ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದ ಮಾಜಿ ಶಾಸಕರು….
ಸರ್ಕಾರಿ ಶಾಲೆಗೆ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸೇರಿಸುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಬಂದಿರುವುದು ಸಹಜ. ಕುಷ್ಟಗಿ ಮಾಜಿ ಶಾಸಕರೊಬ್ಬರು ತಮ್ಮ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾಗಿದ್ದಾರೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ತಾವು ಕಲಿತ ಸರಕಾರಿ ಶಾಲೆಗೇ ತಮ್ಮ ಮಗನನ್ನು ಸೇರಿಸುವ ಮೂಲಕ ಮಾದರಿಯಾಗಿದ್ದಾರೆ. ದೊಡ್ಡನಗೌಡ ಪಾಟೀಲ್ ಅವರ ಸ್ವಗ್ರಾಮ ಕೊರಡಕೇರಾದಲ್ಲಿ ತಾವು ಕಲಿತ ಸರ್ಕಾರಿ ಶಾಲೆಯಲ್ಲಿ ಅವರ ಮೊದಲ ಪುತ್ರ ಹನುಮಗೌಡ ಪಾಟೀಲ್ ಗೆ 1ನೇ ತರಗತಿಗೆ ಸರಸ್ವತಿ ಪೂಜೆ ನೆರವೇರಿಸಿ ದಾಖಲಿಸಿದರು. ಈ ವೇಳೆ ದೊಡ್ಡನಗೌಡ ಪಾಟೀಲ ಪ್ರತಿಕ್ರಿಯಿಸಿ, ನಮಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದು, ಮೊದಲ ಮಗ ಹನುಮಗೌಡ ಪಾಟೀಲ್ ಗೆ 6 ವರ್ಷ ತುಂಬಿದ್ದರಿಂದ 1ನೇ ತರಗತಿಗೆ ದಾಖಲಿಸಿದ್ದೇನೆ. ಮುಂದೆ ಇನ್ನಿಬ್ಬರು ಮಕ್ಕಳನ್ನೂ ದಾಖಲಿಸುವೆ ಎಂದರು.
ವರದಿ – ಉಪ-ಸಂಪಾದಕೀಯ