2020 ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿಗೆ ಅರವಿಂದ ಜತ್ತಿ ಅವರು ಆಯ್ಕೆ ……
ಬಾಲ್ಕಿ: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊಟ್ಟಮೊದಲ ಸಂಸತ್ತು ಆಗಿರುವುದು ಸಮಸ್ತ ಭಾರತೀಯರಿಗೆ ಅಭಿಮಾನದ ಸಂಗತಿಯಾಗಿದೆ. ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಸಮಸಮಾಜವನ್ನು ನಿರ್ಮಾಣ ಮಾಡಿದರು. ಜಾತಿ, ವರ್ಣ, ವಂಶ, ವರ್ಗ, ಲಿಂಗ ಮುಂತಾದ ಯಾವುದೇ ಭೇದವಿಲ್ಲದೆ ಸಕಲ ಜಿವಾತ್ಮರ ಲೇಸನ್ನೆ ಬಯಸುವ ಕಲ್ಯಾಣ ರಾಜ್ಯ ಕಟ್ಟಿದರು. ಬಸವಾದಿ ಶರಣರ ಅನುಭವಮಂಟಪ ಸಂಸ್ಕೃತಿಗೆ ಮರುಜೀವ ತುಂಬಿರುವ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ “ಡಾ.ಚನ್ನಬಸವ ಪಟ್ಟದ್ದೇವರ ಅನುಭವಮಂಟಪ ಪ್ರಶಸ್ತಿ” ಯನ್ನು ಕಳೆದು 20 ವರ್ಷಗಳಿಂದ ಪ್ರತಿವರ್ಷ ವಿಶ್ವಬಸವಧರ್ಮ ಟ್ರಸ್ಟ ವತಿಯಿಂದ ನೀಡುತ್ತಾ ಬಂದಿದ್ದೇವೆ. ಈ ಪ್ರಶಸ್ತಿಯನ್ನು ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. 2020 ರ ಈ ಪ್ರಶಸ್ತಿಯನ್ನು ಬೆಂಗಳೂರಿನ ಬಸವಸಮಿತಿಯ ಅಧ್ಯಕ್ಷರಾದ ಶರಣ ಶ್ರೀ ಅರವಿಂದ ಜತ್ತಿ ಅವರಿಗೆ ಆಯ್ಕೆ ಮಾಡಲಾಗಿದೆ. ಶರಣ ಶ್ರೀ ಅರವಿಂದ ಜತ್ತಿ ಅವರು ಬಸವ ಸಮಿತಿಯ ಮೂಲಕ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬಸವಾದಿ ಶರಣರ ತತ್ವಾದರ್ಶಗಳನ್ನು ಪ್ರಸಾರ ಮಾಡುವ ಚರಜಂಗಮರಾಗಿದ್ದಾರೆ. ವಿಶೇಷವಾಗಿ ಬಹುಭಾಷಾ ವಚನ ಅನುವಾದ ಯೋಜನೆಯ ಅಡಿಯಲ್ಲಿ ದೇಶದ 26 ಭಾಷೆಗಳಲ್ಲಿ ವಚನ ಗ್ರಂಥವನ್ನು ಪ್ರಕಟಿಸಿದ್ದು ಒಂದು ಐತಿಹಾಸಿಕ ಕಾರ್ಯವಾಗಿದೆ. ಅಷ್ಟೇ ಅಲ್ಲದೆ ಎಂಟು ವಿದೇಶಿ ಭಾಷೆಗಳಲ್ಲಿಯೂ ವಚನ ಅನುವಾದ ಕಾರ್ಯ ಪೂರೈಸುತ್ತಿದ್ದಾರೆ. ದೇಶದ ಏಳು ಭಾಷೆಗಳಲ್ಲಿ ಮಾಸಪತ್ರಿಕೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ವಚನ ವ್ಯಕ್ತಿತ್ವ ವಿಕಸನ ಎಂಬ ನೂತನ ಕಾರ್ಯಕ್ರಮದ ಮೂಲಕ ಯುವಕರಲ್ಲಿ ಬಸವತತ್ವದ ಬೀಜವನ್ನು ಬಿತ್ತುತ್ತಿದ್ದಾರೆ. ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ದೇಶ-ವಿದೇಶದ ಪ್ರಜ್ಞಾವಂತ ನಾಗರಿಕರಿಗೆ ಬಸವಾದಿ ಶರಣರ ವಿಚಾರಧಾರೆಯನ್ನು ಮುಟ್ಟಿಸುವ ಕಾರ್ಯವನ್ನು ನಿರಂತರವಾಗಿ ಶರಣ ಅರವಿಂದ ಜತ್ತಿ ಅವರು ಮುನ್ನಡೆಸುತ್ತಿದ್ದಾರೆ. ಅವರ ಸಮಗ್ರ ಸೇವೆಯನ್ನು ಗುರುತಿಸಿ, 2020 ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಅನುಭವಮಂಟಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ದಿ: 28-11-2021 ರಂದು ಬಸವಕಲ್ಯಾಣದಲ್ಲಿ ನಡೆಯುವ ಅನುಭವಮಂಟಪ ಉತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ – ಸಂಗಮೇಶ ಎನ್ ಜವಾದಿ.