ತಾವರಗೇರಾ ಪಟ್ಟಣದಲ್ಲಿ ದಲಿತರ ಕುಂದುಕೊರತೆಗಳ ಸಭೆ ನಡೆಯಿತು. ವಲಯ ನಿರೀಕ್ಷಕ ಎನ್ ಆರ್ ನಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ದಲಿತ ಸಮುದಾಯದ ಕುಂದುಕೊರತೆ ನಿವಾರಿಸುವ ಸಲುವಾಗಿ ದಲಿತ ಸಭೆಗಳನ್ನು ನಡೆಸಲಾಗುತ್ತಿದೆ. ದೇವದಾಸಿ ಪದ್ಧತಿ, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಮುಂದಿನ ದಿನಗಳಲ್ಲಿ ಜಾಗೃತಿ ಸಭೆಗಳನ್ನು ದಲಿತ ವಾರ್ಡ್‌ಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ದಲಿತರ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಪಿಐ ಎನ್ ಆರ್ ನಿಂಗಪ್ಪ ಸಭೆಗೆ ಆಗಮಿಸಿದ್ದ ಮಕ್ಕಳಿಗೆ ಮಕ್ಕಳ ದಿನದ ಶುಭಾಶಯಗಳನ್ನು ತಿಳಿಸುವುದರ ಮೂಲಕ ಅಲ್ಲಿದ್ದ ಬಾಲಕರಿಗೆ ಪೆನ್ನು ಪುಸ್ತಕದ ಜೊತೆಗೆ ಸಿಹಿ ಹಂಚುವ ಮೂಲಕ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು. ಭಾನುವಾರ ಪಟ್ಟಣದ ದಲಿತರ ಕಾಲೋನಿಯಲ್ಲಿ ನಡೆದ ಸಭೆಯ ನಂತರ ಅಲ್ಲಿ ಸೇರಿದ್ದ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುತ್ತಾ,ದೇಶ,ವಿದೇಶದ ಪ್ರಸ್ತುತ ವಿದ್ಯಮಾನಗಳ ಕುರಿತು ಅವರೊಂದಿಗೆ ಕೆಲವು ಕ್ಷಣಗಳನ್ನು ಹಂಚಿಕೊಂಡ ಎನ್ ಆರ್ ನಿಂಗಪ್ಪ ಅವರು ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬ ಸದುದ್ದೇಶದಿಂದ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು,ಅದರ ಸೌಲಭ್ಯಗಳನ್ನು ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ಪಿಎಸ್ಐ ವೈಶಾಲಿ ಝಳಕಿ, ಬೆರಳಚ್ಚುಗಾರ ಬಸವರಾಜ ಇಂಗಳದಾಳ, ಸಿಬ್ಬಂದಿ ಗುಂಡಪ್ಪ ಪೂಜಾರಿ,ಕರಿಯಪ್ಪ, ಸೇರಿದಂತೆ ದಲಿತ ಮುಖಂಡರು ಉಪಸ್ಥಿತರಿದ್ದರು.
ವರದಿ – ಸುಭಾಸ ಜುಮಲಾಪೂರ