ಪುನೀತ್ ರಾಜಕುಮಾರ್‌ಗೆ ‘ಕರ್ನಾಟಕ ರತ್ನ’ಪ್ರಶಸ್ತಿ – ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ……
ಬೆಂಗಳೂರು : ಕನ್ನಡ ನಾಡಿನ ಜನರಲ್ಲಿ ಆದರ್ಶಪ್ರಾಯರಾಗಿ ಉಳಿದಿರುವ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಎಸ್ಆರ್ ಬೊಮ್ಮಾಯಿ ತಿಳಿಸಿದ್ದಾರೆ.ಅರಮನೆ ಮೈದಾನದಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ಕಂಡ ಅಪ್ರತಿಮ ಕಲಾವಿದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನ ಚಾಚೂ ತಪ್ಪದೆ ಪಾಲಿಸಿ ಎಲ್ಲರಿಗೂ ಅವರು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು.ಸೂರ್ಯ ಚಂದ್ರ ಇರುವವರೆಗೂ ಪುನೀತ್ ರಾಜಕುಮಾರ್ ಅವರು ಚಿರಸ್ಥಾಯಿಯಾಗಿರುತ್ತಾರೆ ಕರ್ನಾಟಕ ರತ್ನವಾಗಿ ಮಿಂಚುತ್ತಿರುತ್ತಾರೆ ಎಲ್ಲರ ಹೃದಯದಲ್ಲೂ ಅವರು ನೆಲೆಸುತ್ತಾರೆ ಎಂದು ಅವರು ಭಾವುಕರಾಗಿ ನುಡಿದರು.ನಾನು ಬಾಲ್ಯದಿಂದಲೂ ಪುನೀತ್ ರಾಜ್ ಕುಮಾರ್ ಅವರನ್ನು ಕಂಡಿದ್ದೇನೆ ಅವರ ಸರಳತೆ ಅವರ ಸೇವಾ ಗುಣಗಳು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ಡಾಕ್ಟರ್ ರಾಜ್ ತಕ್ಕ ಮಗನಾಗಿ ಆಗಿ ಬೆಳೆದು ಎಲ್ಲರಿಗೂ ಸ್ನೇಹ ಪ್ರೀತಿ ಹಂಚಿ ಹೋದ ಆ ಮಹಾನ್ ವ್ಯಕ್ತಿಯನ್ನು ಚಿರಸ್ಥಾಯಿಯಾಗಿ ಉಳಿಸುವ ಕರ್ತವ್ಯವನ್ನ ನಮ್ಮ ಸರ್ಕಾರ ಮಾಡುತ್ತದೆ ಎಂದು ಅವರು ತಿಳಿಸಿದರು. ಪುನೀತ್ ಅವರ ಅಗಲಿಕೆಯ ನಂತರ ನಲ್ವತ್ತೆಂಟು ಗಂಟೆಗಳ ಕಾಲ ಹರಿದು ಬಂದ ಅಭಿಮಾನಿಗಳ ಜನಸಾಗರ ನಾನು ವರ್ಣಿಸಲು ಅಸಾಧ್ಯ ಅಂದು ನಾನು ಪ್ರೀತಿಯ ಅಪ್ಪು ಕೆನ್ನೆಗೆ ಮುತ್ತಿಟ್ಟಾಗ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ ಆದರೆ ಅದು ನನ್ನ ಹೃದಯದಿಂದ ಬಂದದ್ದು ಎಂದು ಹೇಳಿದರು.