ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ, ಸೂತ್ರವ ಹರಿದ… ಬೊಂಬೆಯ ಮುರಿದ… ಮಣ್ಣಾಗಿಸಿದ :- ಪುನೀತ ರಾಜಕುಮಾರ…
ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ, ಸೂತ್ರವ ಹರಿದ… ಬೊಂಬೆಯ ಮುರಿದ… ಮಣ್ಣಾಗಿಸಿದ, ಎನ್ನುವ ಮಾತುಗಳು ಸಧ್ಯ ನೆನಪಿಗೆ ಬರುತ್ತಿವೆ. ಯಾಕೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟ, ನಾಡು ಕಂಡ ಅಪ್ರತಿಮ ಶ್ರೇಷ್ಠ ನಾಯಕ ನಟನಾಗಿ ಮಿಂಚಿ, ಸಮಸ್ತ ಕನ್ನಡಿಗರ ಹೃದಯ ಗೆದ್ದ, ಕೋಟ್ಯಾಂತರ ಅಭಿಮಾನಿಗಳ ಹೃದಯದ ಸಿಂಹಾಸನಾಧೀಶ್ವರರಾಗಿ ಮರೆದ ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ ಇನ್ನಿಲ್ಲ ಎಂಬ ಅಗಲಿಕೆಯ ನೋವು, ಇಡೀ ಕರ್ನಾಟಕಕ್ಕೆ ಬರಸಿಡಿಲು ಬಡಿದಂತಾಗಿದೆ. ಮಾತುಗಳು ಬಾರದೆ ಮೌನವಾಗಿವೆ.ಮನಸ್ಸು ಭಾರವಾಗಿದೆ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ ಮಗನಾಗಿ 17 ಮಾರ್ಚ್,1975 ಜನಿಸಿದರು. ರಾಜಕುಮಾರ್ ದಂಪತಿಯ ಕಿರಿಯ ಮಗ. ಪುನೀತರ ಮೊದಲ ಹೆಸರು ಲೋಹಿತವಾಗಿತ್ತು. ಚಿತ್ರರಂಗ ಪ್ರವೇಶ ಪಡೆದ ನಂತರ ಪುನೀತ್ ರಾಜಕುಮಾರ ಆದರು.ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ರಾಜಕುಮಾರ ರವರು ಅಶ್ವಿನಿ ರೇವಂತ್ ರನ್ನು ವಿವಾಹವಾಗಿದ್ದಾರೆ.ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ದ್ರಿತಿ ಮತ್ತು ವಂದಿತಾ. ಇವರು ಪ್ರಾಥಮಿಕವಾಗಿ ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿರುತ್ತಾರೆ . ಹಲವು ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದಿವೆ. ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಮೊದಲ ಪ್ರಮುಖ ಪಾತ್ರ 2002 ರಲ್ಲಿ ಅಪ್ಪು ಅಭಿನಯಿಸಿದ ನಂತರ, ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿ ಜನರಿಂದ ಅಪಾರ ಮನ್ನಣೆ, ಗೌರವ, ಖ್ಯಾತಿಯನ್ನು ಪಡೆದಿದ್ದಾರೆ. ಹೀಗೆ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ ಮೇರು ನಟ, ವಿಶಾಲ ದೂರದೃಷ್ಟಿ ಹೃದಯವಂತ, ನೊಂದವರ ನೆರವಿಗಾಗಿ ಧಾವಿಸಿ ಅದೆಷ್ಟೋ ಹಿರಿಯರಿಗೆ, ಮಕ್ಕಳಿಗೆ ಆಶ್ರಯ ನೀಡಿ, ನಿತ್ಯ ನಿರಂತರವಾಗಿ ದಾಸೋಹ ಸೇವೆ ಸಲ್ಲಿಸಿ, ಎಲ್ಲರಿಂದಲೂ ಸೈ ಎನಿಸಿಕೊಂಡ ಪುನೀತ್ ರಾಜಕುಮಾರ್ ನಿಸ್ವಾರ್ಥ ಸೇವೆ ಅಜರಾಮರ ಎಂದರೆ ತಪ್ಪಾಗಕಿಲ್ಲ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಉತ್ತಮ ಸಾಧನೆ ಮಾಡಿ ಯುವಕರಿಗೆ ಸ್ಫೂರ್ತಿಯಾಗಿ, ಅನೇಕ ಸಾಮಾಜಕ ಜನೋಪಯೋಗಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ತನ್ನದೇಯಾದ ವಿಶೇಷ ಕೊಡುಗೆ ನೀಡಿ,ಜನಮಾನಸದಲ್ಲಿ ನೆಲೆ ನಿಂತ ಕರುನಾಡಿನ ಕುವರ. ಕನ್ನಡ ನಾಡು ನುಡಿ ಜಲ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡಿದ, ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಎಷ್ಟೋ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದ. ಶ್ರೀಮಂತ ಇದ್ದರೂ ಅಹಂ ತೋರದೆ ಸರಳ ವ್ಯಕ್ತಿತ್ವ ಹೊಂದಿದ್ದ.ದೊಡ್ಮನೆ ಹುಡಗ, ನಟಸಾರ್ವಭೌಮ,ವೀರ ಕನ್ನಡಿಗನಾಗಿ, ಕರುನಾಡನ್ನು ಪ್ರೀತಿಸಿದ. ಕನ್ನಡದ ಕೋಟ್ಯಾಧಿಪತಿಯಾಗಿ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಹಿರಿಯರು, ಕಿರಿಯರೆನ್ನದೆ ಎಲ್ಲರನ್ನೂ ಅತ್ಯಂತ ಗೌರವಯುತವಾಗಿ ಕಾಣುತ್ತಿದ್ದ ನಾಯಕ ಎಂದರೆ ತಪ್ಪಾಗಲಾರದು.ಬಾಲ ನಟರಾಗಿ, ನಾಯಕ ನಟರಾಗಿ, ಗಾಯಕರಾಗಿ, ದೂರದರ್ಶನದ ನಿರೂಪಕರಾಗಿ, ಅಪಾರ ಜನ ಮನ್ನಣೆ ಗಳಿಸಿದ ಪುನೀತ್ ರಾಜ್ ಕುಮಾರ ಅಗಲಿಕೆ ಕನ್ನಡ ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ. ಬೆಟ್ಟದ ಹೂ, ಪ್ರೇಮದ ಕಾಣಿಕೆ, ರಾಜಕುಮಾರ, ಮಿಲನ, ಯುವರತ್ನ ಹೀಗೆ ನೂರಾರು ಸಿನಿಮಾಗಳಲ್ಲಿ ನಟನೆ ಮಾಡಿ, ವಿವಿಧ ಪಾತ್ರಗಳಿಗೆ ಜೀವ ತುಂಬುವುದರ ಮೂಲಕ ಅಭಿಮಾನಿಗಳ ಮನದಂಗಳದಲ್ಲಿ ಅಜರಾಮರಾಗಿ ಉಳಿದ ಶ್ರೇಷ್ಠ ನಟನಾಗಿದ್ದಾರೆ.ಎಷ್ಟು ವರ್ಷ ಬದುಕಿದ್ದೇ ಅನ್ನೋದು ಮುಖ್ಯ ಅಲ್ಲ.ಬದುಕಿದ್ದಷ್ಟು ವರ್ಷ, ಹೆಂಗೆ ಬದುಕಿದೆ ಅನ್ನೋದು ಮುಖ್ಯ ಎನ್ನುವುದನ್ನು ನಾಡಿಗೆ ತೋರಿಸಿಕೊಟ್ಟ ಮೇಧಾವಿ ನಟ,ನಿಮ್ಮ ಅಗಲಿಕೆ ಕನ್ನಡ ಚಿತ್ರರಂಗಕಷ್ಟೆ ಅಲ್ಲ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ. ನಿಮ್ಮ ಅಭಿಮಾನಿಗಳು ಹಾಗೂ ನಿಮ್ಮ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿಯನ್ನು ಬಸವಾದಿ ಪ್ರಮಥರು ಕರುಣಿಸಲಿ. ನಮನ : ಅಗಲಿದ ಮಾಹಾಚೇತನಕ್ಕೆ ಭಕ್ತಿಯ ನಮನಗಳು ಸಲ್ಲಿಸುತ್ತೇನೆ.
ವರದಿ – ಸಂಗಮೇಶ ಎನ್ ಜವಾದಿ,