ವರದಿ – ಸೋಮನಾಥ ಹೆಚ್.ಎಮ್.