ವಿಕಾಸಸೌಧದಲ್ಲಿ, ಕೇಂದ್ರ ವಕ್ಫ್ ಮಂಡಳಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭಾಗವಹಿಸಿ, ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ವೇಳೆ ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಬಗ್ಗೆ ಮುಜರಾಯಿ ಇಲಾಖೆ ಕೈಗೊಂಡ ಕಾರ್ಯಗಳನ್ನು ಕೇಂದ್ರ ವಕ್ಫ್ ಮಂಡಳಿ ಸದಸ್ಯರು ಶ್ಲಾಘಿಸಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಉತ್ತಮ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ಸದ್ಯದಲ್ಲೇ ವಕ್ಫ್ ಆಸ್ತಿಗಳ ಸರ್ವೇ ಕಾರ್ಯವನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕರ್ನಾಟಕದಲ್ಲಿ ಹೆಚ್ಚಿನ ವಕ್ಫ್ ಆಸ್ತಿಗಳಿರುವುದರಿಂದ ಅವುಗಳ ರಕ್ಷಣೆಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಹೀಗಾಗಿ ಕೇಂದ್ರ ವಕ್ಫ್ ಪರಿಷತ್ ನಿಂದ ಹೆಚ್ಚಿನ ಅನುದಾನ ನೀಡಿದ್ದಲ್ಲಿ, ರಾಜ್ಯದ ಪಾಲಿನ ಅನುದಾನದೊಂದಿಗೆ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ವಕ್ಫ್ ಇಲಾಖೆಗೆ ಇನ್ನಷ್ಟು ಅನುದಾನ ನೀಡಲು ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರ ವಕ್ಫ್ ಪರಿಷತ್ ಸದಸ್ಯರಾದ ಶ್ರೀ ನೌಶದ್, ಶ್ರೀ ರಯಾಸ್ ಖಾತ್ ಪಠಾಣ್, ಶ್ರೀಮತಿ ಮಸ್ವಾರಿ ಬೇಗಂ, ಶ್ರೀ ಅನೀಫ್ ಅಲಿ, ಡಾ. ದಾರಾಕ್ಷನ್ ಅಂದ್ರಾಬಿ, ಕರ್ನಾಟಕ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಯೂಸುಫ್ ಹಾಗೂ ಇತರೆ ಸದಸ್ಯರು ಹಾಜರಿದ್ದರು. ವರದಿ – ಮಹೇಶ ಶರ್ಮಾ