ಗೋಮಾತೆಯನ್ನು ಪೂಜಿಸೋಣ, ಸಂರಕ್ಷಿಸೋಣ ….
ನವೆಂಬರ್ 5, ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸುವ ಬಗ್ಗೆ ಇಲಾಖೆಯ ಎ ಮತ್ತು ಬಿ ದರ್ಜೆಯ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಪೂರ್ವಭಾವಿ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಗೋಪೂಜೆಯನ್ನು ಒಂದು ವ್ಯಾಪಕ ಅಭಿಯಾನದ ರೂಪದಲ್ಲಿ ಕೈಗೊಳ್ಳಲಾಗುವುದು. ಪೂಜೆಗೆ ಅವಶ್ಯವಾಗಿ ದೇಶೀಯ ಗೋವುಗಳನ್ನೇ ಕರೆತರುವ ವ್ಯವಸ್ಥೆಯಾಗಬೇಕು. ಗೋಪೂಜಾ ಅಭಿಯಾನಕ್ಕೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಸಹಾಯ ಪಡೆಯಬಹುದು. ಗೋಪೂಜೆಯಲ್ಲಿ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರೂ ಕೂಡ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ. ಅಭಿಯಾನದಲ್ಲಿ ಸಾರ್ವಜನಿಕರಿಗೆ ಗೋಪೂಜೆಯ ಮಹತ್ವ ಮತ್ತು ಪ್ರತಿ ರೈತ ಕುಟುಂಬದಲ್ಲಿ ಕನಿಷ್ಠ ಒಂದಾದರೂ ದೇಶೀಯ ಗೋವು ಸಾಕುವ ಕುರಿತು ತಿಳಿವಳಿಕೆ ಮೂಡಿಸಬೇಕೆಂದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ತುಷಾರ್ ಗಿರಿನಾಥ್, ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ, ರಾಜ್ಯದ ವಿವಿಧ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ದೇವಾಲಯ ವ್ಯವಸ್ಥಾಪನ ಮಂಡಳಿಗಳ ಕಾರ್ಯದರ್ಶಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ವರದಿ – ಮಹೇಶ ಶರ್ಮಾ