ಬಿಹಾರ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ರಕರ್ತನ ಶವ ಪತ್ತೆ…..
ನಾಲ್ಕು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 22 ವರ್ಷದ ಪತ್ರಕರ್ತ ಮತ್ತು ಆರ್‌ಟಿಐ ಕಾರ್ಯಕರ್ತನ ಮೃತದೇಹವು ಸುಟ್ಟು ಕರುಕಲಾದ ಸ್ಥಿತಿಯಲ್ಲಿ, ಬಿಹಾರದ ಮಧುಬನಿ ಜಿಲ್ಲೆಯ ಹಳ್ಳಿಯೊಂದರ ರಸ್ತೆಯ ಪಕ್ಕದಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ. ಸಾವನ್ನಪ್ಪಿರುವ ಬುದ್ದಿನಾಥ್ ಝಾ ಅಲಿಯಾಸ್ ಅವಿನಾಶ್ ಝಾ, ಸ್ಥಳೀಯ ಸುದ್ದಿ ವೆಬ್‌ಸೈಟ್‌ನಲ್ಲಿ ಪರ್ತಕರ್ತರಾಗಿದ್ದರು. ಆರ್‌ಟಿಐ ಕಾರ್ಯಕರ್ತರು ಆಗಿದ್ದ ಬುದ್ದಿನಾಥ್, ನಕಲಿ ಕ್ಲಿನಿಕ್‌ಗಳ ಕುರಿತು ಸರಣಿ ವರದಿ ಮಾಡಿದ್ದರು. ಕ್ಲಿನಿಕ್‌ಗಳ ಬಗ್ಗೆ ಸುದ್ದಿ ಮಾಡದಂತೆ ಅವರಿಗೆ ಹಲವಾರು ಬಾರಿ ಬೆದರಿಕೆ ಕರೆಗಳು ಬಂದಿದ್ದವು ಹಾಗೂ ಲಂಚ ನೀಡುವುದಾಗಿ ಆಮಿಷ ಒಡ್ಡಿದ್ದರು. ಇವೆಲ್ಲವನ್ನು ತಿರಸ್ಕರಿಸಿದ್ದ ಅವರು ಕ್ಲಿನಿಕ್‌ಗಳ ಬಗ್ಗೆ ವಸ್ತುನಿಷ್ಠವಾದ ವರದಿಗಳನ್ನು ಮಾಡಿದ್ದರು. ಅವರು ಕಾಣೆಯಾಗುವ ಮೊದಲು ಕೂಡ ಫೇಸ್‌ಬುಕ್‌ನಲ್ಲಿ ಅಲ್ಲಿನ ಸ್ಥಳೀಯ ಎರಡು ಕ್ಲಿನಿಕ್‌ಗಳು ‘ನಕಲಿ’ ಎಂದು ಆರೋಪಿಸಿ ಪೋಸ್ಟ್ ಒಂದನ್ನು ಅಪ್‌ಲೋಡ್ ಮಾಡಿದ್ದರು. ಇದಾದ ಎರಡು ದಿನಗಳ ನಂತರ ಅವರು ಕಣ್ಮರೆಯಾಗಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಬುದ್ದಿನಾಥ್ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿರುವುದಾಗಿ ಅವರ ಮನೆಯ ಹತ್ತಿರದ ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿದೆ. ರಾತ್ರಿ 9 ರಿಂದ ಹಲವಾರು ಬಾರಿ ಕಿರಿದಾದ ಓಣಿಯಲ್ಲಿರುವ ತನ್ನ ಮನೆಯಿಂದ ಹೊರಗೆ ಬರುವುದು ಮತ್ತು ಹತ್ತಿರದ ಮುಖ್ಯ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಕೊನೆಯ ಬಾರಿಗೆ ಅವರು ರಾತ್ರಿ 9.58 ಕ್ಕೆ ಕುತ್ತಿಗೆಗೆ ಹಳದಿ ಸ್ಕಾರ್ಫ್ ಧರಿಸಿ ಮನೆಯಿಂದ ಹೊರಟಿರುವುದಾಗಿ ಸಿಸಿಟಿವಿ ಫೂಟೇಜ್‌ನಲ್ಲಿದೆ. ‘ಅವರ ಬೈಕ್ ಇನ್ನೂ ಮನೆಯಲ್ಲಿಯೇ ಇತ್ತು. ಲ್ಯಾಪ್‌ಟಾಪ್ ಕೂಡ ಆನ್ ಆಗಿತ್ತು. ಬುದ್ದಿನಾಥ್ ಅವರು ಮಂಗಳವಾರ ತಡರಾತ್ರಿ ಅಥವಾ ಬುಧವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ವಾಪಸ್ ಬರುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಅವನು ಹಿಂತಿರುಗಲಿಲ್ಲ ಎಂದಿರುವ ಅವರ ಕುಟುಂಬದವರು, ಒಂದು ದಿನವಾದರೂ ಅವರು ಮನೆಗೆ ಹಿಂದಿರುಗದೇ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಬೆನಿಪಟ್ಟಿಯಿಂದ ಪಶ್ಚಿಮಕ್ಕೆ ಸುಮಾರು 5 ಕಿ.ಮೀ ದೂರದಲ್ಲಿರುವ ಬೇಟೌನ್ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಗೆ ಬುದ್ದಿನಾಥ್ ಅವರ ಫೋನ್ ಸ್ವಿಚ್ ಆನ್ ಮಾಡಿರುವುದು ಪತ್ತೆಯಾಗಿದೆ. ಮೊಬೈಲ್ ಟ್ಯ್ರಾಕ್ ಮಾಡುತ್ತಿದ್ದ ಪೊಲೀಸರು ಆ ಸ್ಥಳಕ್ಕೆ ಧಾವಿಸಿದ್ದರು. ಆದರೆ ಯಾವುದೇ ಸುಳಿವು ಸಿಗದೇ ಹಿಂದಿರುಗಿದ್ದರು. ಶುಕ್ರವಾರ, ನವೆಂಬರ್ 12 ರಂದು, ಬುದ್ದಿನಾಥ್ ಅವರ ಸೋದರ ಸಂಬಂಧಿ ಬೆಟೌನ್ ಗ್ರಾಮದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ಶವ ಪತ್ತೆಯಾಗಿದೆ ಎಂದು ಮಾಹಿತಿ ಪಡೆದರು. ಕೆಲ ಸಂಬಂಧಿಕರು ಮತ್ತು ಅಧಿಕಾರಿಗಳು ಅಲ್ಲಿಗೆ ಧಾವಿಸಿದ್ದು, ಬೆರಳಿನಲ್ಲಿದ್ದ ಉಂಗುರ, ಕಾಲಿನ ಗುರುತು ಹಾಗೂ ಕುತ್ತಿಗೆಯಲ್ಲಿದ್ದ ಸರದಿಂದಾಗಿ ಬುದ್ಧಿನಾಥನ ಶವ ಗುರುತಿಸಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಶವವನ್ನು ತಕ್ಷಣ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ. ವರದಿ – ಉಪ- ಸಂಪಾದಕೀಯ